ADVERTISEMENT

ಕಲಬುರಗಿ | '₹14 ಕೋಟಿ ಪರಿಹಾರ ಪಾವತಿಸಲು ಆದೇಶ'

ಹೈಕೋರ್ಟ್ ಪೀಠದಲ್ಲಿ ರಾಷ್ಟ್ರೀಯ ಲೋಕ ಅದಾಲತ್: 520 ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 15:35 IST
Last Updated 13 ಜುಲೈ 2024, 15:35 IST
ಕಲಬುರಗಿಯ ಹೈಕೋರ್ಟ್‌ ಪೀಠದಲ್ಲಿ ಶನಿವಾರ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಅಶೋಕ ಎಸ್.ಕಿಣಗಿ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ ನಡೆಯಿತು
ಕಲಬುರಗಿಯ ಹೈಕೋರ್ಟ್‌ ಪೀಠದಲ್ಲಿ ಶನಿವಾರ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಅಶೋಕ ಎಸ್.ಕಿಣಗಿ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ ನಡೆಯಿತು   

ಕಲಬುರಗಿ: ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ಶನಿವಾರ ಕಲಬುರಗಿ ಹೈಕೋರ್ಟ್‌ ಪೀಠವು ರಾಜಿ ಸಂಧಾನದ ಮೂಲಕ ಮೋಟಾರು ವಾಹನ ವಿಮೆ ಮತ್ತು ಸಿವಿಲ್‌ಗೆ ಸಂಬಂಧಿಸಿದ 520 ಪ್ರಕರಣಗಳನ್ನು ಇತ್ಯರ್ಥಪಡಿಸಿತು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಹೈಕೋರ್ಟ್‌ ಕಾನೂನು ಸೇವಾ ಸಮಿತಿ ವತಿಯಿಂದ ಕಲಬುರಗಿ ಹೈಕೋರ್ಟ್ ಪೀಠದ ಸಭಾಂಗಣದಲ್ಲಿ ಜರುಗಿದ ಲೋಕ ಅದಾಲತ್‌ನಲ್ಲಿ ನ್ಯಾಯಮೂರ್ತಿಗಳು, ಕಕ್ಷಿದಾರರು, ಸಂಧಾನಕಾರರು ಹಾಗೂ ಸಂಬಂಧಪಟ್ಟ ವಕೀಲರು ರಾಜಿ ಸಂಧಾನದಲ್ಲಿ ಪಾಲ್ಗೊಂಡರು.

ಕಲಬುರಗಿ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಅಶೋಕ ಎಸ್.ಕಿಣಗಿ, ನ್ಯಾಯಮೂರ್ತಿ ಉಮೇಶ್ ಎಂ.ಅಡಿಗ ಹಾಗೂ ನ್ಯಾಯಮೂರ್ತಿ ರಾಜೇಶ್ ರೈ ಕೆ. ಅವರು ಪ್ರಕರಣಗಳನ್ನು ಕಕ್ಷಿದಾರರು ಮತ್ತು ಅವರ ವಕೀಲರ ಸಮಕ್ಷಮ ಸಂಧಾನದ ಮೂಲಕ ವಿಲೇವಾರಿ ಮಾಡಿದರು.

ADVERTISEMENT

ಅದಾಲತ್‌ನಲ್ಲಿ ಮೋಟಾರು ವಾಹನ ವಿಮೆ, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು, ಸಿವಿಲ್, ಕೆಎಸ್‌ಆರ್‌ಟಿಸಿ ಲೇಬರ್ ರಿಟ್‌ ಪಿಟಿಷನ್‌ ಸಂಬಂಧಿಸಿದ ಪ್ರಕರಣಗಳು ಸೇರಿ ಒಟ್ಟಾರೆ 520 ಪ್ರಕರಣಗಳು ಇತ್ಯರ್ಥಗೊಂಡು, ₹14,00,71,305 ಪರಿಹಾರ ಮೊತ್ತವನ್ನು ಸಂತ್ರಸ್ತರಿಗೆ ಪಾವತಿಸುವಂತೆ ಆದೇಶಿಸಲಾಯಿತು. 520 ಪ್ರಕರಣಗಳ ಪೈಕಿ 18 ಪ್ರಕರಣಗಳು ಕೆಎಸ್‌ಆರ್‌ಟಿಸಿಯ ಲೇಬರ್ ರಿಟ್‌ ಪಿಟಿಷನ್‌ಗೆ ಸಂಬಂಧಿಸಿದ್ದವು ಆಗಿದ್ದವು.

ಕಲಬುರಗಿ ಹೈಕೋರ್ಟ್‌ ಪೀಠದ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ದಯಾನಂದ ವಿ.ಹಿರೇಮಠ, ಹೆಚ್ಚುವರಿ ಮಹಾ ವಿಲೇಖನಾಧಿಕಾರಿ ಬಸವರಾಜ ಚೇಂಗಟಿ ಸೇರಿದಂತೆ ನ್ಯಾಯಮೂರ್ತಿಗಳು, ಕಕ್ಷಿದಾರರು, ವಕೀಲರು ಉಪಸ್ಥಿತರಿದ್ದರು.

‘ಅತ್ಯಧಿಕ ಪ್ರಕರಣ ಇತ್ಯರ್ಥ’ ‘ಲೋಕ ಅದಾಲತ್‌ನ ಯಶಸ್ಸಿಗೆ ವಿಮಾ ಕಂಪನಿಗಳ ಅಧಿಕಾರಿಗಳು ಪ್ಯಾನೆಲ್ ವಕೀಲರು ಕಕ್ಷಿದಾರರು ಮತ್ತು ಅವರ ವಕೀಲರು ಉತ್ತಮ ಸಹಕಾರ ನೀಡಿದರು. ಇದರ ಪರಿಣಾಮವಾಗಿ ನಾವು 520 ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ಸಾಧ್ಯವಾಯಿತು. ಈ ಸಂಖ್ಯೆಯು ಕಲಬುರಗಿ ಪೀಠದಲ್ಲಿ ಇದುವರೆಗಿನ ಗರಿಷ್ಠ ಪ್ರಕರಣಗಳಾಗಿವೆ’ ಎಂದು ಕಲಬುರಗಿ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಅಶೋಕ ಎಸ್.ಕಿಣಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.