
ಕಲಬುರಗಿ: ಜಯತೀರ್ಥರ ಹಾಗೂ ಅಕ್ಷೋಭ್ಯತೀರ್ಥರ ಮೂಲವೃಂದಾವನ ದರ್ಶನಕ್ಕೆ ದೂರದಿಂದ ಬರುವ ಭಕ್ತರಿಗೆ ಅನುಕೂಲಕ್ಕಾಗಿ ಮಳಖೇಡ ಉತ್ತರಾದಿ ಮಠದ ಜಯತೀರ್ಥರ ಸನ್ನಿಧಾನದಲ್ಲಿ 100 ಕೊಠಡಿಗಳ ವಸತಿ ಗೃಹ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥರು ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಸತ್ಯಾತ್ಮತೀರ್ಥರು, ‘ಭಕ್ತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಶ್ರೀಮಠವು ಮಳಖೇಡದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕೈಕೊಳ್ಳಲು ನಿರ್ಧರಿಸಿದೆ. ಈಗಾಗಲೇ ಅನೇಕ ಭಕ್ತರು ಸಹಾಯಹಸ್ತ ನೀಡಲು ಮುಂದೆ ಬಂದಿದ್ದಾರೆ. ಎಲ್ಲರ ಸಹಕಾರದಿಂದ ಇಂದ್ರನ ಸನ್ನಿಧಾನದಲ್ಲಿ ಅನೇಕ ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗುವುದು’ ಎಂದರು.
ಮುಂಬೈನ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ ಪಂ.ವಿದ್ಯಾಸಿಂಹಾಚಾರ್ಯ ಮಾಹುಲಿ ಮಾತನಾಡಿ, ‘ಕ್ಷೇತ್ರಕ್ಕೆ ಬರುವ ಭಕ್ತರಿಗಾಗಿ 100 ಕೋಣೆಗಳ ಶ್ರೀ ಜಯತೀರ್ಥ ಭಕ್ತ ನಿವಾಸ, ಶುಭ ಕಾರ್ಯಗಳಿಗಾಗಿ ಕಲ್ಯಾಣ ಮಂಟಪ, ದಿವ್ಯವಾದ ವಿಜಯಸ್ತಂಭ, ಧ್ಯಾನ ಮಂದಿರ, ಯಜ್ಞ ಶಾಖೆ ಹಾಗೂ ಜಯತೀರ್ಥರಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯ, ಜಯತೀರ್ಥ ಸಂಸ್ಕೃತ ವಿದ್ಯಾಲಯ, ಗ್ರಂಥಾಲಯ, ಸಂಶೋಧನಾ ಕೇಂದ್ರ ಹಾಗೂ ಪ್ರಕಾಶನ ವಿಭಾಗ ಪ್ರಾರಂಭಿಸಲಾಗುವುದು’ ಎಂದು ವಿವರಿಸಿದರು.
ಮಠದ ದಿವಾನ್ ಪಂ.ಶಶಿ ಆಚಾರ್ಯ, ಪಂ.ವಿಶ್ವಪ್ರಜ್ಞಾಚಾರ್ಯ ಮಾಹುಲಿ, ಪಂ.ವಿದ್ಯಾಧೀಶಾಚಾರ್ಯ ಗುತ್ತಲ, ಪಂ.ಸತ್ಯಧ್ಯಾನಾಚಾರ್ಯ ಕಟ್ಟಿ, ಪಂ.ವೆಂಕಣ್ಣಾಚಾರ್ಯ ಪೂಜಾರ, ಪಂ.ಗೋಪಾಲಾಚಾರ್ಯ ಅಕಮಂಚಿ, ಪಂ.ಹಣಮಂತಾಚಾರ್ಯ ಸರಡಗಿ, ಪಂ.ವಿಷ್ಣುದಾಸಾಚಾರ್ಯ ಕಜೂರಿ, ಪಂ.ಸತ್ಯಬೋಧಾಚಾರ್ಯ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.