ADVERTISEMENT

ಖಜಾನೆ ಲೂಟಿಗಿಳಿದ ರಾಜ್ಯ ಸರ್ಕಾರ: ಬಿ.ಎಸ್. ಯಡಿಯೂರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 15 ಮೇ 2019, 10:49 IST
Last Updated 15 ಮೇ 2019, 10:49 IST
   

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ರಾಜ್ಯದ ಅಭಿವೃದ್ಧಿಯನ್ನು ಮರೆತ ರಾಜ್ಯ ಸರ್ಕಾರ ಖಜಾನೆ ಲೂಟಿಗಿಳಿದಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.

ತಾಲ್ಲೂಕಿನ ಕೊಂಚಾವರಂನಲ್ಲಿ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ ಜಾಧವ ಪರ ಬುಧವಾರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಬರಗಾಲ ಇದ್ದರೂ ಜನತೆಯ ಕಷ್ಟಗಳಿಗೆ ಸ್ಪಂದಿಸದ ಸರ್ಕಾರ ಇದ್ದರೂ ಸತ್ತಂತೆ ಆಗಿದೆ. ರಾಜ್ಯದ ಜನರನ್ನು‌ ಮರೆತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಭವಿಷ್ಯವಿಲ್ಲ. ಕುಡಿವ ನೀರಿನ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಜನ ಜಾನುವಾರುಗಳ ಕಷ್ಟ ಕೇಳುವವರೇ ಇಲ್ಲ. ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಪಕ್ಷಗಳ ನಾಯಕರ ಮಧ್ಯೆ ಆಂತರಿಕ ಕಚ್ಚಾಟ ಹೆಚ್ಚಾಗಿದೆ ಎಂದು ಹರಿಹಾಯ್ದರು.

ADVERTISEMENT

ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರನ್ನು ಅವಮಾನಿಸಿದ ಕಾಂಗ್ರೆಸ್ ನಾಯಕರಿಗೆ ಪಾಠ ಕಲಿಸಲು ಚಿಂಚೋಳಿ ಉಪ ಚುನಾವಣೆ ಅವಕಾಶ ಮಾಡಿಕೊಟ್ಟಿದೆ. ಚಿಂಚೋಳಿ ಮತದಾರರು ಹಣ, ಹೆಂಡ ತಿರಸ್ಕರಿಸಿ ಬಿಜೆಪಿಗೆ ಮತ ನೀಡಬೇಕು. ಡಾ. ಅವಿನಾಶ ಜಾಧವ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ದೇಶ ಆಳಿದ ಕಾಂಗ್ರೆಸ್‌ಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಜನ ಹಿತ ಮರೆತ ಪಕ್ಷದ ನಾಯಕರು ತಮ್ಮ ಉದ್ಧಾರ ಮಾಡಿಕೊಂಡಿದ್ದಾರೆಯೇ ಹೊರತು ಜನರ ಉದ್ಧಾರ ಮಾಡಲಿಲ್ಲ ಎಂದರು. ತಾಂಡಾ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ನಾನು. ಸುವರ್ಣ ಗ್ರಾಮ ಯೋಜನೆ ಮೂಲಕ ಹಳ್ಳಿಗಳ ಜನರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಸುವರ್ಣ ಭೂಮಿ ಯೋಜನೆ ಮೂಲಕ ರೈತರಿಗೆ ನೆರವಾಗಿದ್ದೇನೆ. ಚುನಾವಣಾ ಫಲಿತಾಂಶದ ನಂತರ ರಾಜಕೀಯ ಧೃವೀಕರಣ ಆರಂಭವಾಗಲಿದೆ. ಚಿಂಚೋಳಿಯಲ್ಲಿ ಒಂದು ವರ್ಷದ ಒಳಗಾಗಿ‌ ಸಕ್ಕರೆ ಕಾರ್ಖಾನೆ ಸ್ಥಾಪಿಸುತ್ತೇವೆ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.