
ಕಲಬುರಗಿ: ರಾಜ್ಯದಲ್ಲಿನ ವಿವಿಧ ಇಲಾಖೆಗಳಡಿ ಕಾರ್ಯನಿರ್ವಹಿಸುತ್ತಿರುವ ವಸತಿ ನಿಲಯಗಳಿಗೆ ಭೇಟಿ ನೀಡುವಂತೆ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಅವರ ಸೂಚನೆ ಅನುಸಾರ ಜಿಲ್ಲೆಯ ವಿವಿಧ ವಸತಿ ನಿಲಯಗಳಿಗೆ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು ಹಲವು ಅಕ್ರಮಗಳನ್ನು ಪತ್ತೆ ಹಚ್ಚಿದರು.
ಬಿಸಿಎಂ ಇಲಾಖೆಯ ಆರು, ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಲಾ ಎರಡು ವಸತಿ ನಿಲಯಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಅಲ್ಲಿ ಹಾಜರಾತಿಗೆ ತಕ್ಕಷ್ಟು ವಿದ್ಯಾರ್ಥಿಗಳು ಇಲ್ಲದ್ದನ್ನು ಪತ್ತೆ ಹಚ್ಚಿತು. ತಿಂಗಳಿಗೊಂದು ನೀಡುವ ಶುಚಿತ್ವದ ಕಿಟ್‌ಗಳನ್ನು ಹಲವು ತಿಂಗಳಿಂದ ಕೊಟ್ಟಿರದಿರುವುದು, ಉಪಾಹಾರದ ಪ್ರಮಾಣದಲ್ಲಿ ಕಡಿತ ಮಾಡಿರುವುದನ್ನು ತಂಡಗಳು ಪತ್ತೆ ಹಚ್ಚಿವೆ.
ಕಲಬುರಗಿಯ ವಸತಿ ನಿಲಯವೊಂದರಲ್ಲಿ 98 ಮಕ್ಕಳ ಹಾಜರಾತಿ ಇದ್ದರೆ, ಅಲ್ಲಿದ್ದುದು 62 ವಿದ್ಯಾರ್ಥಿಗಳು ಮಾತ್ರ. ಇದರಲ್ಲಿಯೂ 11 ವಿದ್ಯಾರ್ಥಿಗಳು ಅನಧಿಕೃತವಾಗಿ ವಾಸವಾಗಿರುವುದು ಕಂಡು ಬಂತು. ಇಷ್ಟಾಗಿಯೂ ಊಟ, ಉಪಾಹಾರ ಸೇರಿದಂತೆ ಎಲ್ಲ ಖರ್ಚು ಮಾತ್ರ 98 ವಿದ್ಯಾರ್ಥಿಗಳ ಲೆಕ್ಕದಲ್ಲಿ ಹಚ್ಚಲಾಗುತ್ತಿದೆ. ಈ ಅಕ್ರಮದಲ್ಲಿ ವಾರ್ಡನ್‌ರೊಂದಿಗೆ ಹಿರಿಯ ಅಧಿಕಾರಿಗಳು ಶಾಮೀಲಾಗಿರಬಹುದು ಎಂಬ ಸಂಶಯ ವ್ಯಕ್ತವಾಯಿತು.
ವಸತಿ ನಿಲಯದಲ್ಲಿ ಗುಣಮಟ್ಟದ ಆಹಾರಕ್ಕಾಗಿ ಸರ್ಕಾರ ಕೋಟ್ಯಂತರ ಖರ್ಚು ಮಾಡುತ್ತಿದ್ದರೂ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಊಟ ನೀಡುತ್ತಿರುವುದು ಕಂಡು ಬಂತು. ಚಿಕ್ಕದಾದ ಎರಡು ದೋಸೆ, ತಿಳಿ ನೀರಿನಂತಹ ಸಾಂಬಾರ್ ನೀಡಿದರೆ, ಕೆಲವೊಮ್ಮೆ ಸಣ್ಣ ಇಡ್ಲಿ ಮತ್ತೆ ತಿಳಿನೀರಿನ ಸಾಂಬರ್ ನೀಡುವುದು ಲೋಕಾಯುಕ್ತ ಅಧಿಕಾರಿಗಳ ಭೇಟಿ ವೇಳೆ ಕಂಡು ಬಂದಿದೆ. ಮಕ್ಕಳಿಗೆ ಹೊಟ್ಟೆಗೆ ಸರಿಯಾದ ಪೌಷ್ಟಿಕ ಆಹಾರ ನೀಡದಿದ್ದರೆ ಅರೆಹೊಟ್ಟೆಯಲ್ಲಿ ಓದುವುದು ಹೇಗೆ ಎಂದು ಲೋಕಾಯುಕ್ತ ಎಸ್ಪಿ ಸಿದ್ದರಾಜು ಕಳವಳ ವ್ಯಕ್ತಪಡಿಸಿದರು.
ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿದ ವಸತಿ ನಿಲಯಗಳಲ್ಲಿ ಆಯಾ ಇಲಾಖೆಗಳ ಮೇಲಧಿಕಾರಿಗಳು ಹತ್ತಾರು ತಿಂಗಳಿಂದ ಭೇಟಿ ನೀಡಿಯೇ ಇಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ. ಇಲಾಖೆಯ ಜಂಟಿ ನಿರ್ದೇಶಕರು. ಉಪನಿರ್ದೇಶಕರು ಸೇರಿ ಎಲ್ಲರೂ ದೂರವಾಣಿಯಲ್ಲಿಯೇ ಮಾಹಿತಿ ಪಡೆಯುತ್ತಾರೆ, ಖುದ್ದು ಭೇಟಿ ನೀಡುವುದು ಕಂಡು ಬಂದಿಲ್ಲ ಎಂದು ಅವರು ತಿಳಿಸಿದರು.
ಲೋಕಾಯುಕ್ತರ ಆದೇಶದಂತೆ ಈಗಾಗಲೇ ವಸತಿ ನಿಲಯಕ್ಕೆ ಅಧಿಕಾರಗಳ ತಂಡ ಭೇಟಿ ನೀಡಿದೆ. ಇನ್ನು ಕೆಲವು ಹಾಸ್ಟೆಲ್‌ಗಳಿಗೂ ಭೇಟಿ ನೀಡುವ ಸಾಧ್ಯತೆ ಇದೆ. ಜಿಲ್ಲೆಯ ಸಮಗ್ರ ವರದಿಯನ್ನು ನ. 22ರ ಆಸುಪಾಸಿನಲ್ಲಿ ಸಲ್ಲಿಕೆ ಮಾಡಲಾಗುವುದುಸಿದ್ದರಾಜು ಲೋಕಾಯುಕ್ತ ಎಸ್ಪಿ
l ಹಾಜರಾತಿಗೆ ತಕ್ಕಂತೆ ಮಕ್ಕಳ ಸಂಖ್ಯೆ ಇಲ್ಲ
l ಸೌಲಭ್ಯದ ಬಗ್ಗೆ ಪ್ರಶ್ನಿಸಿದರೆ ಸೂಕ್ತ ಉತ್ತರವಿಲ್ಲ
lಪ್ರಶ್ನಿಸುವ ವಿದ್ಯಾರ್ಥಿಗಳು ಟಾರ್ಗೆಟ್
l ಊಟ ಮಾಡಿ ವಿದ್ಯಾರ್ಥಿಗಳು ಮನೆಗೆ ಹೋಗುತ್ತಾರೆ ಎಂದ ವಾರ್ಡನ್‌ಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.