ADVERTISEMENT

ಕುಲಬುರ್ಗಿ: ಕಂಬಾರರ ಕುಲುಮೆಗೆ ತಣ್ಣೀರು!

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ರೈತರ ಒಡನಾಡಿಗಳು, ಸಹಾಯಕ್ಕೆ ಮನವಿ

ಹನಮಂತ ಕೊಪ್ಪದ
Published 6 ಮೇ 2020, 3:38 IST
Last Updated 6 ಮೇ 2020, 3:38 IST
ಬಂಬೂ ಬಜಾರ್‌ನ ಮಳಿಗೆಯೊಂದರಲ್ಲಿ ಕೃಷಿ ಪರಿಕರಗಳ ವ್ಯಾಪಾರ ನೀರಿಕ್ಷೆಯಲ್ಲಿ ಕುಳಿತಿರುವ ಕಂಬಾರರು
ಬಂಬೂ ಬಜಾರ್‌ನ ಮಳಿಗೆಯೊಂದರಲ್ಲಿ ಕೃಷಿ ಪರಿಕರಗಳ ವ್ಯಾಪಾರ ನೀರಿಕ್ಷೆಯಲ್ಲಿ ಕುಳಿತಿರುವ ಕಂಬಾರರು   

ಕಲಬುರ್ಗಿ: ಕೃಷಿ ಚಟುವಟಿಕೆಗಳನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಕಂಬಾರರು ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ಕೃಷಿ ಪರಿಕರಗಳನ್ನು ಸಜ್ಜುಗೊಳಿಸಲು ರೈತರು ಬಾರದೆ ಇರುವುದರಿಂದ ಇವರಿಗೆ ವ್ಯಾಪಾರ ಇಲ್ಲದಂತಾಗಿದೆ.

ರೈತರು ಕೃಷಿಗೆ ಬೇಕಾದ ಪರಿಕರಗಳನ್ನು ಕಲಬುರ್ಗಿಗೆ ಬಂದು ಸಿದ್ಧಪಡಿಸಿಕೊಂಡು ಹೋಗುತ್ತಿದ್ದರು. ಲಾಕ್‌ಡೌನ್ ಸಡಿಲಿಕೆಯಾದರೂ ಸಾರಿಗೆ ವ್ಯವಸ್ಥೆಗೆ ನಿರ್ಬಂಧ ಹಾಕಿದ್ದರಿಂದ ಅವರು ಗ್ರಾಮಗಳಲ್ಲೇ ಉಳಿಯುವಂತಾಗಿದೆ. ಇದರಿಂದಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಂಡು ನಗರದ ಹಲವೆಡೆ ಕುಲುಮೆಗಳು ಉರಿಯುವುದನ್ನು ನಿಲ್ಲಿಸಿವೆ.

ಪ್ರತಿವರ್ಷ ಬೇಸಿಗೆ ಬಂತೆಂದರೆ ಕಂಬಾರರಿಗೆ ಬಿಡುವಿಲ್ಲದ ಕೆಲಸವಿರುತ್ತಿತ್ತು. ಆದರೆ ಈ ಬಾರಿ ಕೊರೊನಾ ಭೀತಿ ರೈತರ ಒಡನಾಡಿಗಳ ‘ಕುಲುಮೆ’ಗೆ ತಣ್ಣೀರೆರಚಿದೆ.

ADVERTISEMENT

ನಗರದ ಬಂಬೂ ಬಜಾರ್ ಹತ್ತಿರ 30ಕ್ಕೂ ಹೆಚ್ಚು ಜನರು ಕುಲುಮೆ ನಂಬಿಕೊಂಡು ಬದುಕು ನಡೆಸುತ್ತಿದ್ದಾರೆ.ಚೂರಿ, ಕೂಡುಗೋಲು, ಕೊಡಲಿ, ಗುದ್ದಲಿ, ಪಿಕಾಸಿ, ನೆಗಿಲು ಚಿಪ್ಪುಗಳು, ಚಕ್ರದ ಪಟ್ಟಿ ಹೀಗೆ ಕೃಷಿಗೆ ಸಂಬಂಧಿಸಿದ ಪರಿಕರಣಗಳನ್ನು ಇಲ್ಲಿ ದುರಸ್ತಿ ಮಾಡಲಾಗುತ್ತದೆ. ಆದರೆಕಳೆದ ಒಂದೂವರೆ ತಿಂಗಳಿಂದ ಯಾವುದೇ ವ್ಯಾಪಾರ ನಡೆಯುತ್ತಿಲ್ಲ. ಇದರಿಂದ ಇಲ್ಲಿನ ಕಾರ್ಮಿಕರು ಅತಂತ್ರರಾಗಿದ್ದಾರೆ.

‘ನಮಗೆ ಈ ಕೆಲಸ ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲ. ನಮ್ಮ ಜೀವನ ನಿಂತಿರುವುದೇ ಕೃಷಿಕರಿಂದ. ಲಾಕ್‌ಡೌನ್‌ನಿಂದ ಕೃಷಿಕರಿಗೂ ತೊಂದರೆಯಾಗಿದ್ದು, ನಮ್ಮ ವ್ಯಾಪಾರ ಸಂಪೂರ್ಣವಾಗಿ ನಿಂತಿದೆ. ಪ್ರತಿದಿನ ಅಂಗಡಿ ತೆರೆದು ಕಾದು ಕುಳಿತರೂ ಸಂಪಾದನೆಯಿಲ್ಲದೆ ಮನೆಗೆ ಹೋಗುವಂತಾಗಿದೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ’ ಎನ್ನುತ್ತಾರೆ ಇಲ್ಲಿನ ಕಾರ್ಮಿಕರು.

‘ರೈತರ ಬೆನ್ನೆಲುಬು ಆದ ಕಂಬಾರರ ಬದುಕಿಗೆ ಆಸರೆಯಾಗಿ ಸರ್ಕಾರ ಯಾವುದೇ ಯೋಜನೆ ತಂದಿಲ್ಲ. ಲಾಕ್‌ಡೌನ್‌ನಿಂದ ನಮ್ಮ ಕೆಲಸವೇ ನಿಂತು ಹೋಗಿದೆ. ಸರ್ಕಾರ ಕುಲುಮೆ ಕಾರ್ಮಿಕರಿಗೆ ಸಹಾಯಹಸ್ತ ಚಾಚಬೇಕು’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.