ADVERTISEMENT

ಸರ್ಕಾರದ ಆದೇಶ ಉಲ್ಲಂಘಿಸಿ ಜಮೀನು ಮಾರಾಟ: ಶಾಸಕರ ಪುತ್ರ ಅಭಿಷೇಕ್‌ ವಿರುದ್ಧ ಆರೋಪ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 14:07 IST
Last Updated 3 ಮಾರ್ಚ್ 2024, 14:07 IST
ಕೃಷ್ಣಾರೆಡ್ಡಿ
ಕೃಷ್ಣಾರೆಡ್ಡಿ   

ಕಲಬುರಗಿ: ‘ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಪುತ್ರ ಅಭಿಷೇಕ್‌ ಪಾಟೀಲ ಅವರು ನಗರದ ಬಡೇಪುರ ಗ್ರಾಮದ ಸರ್ವೆ ನಂಬರ್‌ 61/3ರಲ್ಲಿರುವ ತಮ್ಮ ಎನ್‌ಎ ಮಾಡಿದ ಎರಡು ಎಕರೆ ಭೂಮಿಯನ್ನು ಸರ್ಕಾರಕ್ಕೆ ಮುದ್ರಾಂಕ ಶುಲ್ಕ ಪಾವತಿಸದೇ ಮಾರಾಟ ಮಾಡಿದ್ದಾರೆ’ ಎಂದು ಜೆಡಿಎಸ್‌ ಮುಖಂಡ ಕೃಷ್ಣಾರೆಡ್ಡಿ ಆರೋಪಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರದ ಆದೇಶವನ್ನು ಉಲ್ಲಂಘಿಸಿ ನೋಂದಣಿ ಮಾಡಿದ್ದಾರೆ. ಇದಕ್ಕೆ ಕಾರಣರಾದ ಉಪನೋಂದಣಿ ಅಧಿಕಾರಿ ಹಾಗೂ ಖರೀದಿ ಮಾಡಿದ ನಾಲ್ವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ಸರ್ಕಾರವನ್ನು ಆಗ್ರಹಿಸಿದರು.

2013ರಲ್ಲಿ ಕೃಷಿಯೇತರ ಉದ್ದೇಶದಿಂದ ಶಾಸಕರ ಪುತ್ರ ಜಮೀನು ಖರೀದಿ ಮಾಡಿದ್ದಾರೆ. ಆಗ ಒಂದು ವರ್ಷದ ಅವಧಿಯಲ್ಲಿ ಬಡಾವಣೆ ಅಭಿವೃದ್ಧಿ ಮಾಡಬೇಕು ಇಲ್ಲವಾದರೆ ಕೃಷಿಯೇತರ ಭೂಮಿ ಆದೇಶ ರದ್ದಾಗುತ್ತದೆ ಎಂದು ಆದೇಶದಲ್ಲಿದೆ. ಆದರೆ ಈವರೆಗೆ ಬಡಾವಣೆಯಾಗಿ ಅಭಿವೃದ್ಧಿ ಮಾಡಿಲ್ಲ. 2024 ಫೆ.6ರಂದು ಎನ್‌ಎ ಮಾಡಿದ ಜಮೀನು ಕಾಂಗ್ರೆಸ್‌ ಮುಖಂಡ ಶರಣಕುಮಾರ್‌ ಮೋದಿ ಅವರಿಗೆ ಮಾರಾಟ ಮಾಡುವ ಮೂಲಕ ಸರ್ಕಾರಕ್ಕೆ ತೆರಿಗೆ ವಂಚಿಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಈಚೆಗೆ ರಾಜ್ಯ ಸರ್ಕಾರ ಎನ್‌ಎ ಆಸ್ತಿಗಳನ್ನು ಪ್ಲಾಗ್‌ ಮಾಡದೇ ಇದ್ದಾಗ ನೋಂದಣಿಗೆ ಅವಕಾಶ ನೀಡಬಾರದು. ಜಮೀನಿನ ಪಾಣಿಯಲ್ಲಿ ಪ್ಲಾಗ್‌ ಇದ್ದಾಗ ಮಾತ್ರ ನೋಂದಣಿಗೆ ಅವಕಾಶ ನೀಡಬೇಕು ಎಂದು ಆದೇಶ ಹೊರಡಿಸಿದೆ. ಆ ನಿಯಮ ಉಲ್ಲಂಘಿಸಿ ಉಪನೋಂದಣಿ ಅಧಿಕಾರಿ ಖಾತೆ ವರ್ಗಾವಣೆ ಮಾಡಿದ್ದಾರೆ. ಜಮೀನು ವರ್ಗಾವಣೆ ಆದೇಶವನ್ನು ತಡೆಹಿಡಿಯಬೇಕು’ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜೇಂದ್ರಕುಮಾರ್‌, ರವಿ ಚೌರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.