ADVERTISEMENT

ಮಾತೆ ಮಾಣಿಕೇಶ್ವರಿ ದರ್ಶನಕ್ಕೆ ಅವಕಾಶ

ಭಾನುವಾರ ಒಂದೂವರೆ ಗಂಟೆ ಅವಕಾಶ ನೀಡಿದ ಟ್ರಸ್ಟ್‌ ಸದಸ್ಯರು

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 19:30 IST
Last Updated 23 ಜೂನ್ 2019, 19:30 IST
ಸೇಡಂ ತಾಲ್ಲೂಕಿನ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ನೆಲೆಸಿರುವ ಮಾಣಿಕ್ಯಗಿರಿಯಲ್ಲಿ ಅಮ್ಮನವರ ದರ್ಶನಕ್ಕೆ ಸಾಲುಗಟ್ಟಿ ನಿಂತಿರುವ ಭಕ್ತರು
ಸೇಡಂ ತಾಲ್ಲೂಕಿನ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ನೆಲೆಸಿರುವ ಮಾಣಿಕ್ಯಗಿರಿಯಲ್ಲಿ ಅಮ್ಮನವರ ದರ್ಶನಕ್ಕೆ ಸಾಲುಗಟ್ಟಿ ನಿಂತಿರುವ ಭಕ್ತರು   

ಸೇಡಂ: ಭಕ್ತರ ಬೇಡಿಕೆಯ ಮೇರೆಗೆ ಭಾನುವಾರ ಇಲ್ಲಿಗೆ ಸಮೀಪದ ಯಾನಾಗುಂದಿಯಲ್ಲಿ ಮಾತೆ ಮಾಣಿಕೇಶ್ವರಿ ಅವರ ದರ್ಶನಕ್ಕೆ ಸುಮಾರು ಒಂದೂವರೆ ಗಂಟೆ ಕಾಲ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಮಾತಾ ಮಾಣಿಕೇಶ್ವರಿ ಅವರು ಗುಹೆಯ ಹೊರಭಾಗದ ಕೋಣೆಯಲ್ಲಿ ಮಂಚದ ಮೇಲೆ ಮಲಗಿದ್ದನ್ನು ದೂರದಿಂದಲೇ ನೋಡಿದ ಭಕ್ತರು ನಮಸ್ಕರಿಸಿದರು.

ಹೊರ ಭಾಗದಿಂದ ಭಕ್ತರು ಸಾಲುಗಟ್ಟಿ ಬರಲು ಸೂಚಿಸಲಾಗಿದೆ. ಸಣ್ಣ ಗೇಟ್ ತೆರೆದು ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಲಾಗುತ್ತಿದೆ. ಸಾಲುಗಟ್ಟಿ ಬರುವ ಭಕ್ತರು ಅಮ್ಮನವರ ದರ್ಶನ ಪಡೆದು ಜೈಕಾರ ಕೂಗಿದರು.

ADVERTISEMENT

ಅಮ್ಮನವರ ಆರೋಗ್ಯ ಕಾಪಾಡುವ ಮತ್ತು ಸಾರ್ವಜನಿಕ ದರ್ಶನ ಕಲ್ಪಿಸುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಕರ್ತ ಶಿವಕುಮಾರ ನಿಡಗುಂದಾ ಹೈಕೋರ್ಟ್‌ನಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿ ಆರೋಗ್ಯದ ಮೇಲೆ ನಿಗಾ ಇಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಾರ್ವಜನಿಕ ಪ್ರಕಟಣೆ ಇಲ್ಲ: ಅಮ್ಮನವರ ಆರೋಗ್ಯದಲ್ಲಿ ಸಮಸ್ಯೆ ಇರುವ ಬಗ್ಗೆ ಜಿಲ್ಲಾಡಳಿತದಿಂದ ವರದಿ ಪಡೆದಿತ್ತು. ನಂತರ ಎಚ್ಚೆತ್ತುಕೊಂಡ ಮಾತಾ ಮಾಣಿಕೇಶ್ವರಿ ಟ್ರಸ್ಟ್ ಅಮ್ಮನವರಿಗೆ ಸುಸಜ್ಜಿತ ಬೆಡ್, ಸುಸಜ್ಜಿತ ಕೋಣೆ ಮತ್ತು ಮಹಿಳಾ ಸೇವಕಿಯನ್ನು ನೇಮಿಸಿತ್ತು.

ಈಗ ಪ್ರತಿ ಭಾನುವಾರ ಅಮ್ಮನವರ ದರ್ಶನ ಕಲ್ಪಿಸಲು ಮುಂದಾಗಿದೆ. ಆದರೆ ಸಾರ್ವಜನಿಕವಾಗಿ ಎಲ್ಲೂ ಅಮ್ಮನವರು ದರ್ಶನ ನೀಡುತ್ತಿರುವ ಬಗ್ಗೆ ಪ್ರಕಟಣೆ ನೀಡಿಲ್ಲ. ಕೇವಲ ಭಕ್ತರಿಂದ ಭಕ್ತರಿಗೆ ದೊರೆಯುವ ಮಾಹಿತಿ ಆಧಾರದ ಮೇಲೆ ಜನ ಬರುತ್ತಿದ್ದಾರೆ. ಟ್ರಸ್ಟ್‌ನ ನಡೆ ಭಕ್ತರಲ್ಲಿ ಅನುಮಾನ ಮೂಡುವಂತೆ ಮಾಡಿದೆ ಎಂದು ಅರ್ಜಿದಾರ ಶಿವಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಆಶ್ರಮಕ್ಕೆ ಧಕ್ಕೆ ತರುವ ಯಾವ ಉದ್ದೇಶ ನಮಗಿಲ್ಲ. ಅಮ್ಮನವರ ಆರೋಗ್ಯ, ಮುಕ್ತ ದರ್ಶನ, ಮಹಿಳಾ ಸೇವಕಿ ನೇಮಕವಾಗಬೇಕು. ಟ್ರಸ್ಟ್‌ನವರ ನಿಗೂಢ ನಡೆಯಿಂದ ಭಕ್ತರಲ್ಲಿ ಮಡುಗಟ್ಟಿರುವ ಆತಂಕ ದೂರ ಮಾಡಲು ಕೋರ್ಟ್‌ ಮೆಟ್ಟಿಲೇರಲಾಗಿದೆ. ಕೂಡಲೇ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಭಕ್ತರಿಗೆ ಅಮ್ಮನವರ ದರ್ಶನದ ಮಾಹಿತಿ ಕಲ್ಪಿಸಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.