ADVERTISEMENT

ಸೇಡಂ | ನಾಯಕತ್ವ ನಿರ್ಮಾಣಕ್ಕೆ ಅನುದಾನ ಹೂಡಿಕೆ

ಅವಿನಾಶ ಬೋರಂಚಿ
Published 20 ಜನವರಿ 2026, 4:26 IST
Last Updated 20 ಜನವರಿ 2026, 4:26 IST
ಬಸವರಾಜ ಪಾಟೀಲ ಸೇಡಂ
ಬಸವರಾಜ ಪಾಟೀಲ ಸೇಡಂ   

ಸೇಡಂ: ಕ್ರೀಯಾತ್ಮಕ ಚಟುವಟಿಕೆ, ಸೃಜನಶೀಲ ಚಿಂತನೆಗಳ ಅಳವಡಿಕೆಯಲ್ಲಿ ಸದಾ ಮುಂಚುಣಿಯಲ್ಲಿರುವ ಶ್ರೀಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಈ ಬಾರಿ ರಾಷ್ಟ್ರದ ಅಭಿವೃದ್ಧಿಗೆ ಸಾಮಾಜಿಕ ನಾಯಕತ್ವ (ವ್ಯಕ್ತಿತ್ವ) ನಿರ್ಮಾಣದ ಸಂಕಲ್ಪಕ್ಕೆ ಮುಂದಾಗಿದೆ.

ಕಳೆದ ವರ್ಷವೇ ಭಾರತೀಯ ಸಂಸ್ಕೃತಿ ಉತ್ಸವ ಜರುಗಿತ್ತು. ಕಾರ್ಯಕ್ರಮದ ನಂತರ ಸಮಿತಿಯ ಮುಂದಿನ ನಡೆಯೇನು ಎನ್ನುವ ಪ್ರಶ್ನೆಗೆ ಉತ್ತರವಾಗಿ ಅನ್ವೀಕ್ಷಿಕಿ ಅಧ್ಯಯನ ಕೇಂದ್ರ ಸ್ಥಾಪನೆಯಾಗಿತ್ತು. 

1974ರಲ್ಲಿ ಸ್ಥಾಪನೆಗೊಂಡ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯು ಸ್ವರ್ಣ ಜಯಂತಿ ಆಚರಿಸಿಕೊಂಡಿದೆ. ಅನ್ವೀಕ್ಷಿಕಿ ಅಧ್ಯಯನ ಕೇಂದ್ರವು ಸಮಿತಿ ಸ್ಥಾಪನೆಯಾದ ದಿನದಂತೆ ಉದ್ಘಾಟನೆ ಆಗುತ್ತಿರುವುದು ವಿಶೇಷ.

ADVERTISEMENT

21 ರಿಂದ 35 ವಯೋಮಿತಿಯ ವಿದ್ಯಾರ್ಥಿಗೆ ₹3.50 ಲಕ್ಷದಂತೆ 20 ವಿದ್ಯಾರ್ಥಿಗಳ ಮೇಲೆ ಹಣಹೂಡಿಕೆ ಮಾಡಿ, ವಸತಿ ಸಹಿತ ಸಮಗ್ರ ಜ್ಞಾನ ಒದಗಿಸಲು ಮುಂದಾಗಿದೆ. ಅಧ್ಯಯನ ಕೇಂದ್ರಕ್ಕೆ ಪ್ರವೇಶ ಮುಕ್ತವಾಗಿದ್ದು, ವರ್ಷಕ್ಕೆ ₹1 ಲಕ್ಷದಂತೆ ಎರಡು ವರ್ಷ ಭರಿಸಬೇಕಷ್ಟೇ. ಉಳಿದದ್ದು ಸಮಿತಿ ನೋಡಿಕೊಳ್ಳಲಿದೆ ಎನ್ನುತ್ತಾರೆ ಸಮಿತಿ ಅಧ್ಯಕ್ಷ ಸದಾಶಿವ ಸ್ವಾಮೀಜಿ.

‘ಅಧ್ಯಯನ ಕೇಂದ್ರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸಂಪನ್ಮೂಲ ವ್ಯಕ್ತಿ, ಸಾಧಕರ ಪಟ್ಟಿ, ಬೋಧನಾ ವಿಷಯ, ಪ್ರಾಯೋಗಿಕ ಕೇಂದ್ರ, ಭೇಟಿ ಮಾಡುವ ಗಣ್ಯರ ವಿವರ ಸಿದ್ಧಗೊಂಡಿದೆ. ಅಧ್ಯಯನದ ಶಿಸ್ತು, ಸಂವಹನ ಕೌಶಲ, ಸೃಜನ ಶೀಲ ಕಲಿಕೆ, ಪ್ರಯೋಗ, ನಾವಿನ್ಯ ಸಂಶೋಧನಕ್ಕೆ ಅವಕಾಶ, ದೈಹಿಕ-ಮಾನಸಿಕ ಆರೋಗ್ಯ, ಸಾರ್ವಜನಿಕ ಭಾಷಣ, ನಾಯಕತ್ವ ಶೈಲಿ, ಆಡಳಿತ ಜ್ಞಾನ, ಡಿಜಿಟಲ್ ಜ್ಞಾನ, ಮನೋವಿಜ್ಞಾನ, ಸಂಘಟನಾ ಶಕ್ತಿ, ಪ್ರಕೃತಿಯೊಂದಿಗಿನ ಕಲಿಕೆ ಹೀಗೆ ಹತ್ತು ಹಲವು ವಿಷಯಗಳು ಒಳಗೊಂಡಿರಲಿದೆ’ ಎನ್ನುತ್ತಾರೆ ಸಂಸ್ಥೆಯ ಸಂರಕ್ಷಕ ಬಸವರಾಜ ಪಾಟೀಲ ಸೇಡಂ.

ಸಮಿತಿಯ ಯೋಜನೆಗೆ ಸಂತಸ ವ್ಯಕ್ತವಾಗುತ್ತಿದ್ದು, ಯೋಜನೆ ಯಶಸ್ವಿಯಾಗುತ್ತದೆಯಾ ಎಂಬ ಕುತೂಹಲವು ಮೂಡಿದೆ. ಪ್ರವೇಶಕ್ಕೆ ಆದಿತ್ಯ ಜೋಶಿ-ಮೊ.8792902108 ಸಂಪರ್ಕಿಸಬಹುದು.

ಸದಾಶಿವ ಸ್ವಾಮೀಜಿ

ಕೇಂದ್ರ ಉದ್ಘಾಟನೆ ಜ.23 ರಂದು ಪಟ್ಟಣದ ಹೊರವಲಯದಲ್ಲಿರುವ ನೃಪತುಂಗ ಪದವಿ ಕಾಲೇಜಿನಲ್ಲಿ ಜ.23 ರಂದು ಬೆಳಿಗ್ಗೆ 11ಕ್ಕೆ ಅನ್ವೀಕ್ಷಿಕಿ ಅಧ್ಯಯನ ಕೇಂದ್ರದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷ ಸದಾಶಿವ ಸ್ವಾಮೀಜಿ ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಕುಲಪತಿ ಲೋಕಸಭಾ ಸದಸ್ಯರು ಮಠಾಧೀಶರು  ಪಾಲ್ಗೊಳ್ಳಲಿದ್ದಾರೆ ಎಂದರು.