ADVERTISEMENT

ಕಲಬುರ್ಗಿ: ಹೊಸ ರೈತರ ಸಾಲ ಮುಂದಿನ ವರ್ಷ ದುಪ್ಪಟ್ಟು

ಮಹಾಗಾಂವ್ ಕ್ರಾಸ್‌ನಲ್ಲಿ ಬೆಳೆ ಸಾಲ ವಿತರಣೆ ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ತೆಲ್ಕೂರ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 3:10 IST
Last Updated 4 ಅಕ್ಟೋಬರ್ 2021, 3:10 IST
ಮಹಾಗಾಂವ ಕ್ರಾಸ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ, ಶಾಸಕ ಬಸವರಾಜ ಮತ್ತಿಮೂಡ ಅವರು ರೈತರಿಗೆ ಸಾಲದ ಚೆಕ್ ವಿತರಿಸಿದರು
ಮಹಾಗಾಂವ ಕ್ರಾಸ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ, ಶಾಸಕ ಬಸವರಾಜ ಮತ್ತಿಮೂಡ ಅವರು ರೈತರಿಗೆ ಸಾಲದ ಚೆಕ್ ವಿತರಿಸಿದರು   

ಕಲಬುರ್ಗಿ: ಹೊಸದಾಗಿ ಈಗ ರೈತರಿಗೆ ವಿತರಿಸುತ್ತಿರುವ ಬೆಳೆಸಾಲವನ್ನು ವರ್ಷದೊಳಗೆ ಮರುಪಾವತಿಸಿದರೆ ಮುಂದಿನ ವರ್ಷ ದುಪ್ಪಟ್ಟು ಸಾಲ ವಿತರಿಸುವುದಾಗಿ ಕಲಬುರ್ಗಿ–ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ಅಧ್ಯಕ್ಷ, ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಪ್ರಕಟಿಸಿದರು.

ಕಲಬುರ್ಗಿ ತಾಲ್ಲೂಕಿನ 19 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 4041 ಹೊಸ ರೈತರಿಗೆ ತಾಲ್ಲೂಕಿನ ಮಹಾಗಾಂವ ಕ್ರಾಸ್‌ನ ಚಂದ್ರ ನಗರದ ಮಹಾಂತೇಶ್ವರ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ₹ 12 ಕೋಟಿ ಬೆಳೆ ಸಾಲವನ್ನು ವಿತರಿಸಿ ಮಾತನಾಡಿದರು.

ಹೊಸ ರೈತರಿಗೆ ₹ 25 ಸಾವಿರ ಹಾಗೂ ₹ 30 ಸಾವಿರ ಬೆಳೆಸಾಲ ವಿತರಿಸಲಾಗಿದೆ. ಇನ್ನೂ ವಿತರಿಸಲಾಗುತ್ತಿದೆ.‌ ವರ್ಷದೊಳಗೆ ಸಾಲ ಮರುಪಾವತಿಸಿದರೆ ಬಡ್ಡಿ ಇರುವುದಿಲ್ಲ. ಒಂದು ವೇಳೆ ವರ್ಷದೊಳಗೆ ಸಕಾಲದಲ್ಲಿ ಸಾಲ ಮರುಪಾವತಿಸದಿದ್ದರೆ ಶೇ 13ರಷ್ಟು ಬಡ್ಡಿಯಾಗುತ್ತದೆ. ಹೀಗಾಗಿ ಸಾಲ ಮರುಪಾವತಿಸಿ ಮುಂದಿನ ವರ್ಷ ಈಗಿನ ಸಾಲವನ್ನು ದುಪ್ಪಟ್ಟು ಪಡೆಯಬಹುದು ಎಂದರು.

ಈಗಾಗಲೇ ಹೊಸದಾಗಿ ರೈತರಿಗೆ ₹ 100 ಕೋಟಿಗೂ ಅಧಿಕ ಬಡ್ಡಿ ರಹಿತ ಬೆಳೆಸಾಲ ವಿತರಿಸಲಾಗಿದೆ. ಯಾವೊಬ್ಬ ಹೊಸ ರೈತ ಸಾಲ ಸೌಲಭ್ಯದಿಂದ ದೂರ ಉಳಿಯಬಾರದು ಎಂಬುದು ನಮ್ಮ ಸಂಕಲ್ಪವಾಗಿದೆ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ, ಕ್ಷೇತ್ರದಲ್ಲಿ ಪ್ರತಿಯೊಬ್ಬ ರೈತರಿಗೆ ಸಾಲ ತಲುಪಿಸುವ ಉದ್ದೇಶ ಹೊಂದಲಾಗಿದೆ. ಪ್ರಸಕ್ತವಾಗಿ ಅತಿವೃಷ್ಟಿ ಯಿಂದ ಬೆಳೆ ಹಾನಿಯಾಗಿದೆ. ಖಾಸಗಿ ಸಾಲ ತಂದು ಬಡ್ಡಿ ಕಟ್ಟುವುದೇ ಆಗಿದೆ. ಹೀಗಾಗಿ ಈ ಬೆಳೆಸಾಲ ಹೆಚ್ಚು ಅನುಕೂಲವಾಗಲಿದೆ. ₹ 80 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ತರಲಾಗುವುದು ಎಂದು ಹೇಳಿದರು.

ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ, ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ಕಾಡಾ ಆಡಳಿತಾಧಿಕಾರಿ ಶರಣಬಸಪ್ಪ ಬೆಣ್ಣೂರ,ನಿರ್ದೇಶಕ ಅಶೋಕ ಸಾವಳೇಶ್ವರ ಮಾತನಾಡಿದರು.

ಸ್ಥಳೀಯ ಮಹಾಗಾಂವ ಕಳ್ಳಿಮಠದ ಗುರುಲಿಂಗ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾಗಾಂವ, ಡೊಂಗರಗಾಂವ, ಕಿಣ್ಣಿಸಡಕ, ಸೊಂತ, ಜೀವಣಗಿ, ಬೇಲೂರ, ಓಕಳಿ, ನಾಗೂರ, ಹರಸೂರ, ಅವರಾದ, ಕುರಿಕೋಟಾ, ಅಷ್ಠಗಾ, ಕುಮಸಿ, ಹಾಗರಗಾ, ನಂದೂರ ಬಿ, ಸಣ್ಣೂರ, ಶ್ರೀನಿವಾಸ ಸರಡಗಿ, ಭೂಪಾಲ ತೆಗನೂರ, ಮರಗುತ್ತಿ ಗ್ರಾಮಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ 4041 ರೈತರಿಗೆ ಸಾಲ ವಿತರಿಸಲಾಯಿತು.

ಗುರುಲಿಂಗ ಶಿವಾಚಾರ್ಯರು ರಚಿಸಿದ ರೈತ ಗೀತೆಯನ್ನು ಶಿವಶಂಕರ ಬಿರಾದಾರ ಹಾಡಿದರು.

ನಿರ್ದೇಶಕ ಶರಣಬಸಪ್ಪ ಪಾಟೀಲ ಅಷ್ಠಗಾ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅವರ ಪ್ರಯತ್ನ ಫಲವಾಗಿ ₹ 200 ಕೋಟಿ ಅಪೆಕ್ಸ್ ಬ್ಯಾಂಕ್ ನಿಂದ ಸಾಲ ದೊರೆತ ಪರಿಣಾಮ ಈಗ ಸಾಲ ಹಂಚಲು ಸಾಧ್ಯವಾಗಿದೆ. ₹ 60 ಕೋಟಿ ಠೇವಣಿ ತಂದ ಪರಿಣಾಮ ಹಾಗೂ ಸರ್ಕಾರದಿಂದ ₹ 10 ಕೋಟಿ ಷೇರು ನೀಡಿರುವುದು ಅಭಿವೃದ್ಧಿಗೆ ಪೂರಕವಾಯಿತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.