ADVERTISEMENT

ಕಲಬುರಗಿ | ಮೂಲಸೌಕರ್ಯ ಕೊರತೆ; 20 ಗ್ರಂಥಾಲಯಗಳಿಗಿಲ್ಲ ಸ್ವಂತ ಸೂರು

ಭೀಮಣ್ಣ ಬಾಲಯ್ಯ
Published 17 ಜುಲೈ 2024, 6:20 IST
Last Updated 17 ಜುಲೈ 2024, 6:20 IST
ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಗ್ರಂಥಾಲಯ
ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಗ್ರಂಥಾಲಯ   

ಕಲಬುರಗಿ: ಸ್ವಂತ ಕಟ್ಟಡ ಇಲ್ಲದಿರುವುದು ಹಾಗೂ ಕಾಲ ಕಾಲಕ್ಕೆ ಮಹಾನಗರ ಪಾಲಿಕೆ ಗ್ರಂಥಾಲಯ ಸೆಸ್ ನೀಡದ ಕಾರಣ ಓದುವ ಸಂಸ್ಕೃತಿ ಉತ್ತೇಜಿಸಬೇಕಾದ ಗ್ರಂಥಾಲಯಗಳು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. 

ನಗರದಲ್ಲಿರುವ 21 ಗ್ರಂಥಾಲಯಗಳಲ್ಲಿ ನಗರ ಕೇಂದ್ರ ಗ್ರಂಥಾಲಯ ಮಾತ್ರ ಸ್ವಂತ ಕಟ್ಟಡ ಹೊಂದಿದೆ. ಅಗತ್ಯ ಸೌಕರ್ಯಗಳನ್ನು ಹೊಂದಿ ಓದುಗರನ್ನು ಆಕರ್ಷಿಸುತ್ತಿದೆ. ಉಳಿದ 20 ಗ್ರಂಥಾಲಯಗಳು ಸಮುದಾಯ ಭವನ, ಮಹಾನಗರ ಪಾಲಿಕೆಗೆ ಸೇರಿದ ಕಟ್ಟಡ, ಮಠದ ಜಾಗ ಹಾಗೂ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ.

ಶಹಾಬಜಾರ್, ಗೋದುತಾಯಿ ನಗರ, ಬಸವೇಶ್ವರ ನಗರ, ಕೋರಿ ಮಠದ ಗ್ರಂಥಾಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ ಕಟ್ಟಡದ ಬಾಡಿಗೆ ಪಾವತಿಸುತ್ತಿದೆ. 

ADVERTISEMENT

ಕಪನೂರು ಸೇರಿದಂತೆ ಕೆಲ ಕಡೆ ಗ್ರಂಥಾಲಯಗಳು ಸಮುದಾಯ ಭವನಗಳಲ್ಲಿ ನಡೆಯುತ್ತಿವೆ. ಇಕ್ಕಟ್ಟಾದ ಜಾಗದ ಕಾರಣಕ್ಕೆ ಬಹಳಷ್ಟು ಜನ ಕುಳಿತುಕೊಂಡು ಓದಲು ಸಾಧ್ಯವಾಗದಿರುವುದು. ಕುಡಿಯುವ ನೀರು, ಅಗತ್ಯಕ್ಕೆ ತಕ್ಕಷ್ಟು ಟೇಬಲ್‌, ಕುರ್ಚಿಗಳಿಲ್ಲದಿರುವುದು, ಪುಸ್ತಕ ಕೊರತೆ ಹಾಗೂ ಸರಿಯಾದ ಗಾಳಿ, ಬೆಳಕಿನ ವ್ಯವಸ್ಥೆ ಇಲ್ಲದೆ ಸಣಕಲಾಗಿವೆ.

ಮಹಾನಗರ ಪಾಲಿಕೆ ಬಳಿಯ ಸಾರ್ವಜನಿಕ ಉದ್ಯಾನದಲ್ಲಿರುವ ಗ್ರಂಥಾಲಯ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಇಲ್ಲಿ ಸೌಕರ್ಯ ನೋಡಲೂ ಸಿಗುವುದಿಲ್ಲ. ಸುತ್ತಮುತ್ತ ಗಿಡ–ಗಂಟಿ ಬೆಳೆದಿವೆ. ಹಳೆ ಕಾಲದ ಬೋರ್ಡ್‌ವೊಂದನ್ನು ನೇತು ಹಾಕಿಕೊಂಡು ನಿಂತಿದೆ. ಯಾವಾಗಲೂ ಮುಚ್ಚಿದ ಸ್ಥಿತಿಯಲ್ಲಿರುತ್ತದೆ.

‘ಗ್ರಂಥಾಲಯ ಬಾಗಿಲು ತೆರೆದಿದ್ದನ್ನು ನೋಡಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಉದ್ಯಾನದ ಆಸನಗಳ ಮೇಲೆ ಕುಳಿತು ಓದುತ್ತಾರೆ’ ಎನ್ನುತ್ತಾರೆ ಉದ್ಯಾನಕ್ಕೆ ಬರುವ ಸಾರ್ವಜನಿಕರು.

ನಗರದ ಆಳಂದ ಚೆಕ್‌ ಪೋಸ್ಟ್‌ ಬಳಿ ಅಲೆಮಾರಿಗಳಿಗಾಗಿ ಗ್ರಂಥಾಲಯ ತೆರೆಯಲಾಗಿದೆ. ಇದು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ 4,819 ಪುಸ್ತಕಗಳಿವೆ. ಸೌಕರ್ಯಗಳ ಕೊರತೆ ಇದನ್ನು ಕಾಡುತ್ತಿದೆ.

ಕೇಂದ್ರ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಗ್ರಂಥಾಲಯಕ್ಕೆ ಜಾಗ ನೀಡಿದೆ. ಇಲ್ಲಿ ಪರವಾಗಿಲ್ಲ ಎನ್ನುವಷ್ಟು ಸೌಕರ್ಯಗಳಿವೆ. ಬಸ್‌ ಬರುವುದು ತಡವಾದರೆ ಪ್ರಯಾಣಿಕರು ಈ ಗ್ರಂಥಾಲಯದಲ್ಲಿ ಪತ್ರಿಕೆ, ನಿಯತಕಾಲಿಕೆಗಳನ್ನು ಓದುತ್ತಾರೆ. ಇದು ಅತಿ ಹೆಚ್ಚು ಓದುಗರನ್ನು ಹೊಂದಿದೆ. ಆದರೆ, ಗ್ರಂಥಾಲಯದ ಮುಂಭಾಗ ಅಸ್ವಚ್ಛತೆಯಿಂದ ಕೂಡಿದೆ.

ನಗರ ಕೇಂದ್ರ ಗ್ರಂಥಾಲಯ ಹೊರತುಪಡಿಸಿ ಉಳಿದ ಗ್ರಂಥಾಲಯಗಳಲ್ಲಿ ಇಬ್ಬರು ಸಿಬ್ಬಂದಿ ಕೆಲಸ ಮಾಡುತ್ತಾರೆ. ಒಬ್ಬರು ಇಲಾಖೆಗೆ ಸೇರಿದವರು. ಇನ್ನೊಬ್ಬರು ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮದ ಸಿಬ್ಬಂದಿ. ಇಲಾಖೆಗೆ ಸೇರಿದವರಿಗೆ ಇಲಾಖೆಯ ಸಂಚಿತ ನಿಧಿಯಿಂದ ವೇತನ ನೀಡಲಾಗುತ್ತದೆ. ದಿನಗೂಲಿ ನೌಕರರಿಗೆ ಗ್ರಂಥಾಲಯ ಸೆಸ್‌ನಿಂದ ಭರಿಸಲಾಗುತ್ತದೆ.

20 ಗ್ರಂಥಾಲಯಗಳಲ್ಲಿ ಒಟ್ಟು 35 ಸಿಬ್ಬಂದಿ ಇದ್ದಾರೆ. ಆ ಪೈಕಿ 12 ಸಿಬ್ಬಂದಿ ದಿನಗೂಲಿ ನೌಕರರಾಗಿದ್ದಾರೆ.

‘ಮಹಾನಗರ ಪಾಲಿಕೆ ₹1.73 ಕೋಟಿ ಗ್ರಂಥಾಲಯ ಸೆಸ್ ಅನ್ನು ಬಾಕಿ ಉಳಿಸಿಕೊಂಡಿದೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಾಗದ ಕೊರತೆ ಎದುರಾಗಿದೆ’ ಎಂದು ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

ಕನ್ನಡ ಭವನದ ಗ್ರಂಥಾಲಯ

ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಾಗದಲ್ಲಿ ಗ್ರಂಥಾಲಯ ಸ್ಥಾಪಿಸಲಾಗಿದೆ. ಇಲ್ಲಿ ಪತ್ರಿಕೆಗಳು ನಿಯತಕಾಲಿಕೆ ಹಾಗೂ ಪುಸ್ತಕಗಳು ಲಭ್ಯವಿವೆ. ಸೌಕರ್ಯಗಳನ್ನೂ ಒದಗಿಸಲಾಗಿದೆ. ಆದರೆ ಇದು ಮೂಲೆಯಲ್ಲಿರುವುದರಿಂದ ಇಲ್ಲಿ ಗ್ರಂಥಾಲಯ ಇರುವುದು ಜನರಿಗೆ ತಿಳಿಯುವುದೇ ಇಲ್ಲ. 

55 ವಾರ್ಡ್‌ಗಳಿಗೆ 21 ಗ್ರಂಥಾಲಯ

ಮಹಾನಗರ ಪಾಲಿಕೆ ಒಟ್ಟು 55 ವಾರ್ಡ್‌ಗಳನ್ನು ಹೊಂದಿದೆ. ಆದರೆ ನಗರದಲ್ಲಿ ಗ್ರಂಥಾಲಯ ಇಲಾಖೆ 21 ಗ್ರಂಥಾಲಯಗಳನ್ನು ಸ್ಥಾಪಿಸಿದೆ. ಆದ್ದರಿಂದ ಇನ್ನೂ ಅರ್ಧದಷ್ಟು ವಾರ್ಡ್‌ಗಳಲ್ಲಿ ಗ್ರಂಥಾಲಯ ವ್ಯವಸ್ಥೆ ಇಲ್ಲ. ಬಹುತೇಕರು ಜಗತ್ ವೃತ್ತದ ಬಳಿಯ ಶರಣಬಸವೇಶ್ವರ ಕೆರೆ ಎದುರಿನ ನಗರ ಕೇಂದ್ರ ಗ್ರಂಥಾಲಯಕ್ಕೆ ಬಂದು ಓದುತ್ತಾರೆ.

ಮಹಾನಗರ ಪಾಲಿಕೆ ಜಾಗ ನೀಡಿದರೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. ಬಾಕಿ ಕರ ಪಾವತಿಸಿದರೆ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು
-ಅಜಯಕುಮಾರ, ಉಪನಿರ್ದೇಶಕ ನಗರ ಕೇಂದ್ರ ಗ್ರಂಥಾಲಯ ಕಲಬುರಗಿ
ನಗರದಲ್ಲಿರುವ ಗ್ರಂಥಾಲಯಗಳಿಗೆ ಸ್ವಂತ ಕಟ್ಟಡ ನಿರ್ಮಿಸಿದರೆ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಅನುಕೂಲವಾಗಲಿದೆ. ಧಾರವಾಡದಂಥ ಊರುಗಳಿಗೆ ತೆರಳುವುದು ತಪ್ಪಲಿದೆ.
-ಪವನಕುಮಾರ, ಓದುಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.