ADVERTISEMENT

ಕಲಬುರಗಿ: ರೈತರಿಗೆ ಹಿಗ್ಗು ತರದ ಹೀರೆಕಾಯಿ

ಬಬಲಾದ: ಸರಿಯಾದ ಸಮಯಕ್ಕೆ ಕ್ರಿಮಿನಾಶಕ ಸಿಗದೆ ಬೆಳೆ ಹಾಳು

ಭೀಮಣ್ಣ ಬಾಲಯ್ಯ
Published 6 ಮೇ 2020, 3:41 IST
Last Updated 6 ಮೇ 2020, 3:41 IST
ಕಲಬುರ್ಗಿ ತಾಲ್ಲೂಕಿನ ಬಬಲಾದ ಗ್ರಾಮದ ಬಸವರಾಜ ಕೋರಿ ಅವರ ಹೊಲದಲ್ಲಿ ಬೆಳೆದಿರುವ ಹೀರೆಕಾಯಿ ಬೆಳೆ
ಕಲಬುರ್ಗಿ ತಾಲ್ಲೂಕಿನ ಬಬಲಾದ ಗ್ರಾಮದ ಬಸವರಾಜ ಕೋರಿ ಅವರ ಹೊಲದಲ್ಲಿ ಬೆಳೆದಿರುವ ಹೀರೆಕಾಯಿ ಬೆಳೆ   

ಕಲಬುರ್ಗಿ: ತಾಲ್ಲೂಕಿನ ಬಬಲಾದ ಗ್ರಾಮದ ರೈತ ಬಸವರಾಜ ಕೋರಿ ಅವರು ಕೊಳವೆಬಾವಿ ನೀರು ಬಳಸಿಕೊಂಡು ಎರಡು ಎಕರೆ ಜಮೀನಿನಲ್ಲಿ ಹೀರೆಕಾಯಿ ಬೆಳೆದಿದ್ದಾರೆ. ಒಂದು ಎಕರೆಯಲ್ಲಿ ಮೆಂತೆಸೊಪ್ಪು, ಕೊತ್ತಂಬರಿ ಹಾಗೂ ಬೆಂಡೆಕಾಯಿ ಬೆಳೆದಿದ್ದಾರೆ. ಸರಿಯಾದ ಸಮಯಕ್ಕೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ದೊರಕದ ಕಾರಣ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದೆ. ಹೀರೆಕಾಯಿಗೆ ಹುಳುಗಳು ಬಿದ್ದಿವೆ. ಹೂವುಗಳು ಉದುರುತ್ತಿವೆ.

ಬೀಜ, ಕೂಲಿಗಾಗಿ ಬಸವರಾಜ ಅವರು ಇದುವರೆಗೂ ₹25 ಸಾವಿರ ಖರ್ಚು ಮಾಡಿದ್ದಾರೆ. ಖರ್ಚು ಮಾಡಿದ ಹಣ ಕೈ ಸೇರಿದರೆ ಸಾಕು ಎನ್ನುವ ಸ್ಥಿತಿಯಲ್ಲಿದ್ದಾರೆ.

‘ಈ ಹಿಂದೆ ಎರಡು ದಿನಕ್ಕೊಮ್ಮೆ ಹೀರೆಕಾಯಿ ಕೀಳುತ್ತಿದ್ದೆವು. ದಿನಕ್ಕೆ 20 ಬುಟ್ಟಿ ಬರುತ್ತಿತ್ತು. ಈಗ ಚೆನ್ನಾಗಿರುವ ಹೀರೆಕಾಯಿ ಕಿತ್ತರೆ 3 ಬುಟ್ಟಿ ಬರುತ್ತಿದೆ. ದುಪ್ಪಟ್ಟು ವಾಹನ ವೆಚ್ಚ ಭರಿಸಿ ಕಲಬುರ್ಗಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕು. ಮಾರುಕಟ್ಟೆಯಲ್ಲಿ ಕಾಯಿ ಸರಿಯಿಲ್ಲ ಎನ್ನುವ ಕಾರಣ ಮುಂದಿಟ್ಟು ಕಡಿಮೆ ಬೆಲೆಗೆ ಕೇಳುತ್ತಾರೆ. ಅಲ್ಲದೆ, ಪೊಲೀಸರ ಭೀತಿ ಬೇರೆ. ಆದ್ದರಿಂದ ಕಾಯಿಗಳನ್ನು ಗಿಡದಲ್ಲಿಯೇ ಬಿಟ್ಟಿದ್ದೇವೆ’ ಎಂದು ಅವರು ತಿಳಿಸಿದರು.

ADVERTISEMENT

ಕೈಹಿಡಿಯದ ಸೊಪ್ಪು: ಹೀರೆಕಾಯಿ ಪಕ್ಕದಲ್ಲಿಯೇ ಮೆಂತೆಸೊಪ್ಪು, ಕೊತ್ತಂಬರಿ ಸೊಪ್ಪು ಹಾಗೂ ಸಬ್ಬಸಗಿ ಸೊಪ್ಪು ಬೆಳೆದಿದ್ದಾರೆ. ಅದು ಸಹ ಇವರ ಕೈಹಿಡಿದಿಲ್ಲ.

‘ಸೊಪ್ಪನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಎಲ್ಲ ಸೊಪ್ಪನ್ನೂ ₹2ಕ್ಕೆ ಒಂದು ಕಟ್ಟು ಕೇಳುತ್ತಿದ್ದಾರೆ. ಆದ್ದರಿಂದ ವಾಹನದ ವೆಚ್ಚ ಭರಿಸಲಾಗದೆ, ಅದೇ ದರಕ್ಕೆ ಊರಿನಲ್ಲಿರುವ ತರಕಾರಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದೇವೆ. ಅದರಿಂದ ಬರುವ ಹಣದಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದೇವೆ. ಸರ್ಕಾರ ಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕು’ ಎಂದು ಬಸವರಾಜ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.