ಬಂಧನ
(ಸಾಂದರ್ಭಿಕ ಚಿತ್ರ)
ಯಡ್ರಾಮಿ: ತಾಲ್ಲೂಕಿನ ಕಣಮೇಶ್ವರ ಗ್ರಾಮದಲ್ಲಿ ವ್ಯಕ್ತಿಯೊಬ್ಬನ ಕೊಲೆ ಮಾಡಿ ಮನೆಯಲ್ಲೇ ಮೃತದೇಹ ಮುಚ್ಚಿಟ್ಟು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ವಿಜಯಪುರ ಬಸ್‌ನಲ್ಲಿ ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಅರೇಮುರಾಳ ಗ್ರಾಮದ ಶರಣಬಸಪ್ಪ ಭೋವಿ (33) ಕೊಲೆಯಾದವನು. ಕಣಮೇಶ್ವರದ ಅಜಯ ಭೋವಿ (29) ಹತ್ಯೆ ಮಾಡಿದ ಆರೋಪಿ.
ಇಬ್ಬರೂ ಸಂಬಂಧಿಕರಾಗಿದ್ದು, ನೀಡಿದ್ದ ₹ 6 ಲಕ್ಷ ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ಅಂಗವಿಕಲನಾಗಿರುವ ಶರಣಬಸಪ್ಪ ಬೆಂಗಳೂರಿನ ಹಗದೂರು ಯುಪಿಎಚ್‌ಸಿ ಆರೋಗ್ಯ ಕೇಂದ್ರದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸ್ಟಾಫ್ ನರ್ಸ್ ಆಗಿದ್ದ. ಹೆಂಡತಿ ಆರೋಗ್ಯ ವಿಚಾರಿಸಲು ಮತ್ತು ದಸರಾ ಹಬ್ಬಕ್ಕಾಗಿ ವಾರ ರಜೆ ಹಾಕಿ ಕಣಮೇಶ್ವರಕ್ಕೆ ಬಂದಿದ್ದ. ಸ್ವಲ್ಪ ದಿನ ಪತ್ನಿ ಜತೆಗಿದ್ದು, ಅ.4ರಂದು ಮಧ್ಯಾಹ್ನ ಅಜಯ ಹತ್ತಿರ ದುಡ್ಡು ತೆಗೆದುಕೊಂಡು ಅರೇಮುರಾಳಕ್ಕೆ ಹೋಗಿ ತಾಯಿಯೊಂದಿಗೆ ಬೆಂಗಳೂರಿಗೆ ತೆರಳುವುದಾಗಿ ಸಂಬಂಧಿಕರಿಗೆ ಹೇಳಿದ್ದ. ಆದರೆ ಭಾನುವಾರ ಆದರೂ ತಾಯಿಯ ಬಳಿ ಬಂದಿರಲಿಲ್ಲ.
ತಾಯಿ ಮತ್ತು ಸಂಬಂಧಿಕರು ಭಾನುವಾರ ಎಲ್ಲೆಡೆ ಹುಡುಕಾಡಿದರೂ ಸುಳಿವು ಸಿಕ್ಕಿರಲಿಲ್ಲ. ಬಳಿಕ ಅಜಯನನ್ನು ವಿಚಾರಿಸಿದಾಗ ನನ್ನ ಹತ್ತಿರ ₹ 30 ಸಾವಿರ ತೆಗೆದುಕೊಂಡು ಬೆಂಗಳೂರಿಗೆ ಹೋಗಿದ್ದಾನೆ ಎಂದು ಹೇಳಿದ್ದಾನೆ. ಸಂಶಯ ಬಂದು ಊರಿನೆಲ್ಲೆಡೆ ವಿಷಯ ತಿಳಿಸಿದ್ದಾರೆ. ಸಿಕ್ಕಿಹಾಕಿಕೊಳ್ಳುವ ಭಯದಿಂದ ಅಜಯ ತಂದೆಗೆ ವಾಯ್ಸ್ ಮೆಸೇಜ್ ಕಳಿಸಿ ಪರಾರಿಯಾಗಿದ್ದಾನೆ. ಬಳಿಕ ತಾಯಿ ಮತ್ತು ಸಂಬಂಧಿಕರು ಅಜಯ ಮನೆಗೆ ಭೇಟಿ ನೀಡಿದಾಗ ಶರಣಬಸಪ್ಪನ ಶವ ಸಿಕ್ಕಿದೆ. ಭಾನುವಾರ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ್, ಡಿವೈಎಸ್‌ಪಿ ಲೋಕೇಶಪ್ಪ, ಸಿಪಿಐ ರಾಜೇಸಾಬ ನದಾಫ್, ಪಿಎಸ್‌ಐಗಳಾದ ವಿಶ್ವನಾಥ ಮುದರೆಡ್ಡಿ, ಚಿದಾನಂದ ಸವದಿ ಭೇಟಿ ಪರಿಶೀಲಿಸಿದ ಬಳಿಕ ಆರೋಪಿ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿತ್ತು. ಶುಕ್ರವಾರ ಅಜಯ ವಿಜಯಪುರದಿಂದ ಸಿಂದಗಿಯತ್ತ ಬಸ್‌ನಲ್ಲಿ ಬರುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.