ADVERTISEMENT

ಕೇಳಿದರೂ ಸಿಗುತ್ತಿಲ್ಲ ಉದ್ಯೋಗದ ‘ಖಾತ್ರಿ‘: ಉದ್ಯೋಗ ನೀಡಲು ಪಿಡಿಒಗಳ ಹಿಂದೇಟು

ಮನೋಜ ಕುಮಾರ್ ಗುದ್ದಿ
Published 16 ಸೆಪ್ಟೆಂಬರ್ 2023, 7:07 IST
Last Updated 16 ಸೆಪ್ಟೆಂಬರ್ 2023, 7:07 IST
ಕಲಬುರಗಿ ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದ ಹೊರವಲಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರು ಕೆರೆ ನಿರ್ಮಿಸುತ್ತಿರುವುದು (ಸಂಗ್ರಹ ಚಿತ್ರ)
ಕಲಬುರಗಿ ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದ ಹೊರವಲಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರು ಕೆರೆ ನಿರ್ಮಿಸುತ್ತಿರುವುದು (ಸಂಗ್ರಹ ಚಿತ್ರ)   

ಕಲಬುರಗಿ: ಗ್ರಾಮೀಣ ಪ್ರದೇಶದ ಬಡವರು ಉದ್ಯೋಗ ಹುಡುಕಿಕೊಂಡು ಅಲೆಯುವುದನ್ನು ತಪ್ಪಿಸಲು ಹಾಗೂ ಆರ್ಥಿಕವಾಗಿ ಕೊಂಚ ಉಸಿರಾಡಲು ಅನುವಾಗುವಂತೆ ಕೇಂದ್ರದ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ (ನರೇಗಾ)ಯಡಿ ಜಿಲ್ಲೆಯ ಹಲವೆಡೆ ಉದ್ಯೋಗದ ಬೇಡಿಕೆ ಇಟ್ಟವರಿಗೆ ಸಕಾಲಕ್ಕೆ ಉದ್ಯೋಗ ನೀಡಲು ಪಿಡಿಒಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವರ ಜಿಲ್ಲೆಯಲ್ಲಿಯೇ ಇಂತಹ ಘಟನೆಗಳು ನಡೆಯುತ್ತಿದ್ದು, ಖಾತ್ರಿ ಯೋಜನೆಯಡಿ ಉದ್ಯೋಗ ಸಿಗದೇ ಇರುವುದರಿಂದ ಬೇಸತ್ತು ಹಲವರು ರೈತರ ಹೊಲಗಳಿಗೆ ಕೂಲಿಗೆ ಹೋಗುತ್ತಿದ್ದಾರೆ. ಇಲ್ಲವೇ ಮುಂಬೈ, ಪುಣೆಯ ಹಾದಿ ಹಿಡಿಯುತ್ತಿದ್ದಾರೆ ಎಂದು ಹೋರಾಟಗಾರರು ಆರೋಪಿಸುತ್ತಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯ ಪ್ರಕಾರ ಒಂದು ಜಾಬ್‌ ಕಾರ್ಡ್‌ಗೆ ಗರಿಷ್ಠ 100 ದಿನಗಳವರೆಗೆ ಉದ್ಯೋಗ ನೀಡುವುದು ಪ್ರತಿ ಗ್ರಾಮ ಪಂಚಾಯಿತಿಯ ಜವಾಬ್ದಾರಿ. ಆದರೆ, ಬಹುತೇಕ ಕಡೆ ಈ ನಿಯಮ ಪಾಲನೆಯಾಗುತ್ತಿಲ್ಲ. ಹೀಗಾಗಿ, ಪ್ರತಿಯೊಂದನ್ನೂ ಹೋರಾಟ ಮಾಡಿಯೇ ಪಡೆಯಬೇಕು ಎಂಬಂತಾಗಿದೆ.‌

ADVERTISEMENT

‘ಫಾರ್ಮ್ ನಂ 6ನ್ನು ನೀಡಿದ ಕೂಡಲೇ ಅದನ್ನು ಸ್ವೀಕರಿಸಿದ ಬಗ್ಗೆ ಬರೆದುಕೊಡಬೇಕು. ಆದರೆ, 15 ದಿನಗಳ ಒಳಗಾಗಿ ಕೆಲಸ ನೀಡಲು ಆಗದಿದ್ದರೆ ನಿರುದ್ಯೋಗ ಭತ್ಯೆ ನೀಡಬೇಕು ಎಂಬ ನಿಯಮ ಇರುವುದರಿಂದ ಬಹುತೇಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಫಾರಂ ಸ್ವೀಕರಿಸಿದ ಬಗ್ಗೆ ದಾಖಲಾತಿ ನೀಡುವುದಿಲ್ಲ. ಇದರಿಂದಾಗಿ ತಿಂಗಳಾನುಗಟ್ಟಲೇ ಉದ್ಯೋಗ ಬೇಡಿಕೆ ಅರ್ಜಿಗೆ ಮುಕ್ತಿಯೇ ಸಿಗುವುದಿಲ್ಲ’ ಎಂದು ಆರೋಪಿಸುತ್ತಾರೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಜಿಲ್ಲಾ ಕಾರ್ಯದರ್ಶಿ ನೀಲಾ ಕೆ.

ಕೇಂದ್ರ ಸರ್ಕಾರವು ಖಾತ್ರಿ ಯೋಜನೆಗೆ ನೀಡಬೇಕಿದ್ದ ವಾರ್ಷಿಕ ಬಜೆಟ್‌ನಲ್ಲಿ ಸುಮಾರು ₹ 30 ಸಾವಿರ ಕೋಟಿಯಷ್ಟು ಕಡಿತ ಮಾಡಲಾಗಿದೆ. ಆ ಮೂಲಕ ಉದ್ಯೋಗ ಖಾತ್ರಿ ಯೋಜನೆಯ ಆಶಯವನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ ಎಂದು ಅವರು ಟೀಕಿಸುತ್ತಾರೆ.

‘ಶಹಾಬಾದ್ ತಾಲ್ಲೂಕಿನ ಮೂರು ಗ್ರಾಮ ಪಂಚಾಯಿತಿಗಳಲ್ಲಿಯೂ ಸಕಾಲಕ್ಕೆ ಉದ್ಯೋಗ ನೀಡುತ್ತಿಲ್ಲ. ಬಹುತೇಕ ಕೂಲಿಕಾರರ ಗರಿಷ್ಠ ಅವಧಿ ಮುಗಿಯದಿದ್ದರೂ ಕೆಲಸ ನೀಡಲು ಪಂಚಾಯಿತಿಗಳು ಸತಾಯಿಸುತ್ತಿವೆ’ ಎಂದು ಎಐಕೆಕೆಎಂಎಸ್ ರೈತ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣಪತರಾವ್ ಮಾನೆ ಆರೋಪಿಸುತ್ತಾರೆ.

ಕಲಬುರಗಿ ತಾಲ್ಲೂಕಿನ ಕುಸನೂರು ತಾಂಡಾದಲ್ಲಿ 300 ಜಾಬ್‌ ಕಾರ್ಡ್‌ಗಳಿದ್ದು, 100ಕ್ಕೂ ಅಧಿಕ ಜನರು ಕೆಲಸ ಮಾಡಿದ್ದಕ್ಕೆ ಕೂಲಿ ಹಣ ಇನ್ನೂ ‍ಪಾವತಿಯಾಗಿಲ್ಲ. ಒಂದಷ್ಟು ಜನರಿಗೆ ಅರ್ಧ ಕೂಲಿ ಮಾತ್ರ ನೀಡಿದ್ದಾರೆ ಎಂದು ಗ್ರಾಮೀಣ ಕೂಲಿಕಾರರ ಸಂಘಟನೆಯ ಮುಖಂಡ ರೇವಣಸಿದ್ದಪ್ಪ ಆರೋಪಿಸಿದರು.

ಪ್ರಿಯಾಂಕ್ ಖರ್ಗೆ
ಎಲ್ಲೆಲ್ಲಿ ಖಾತ್ರಿ ಯೋಜನೆ ಸಮಸ್ಯೆ
ಆಳಂದ ತಾಲ್ಲೂಕಿನ ಲಿಂಗನವಾಡಿ ಚಿಂಚನಸೂರು ಕೆರೆಯಂಬಲಗಾ ನರೋಣಾ ಸಂಗೊಳಗಿ‌ ಡಣ್ಣೂರ ಕರಹರಿ ಸಾವಳಗಿ ಬೆಳಮಗಿ ವಾಗ್ದರಿ ಖಜೂರಿ ನಿಂಬರ್ಗಾ ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಹಲಕರ್ಟಿ ಇಂಗಳಗಿ ಕಮರವಾಡಿ ಶಹಬಾದ್ ತಾಲ್ಲೂಕಿನ ಹೊನಗುಂಟಾ ಕಲಬುರಗಿ ತಾಲ್ಲೂಕಿನ ಕುಸನೂರು ತಾಂಡಾಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ನೀಡಲು ಹಿಂದೇಟು ಹಾಕಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಪರಿಶೀಲಿಸುವೆ: ಪ್ರಿಯಾಂಕ್ ಖರ್ಗೆ
‘ಆಳಂದ ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸರಿಯಾಗಿ ಉದ್ಯೋಗ ನೀಡಲಾಗುತ್ತಿಲ್ಲ ಎಂಬ ಬಗ್ಗೆ ದೂರುಗಳು ಬಂದಿವೆ. ಆದರೆ ಬೇರೆ ತಾಲ್ಲೂಕುಗಳಲ್ಲಿಯೂ ಈ ಸಮಸ್ಯೆ ಇರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ‍ಪರಿಶೀಲಿಸುತ್ತೇವೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ರಾಜ್ಯದಲ್ಲಿ ಒಟ್ಟು 13 ಕೋಟಿ ಮಾನವ ದಿನಗಳ ಗುರಿ ನಿಗದಿಪಡಿಸಲಾಗಿದ್ದು ಅಷ್ಟಕ್ಕೆ ಅನುದಾನ ಲಭ್ಯವಿದೆ. ಈಗಾಗಲೇ 8.5 ಕೋಟಿ ಮಾನವ ದಿನಗಳ ಗುರಿ ತಲುಪಿದ್ದೇವೆ. ಇದೇ 20ರಂದು ದೆಹಲಿಗೆ ತೆರಳುತ್ತಿದ್ದು ರಾಜ್ಯದಲ್ಲಿ ಬರಗಾಲ ಎದುರಾಗಿರುವುದರಿಂದ 16 ಕೋಟಿ ಮಾನವ ದಿನಗಳಿಗೆ ಅನುಮತಿ ನೀಡುವಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.