ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆಯಲು ಯತ್ನಿಸಿದ ಘಟನೆ ಖಂಡಿಸಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ವಕೀಲರು ಬುಧವಾರ ಪ್ರತಿಭಟನೆ ನಡೆಸಿದರು
ಕಲಬುರಗಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆಯಲು ಯತ್ನಿಸಿದ ಘಟನೆ ಖಂಡಿಸಿ ವಕೀಲರು ಬುಧವಾರ ಕೋರ್ಟ್ ಕಲಾಪಗಳಿಂದ ದೂರವುಳಿದು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಕೋರ್ಟ್ ಸಂಕೀರ್ಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ವಕೀಲರು ಮೊದಲಿಗೆ ಕೋರ್ಟ್ ಎದುರಿನ ಎಸ್.ಬಿ.ಟೆಂಪಲ್ ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಘೋಷಣೆ ಕೂಗಿದರು. ಬಳಿಕ ಅಲ್ಲಿಂದ ಸರ್ದಾರ್ ಪಟೇಲ್ ವೃತ್ತ ಬಂದು ಮಾನವ ಸರಪಳಿ ನಿರ್ಮಿಸಿ ಶೂ ಎಸೆದ ಘಟನೆ ಖಂಡಿಸಿದರು. ಅಲ್ಲಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಸಲ್ಲಿಸಿದರು.
ಗುಲಬರ್ಗಾ ನ್ಯಾಯವಾದಿಗಳ ಸಂಘದ ಜಿಲ್ಲಾ ಘಟಕ ಹಾಗೂ ಹೈಕೋರ್ಟ್ ಘಟಕ ಜಂಟಿಯಾಗಿ ನಡೆದ ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್.ವಿ.ಪಸಾರ, ಉಪಾಧ್ಯಕ್ಷರಾದ ಭೀಮಾಶಂಕರ ಪೂಜಾರಿ, ಆರತಿ ಎಂ.ರಾಠೋಡ, ಖಂಜಾಚಿ ಮಂಜುನಾಥ ಪಾಟೀಲ, ಪ್ರಧಾನ ಕಾರ್ಯದರ್ಶಿ ಸಿದ್ದರಾಮ ವಾಡಿ, ಜಂಟಿ ಕಾರ್ಯದರ್ಶಿ ಸುಧೀರ ಗಾದ್ಗೆ, ಹೈಕೋರ್ಟ್ ಘಟಕದ ಉಪಾಧ್ಯಕ್ಷ ಅನಂತ ಜಾಹಗೀರದಾರ, ಪ್ರಧಾನ ಕಾರ್ಯದರ್ಶಿ ಗೌರೀಶ ಕಾಶೆಂಪುರ, ಖಜಾಂಚಿ ಮಂಜುನಾಥ ಗಿನ್ನಿ, ಜಂಟಿ ಕಾರ್ಯದರ್ಶಿ ರೇಖಾ ಪಾಟೀಲ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.