ADVERTISEMENT

ಮಾ.9ರಂದು ಜನತಾ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2019, 11:58 IST
Last Updated 22 ಫೆಬ್ರುವರಿ 2019, 11:58 IST

ಕಲಬುರ್ಗಿ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಮಾರ್ಚ್ 9ರಂದು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ರಾಷ್ಟ್ರೀಯ ಜನತಾ ನ್ಯಾಯಾಲಯವನ್ನು ಹಮ್ಮಿಕೊಳ್ಳಲಾಗಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಪಿ.ಟಿ.ಕಟ್ಟಿಮನಿ, ‘ಮಾರ್ಚ್ 9, ಜುಲೈ 13, ಸೆಪ್ಟೆಂಬರ್ 14 ಮತ್ತು ಡಿಸೆಂಬರ್ 14 ಸೇರಿ ಈ ವರ್ಷ ನಾಲ್ಕು ಜನತಾ ನ್ಯಾಯಾಲಯಗಳನ್ನು ನಡೆಸಲಾಗುವುದು. ಪ್ರತಿ ದಿನಾಂಕದಂದು ನಡೆಯುವ ಜನತಾ ನ್ಯಾಯಾಲಯಗಳಲ್ಲಿ ಪ್ರತ್ಯೇಕ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಯಲಿದೆ’ ಎಂದರು.

‘ಮಾರ್ಚ್ 9 ಮತ್ತು ಜುಲೈ 13ರಂದು ನಡೆಯುವ ಜನತಾ ನ್ಯಾಯಾಲಯದಲ್ಲಿ ಚೆಕ್ ಅಮಾನ್ಯ ಪ್ರಕರಣ, ಬ್ಯಾಂಕ್ ವಸೂಲಾತಿ (ಕೃಷಿ ಸಾಲಗಳನ್ನು ಹೊರತುಪಡಿಸಿ), ವಿದ್ಯುತ್ ಮತ್ತು ನೀರಿನ ಶುಲ್ಕ ಬಾಕಿ, ನಗರ ಪಾಲಿಕೆಯ ಕಂದಾಯ ವಸೂಲಾತಿ, ಸಿವಿಲ್, ಕ್ರಿಮಿನಲ್ ಮತ್ತು ವೈವಾಹಿಕ ಪ್ರಕರಣಗಳನ್ನು ತೀರ್ಮಾನಿಸಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

‘ಸೆಪ್ಟೆಂಬರ್ 4ರಂದು ರಾಜಿ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಬ್ಯಾಂಕ್ ವಸೂಲಾತಿ, ಅಪಘಾತ ಪರಿಹಾರ, ಕಾರ್ಮಿಕ ವಿವಾದದ ಪ್ರಕರಣಗಳು, ಡಿಸೆಂಬರ್ 14ರಂದು ವೈವಾಹಿಕ ವ್ಯಾಜ್ಯಗಳು, ಭೂಸ್ವಾಧೀನ ಪ್ರಕರಣ, ಸೇವಾ ವಿವಾದ ಪ್ರಕರಣ, ಕಂದಾಯ ಮತ್ತು ಎಲ್ಲಾ ರೀತಿಯ ಸಿವಿಲ್ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ನೀಡಲಾಗುವುದು’ ಎಂದು ಹೇಳಿದರು.

‘ಜನತಾ ನ್ಯಾಯಾಲಯದಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ್ಯ ಪಡಿಸಲಾಗುತ್ತದೆ. ಇಬ್ಬರಿಗೂ ಸಮಾನ ನ್ಯಾಯ ಕೊಡುವುದು ಇದರ ಉದ್ದೇಶ. ಇದರಲ್ಲಿ ಸೋಲು–ಗೆಲುವಿನ ಪ್ರಶ್ನೆ ಉದ್ಭವಿಸುವುದಿಲ್ಲ. ಜನತಾ ನ್ಯಾಯಾಲಯದಿಂದ ನ್ಯಾಯಾಧೀಶರ ಮೇಲಿನ ಒತ್ತಡವೂ ಕಡಿಮೆ ಆಗುತ್ತದೆ. ಶೀಘ್ರ ನ್ಯಾಯ, ಪರಿಹಾರ ನೀಡಲು ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್.ಮಾಣಿಕ್ಯ ಮಾತನಾಡಿ, ‘ಕ್ರಿಮಿನಲ್ ಪ್ರಕರಣಗಳಲ್ಲಿ ನೊಂದ ಸಂತ್ರಸ್ತರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿರುವ ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿ ಪರಿಹಾರ ಪಡೆಯಲು ಅವಕಾಶವಿದೆ. ಇದುವರೆಗೆ ₹27.70 ಲಕ್ಷ ಪರಿಹಾರ ನೀಡಲಾಗಿದೆ’ ಎಂದು ಹೇಳಿದರು. ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ.ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.