ADVERTISEMENT

ಮೋದಿಗೆ ಹೃದಯವೂ ಇಲ್ಲ, ದೇಶ ಪ್ರೇಮವೂ ಇಲ್ಲ: ಖರ್ಗೆ

​ಪ್ರಜಾವಾಣಿ ವಾರ್ತೆ
Published 6 ಮೇ 2019, 20:19 IST
Last Updated 6 ಮೇ 2019, 20:19 IST
ಖರ್ಗೆ
ಖರ್ಗೆ   

ಕಲಬುರ್ಗಿ: ‘ದೇಶಕ್ಕಾಗಿ ಹುತಾತ್ಮರಾದ ರಾಜೀವ್‌ಗಾಂಧಿ ಬಗ್ಗೆ ಕೀಳಾಗಿ ಮಾತನಾಡುವುದು ಸರಿಯಲ್ಲ. ನರೇಂದ್ರ ಮೋದಿ ಅವರಿಗೆ ಹೃದಯವೂ ಇಲ್ಲ, ದೇಶ ಪ್ರೇಮವೂ ಇಲ್ಲ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜೀವ್‌ಗಾಂಧಿ ನಂಬರ್ ಒನ್ ಭ್ರಷ್ಟನಾಗಿ ಸಾವನಪ್ಪಿದ್ದಾರೆ ಎಂದು ಮೋದಿ ಹೇಳಿದ್ದಾರೆ. 30 ವರ್ಷಗಳ ಹಿಂದೆಯೇ ಈ ವಿಚಾರವನ್ನು ಹೈಕೋರ್ಟ್ ವಜಾಗೊಳಿಸಿದೆ. ಆದರೂ, ಮೋದಿ ಈ ವಿಷಯವನ್ನು ಪ್ರಸ್ತಾಪಿಸಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸುಳ್ಳು ಹೇಳುವುದೇ ಮೋದಿ ಅವರ ಹುಟ್ಟುಗುಣ. ಯಾವ ವಿಚಾರವನ್ನು ಮಾತನಾಡಬೇಕು ಎನ್ನುವ ಕನಿಷ್ಠ ಪ್ರಜ್ಞೆಯೂ ಅವರಿಗೆ ಇಲ್ಲ. ಇಂಥವರು ನಮ್ಮ ದೇಶದ ಪ್ರಧಾನಿಯಾಗಿರುವುದು ದೇಶದ ಜನರ ದುರ್ದೈವ. ಕೇವಲ ಮಾತಿನಿಂದ ಮರುಳು ಮಾಡುವವರಿಗೆ ಈ ಬಾರಿ ಜನ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಖಾರವಾಗಿ ಹೇಳಿದರು.

ADVERTISEMENT

‘ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋಲು ನಿಶ್ಚಿತ’ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಖರ್ಗೆ, ‘ಮೋದಿಗೆ ಸ್ವಲ್ಪವೂ ರಾಜಕೀಯ ಜ್ಞಾನವಿಲ್ಲ. ದೇಶದಲ್ಲಿ 40 ಸ್ಥಾನಗಳನ್ನೂ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ. ಇದು ಸಾಧ್ಯವೇ. ಮೋದಿಗೆ ರಾಜಕೀಯ ಜ್ಞಾನವಷ್ಟೇ ಅಲ್ಲ, ಆರ್ಥಿಕ ಜ್ಞಾನವೂ ಇಲ್ಲ. ಚಿಕ್ಕಂದಿನಿಂದಲೇ ಮನೆ ಬಿಟ್ಟಿರುವುದರಿಂದ ಸಂಸ್ಕಾರವೂ ಇಲ್ಲ. ಅಮೇಥಿ, ರಾಯ್‌ಬರೇಲಿಯಲ್ಲಿ ಕಾಂಗ್ರೆಸ್ ಗೆದ್ದರೆ ಮೋದಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.