ADVERTISEMENT

ಹೆದ್ದಾರಿ ಕಾಮಗಾರಿಗಳ ತುರ್ತು ಅನುಮೋದನೆಗೆ ಒತ್ತಾಯ: ಖರ್ಗೆಯಿಂದ ಗಡ್ಕರಿ ಭೇಟಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 11:40 IST
Last Updated 15 ಡಿಸೆಂಬರ್ 2021, 11:40 IST
ನಿತಿನ್ ಗಡ್ಕರಿ ಮತ್ತು ಮಲ್ಲಿಕಾರ್ಜುನ ಖರ್ಗೆ
ನಿತಿನ್ ಗಡ್ಕರಿ ಮತ್ತು ಮಲ್ಲಿಕಾರ್ಜುನ ಖರ್ಗೆ   

ಕಲಬುರಗಿ: ‘ನನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶೀಘ್ರ ಮಂಜೂರಾತಿ ನೀಡಬೇಕು’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಸಚಿವರನ್ನು ಭೇಟಿ ಮಾಡಿದ ಖರ್ಗೆ ಅವರು, ‘ಬಹು ನಿರೀಕ್ಷಿತ ಕಲಬುರಗಿ ನಗರ ಬೈಪಾಸ್, ಯಾದಗಿರಿ ನಗರ ಬೈಪಾಸ್, ಹೈದರಾಬಾದ್–ವಿಜಯಪುರ ರಾಷ್ಟ್ರೀಯ ಹೆದ್ದಾರಿ (ಕರ್ನಾಟಕ ಗಡಿಯಿಂದ ಸಿಂದಗಿಯವರೆಗೆ) ಮಂಜೂರಾತಿ ಹಾಗೂ ಹೈದರಾಬಾದ್ ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ‌ ಬರುವ ಹಳ್ಳಿಖೇಡ–ಕೆ ಗ್ರಾಮದ ಬಳಿ ಅಪಾಯಕಾರಿ ತಿರುವುಗಳ ತೆರವು ಹಾಗೂ ರಸ್ತೆ ವಿಸ್ತರಣೆ ಮಾಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.

‘ಉದ್ದೇಶಿತ ಯೋಜನೆಗಳಿಂದ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಪ್ರದೇಶಗಳ‌ ಅಭಿವೃದ್ಧಿಗೆ ಸಹಕಾರಿಯಾಗಲಿದೆ’ ಎಂದು ಮನವರಿಕೆ ಮಾಡಿದ್ದಾರೆ.

ADVERTISEMENT

‘ಕಲಬುರಗಿ ಲೋಕಸಭಾ ವ್ಯಾಪ್ತಿಗೆ ಒಳಪಡುವ ಅಫಜಲಪುರ ಕ್ರಾಸ್, ಹುಮನಾಬಾದ್ ಕ್ರಾಸ್, ಶಹಾಬಾದ್ ಕ್ರಾಸ್ ಹಾಗೂ ಜೇವರ್ಗಿ ರಸ್ತೆಯನ್ನು ಒಳಗೊಂಡಂತೆ ಕಲಬುರಗಿ ಬೈಪಾಸ್ ರಸ್ತೆ‌ ನಿರ್ಮಾಣಕ್ಕೆ ಮಂಜೂರು ಕುರಿತಂತೆ ಈಗಾಗಲೇ ಹಲವಾರು ಬಾರಿ ಪತ್ರ ಬರೆಯಲಾಗಿತ್ತು. ಆದರೂ ಯೋಜನೆ ನನೆಗುದಿಗೆ ಬಿದ್ದಿವೆ. ಉದ್ದೇಶಿತ ಬೈಪಾಸ್ ರಸ್ತೆ ಪ್ರಕ್ರಿಯೆ ಹೊಸ ರಾಷ್ಟ್ರೀಯ ಹೆದ್ದಾರಿ ನಂಬರ್ ಕೊಡುವ ಹಂತದಲ್ಲಿದೆ ಎಂದು ಗೊತ್ತಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಭೇಟಿಯಾದಾಗ ಆದಷ್ಟು ಬೇಗ ಯೋಜನೆ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದೀರಿ. ನೀವು ನೀಡಿದ ಭರವಸೆಯ ಅಧರಿಸಿ ನಾನು ಈಗಾಗಲೇ ಮೂರೂ ಪತ್ರ ಬರೆದು ಹಿಂದುಳಿದ ಭಾಗದ ಪ್ರಮುಖ ರಸ್ತೆ ನಿರ್ಮಾಣ ಯೋಜನೆ ಕುರಿತಂತೆ ಮನವರಿಕೆ ಮಾಡಿಕೊಟ್ಟಿದ್ದೆ. ಉದ್ದೇಶಿತ ಯೋಜನೆಯನ್ನು ಈ ಕೂಡಲೇ ಮಂಜೂರು ಮಾಡುವಂತೆ ಮತ್ತೊಮ್ಮೆ ಈ ಮೂಲಕ ಈ ಭಾಗದ ಜನರ ಪರವಾಗಿ ತಮ್ಮಲ್ಲಿ ಕೋರುತ್ತೇನೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಯಾದಗಿರಿ ರಾಯಚೂರು ರಸ್ತೆ ನಿರ್ಮಾಣಗೊಂಡಿದ್ದು ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ಐದು ವರ್ಷ ಕಳೆದರೂ ಯಾದಗಿರಿ ಬೈ ಪಾಸ್ ರಸ್ತೆ ನಿರ್ಮಾಣ ಪ್ರಾರಂಭವಾಗಿಲ್ಲ. ಆದ್ದರಿಂದ ಆ ಭಾಗದ ಜನರು ಯೋಜನೆಯ ಲಾಭ ಪಡೆದುಕೊಳ್ಳದೆ ವಂಚಿತರಾಗಿದ್ದಾರೆ. ಜೊತೆಗೆ ಯೋಜನೆ ವಿಳಂಬವಾಗುತ್ತಿರುವುದರಿಂದಾಗಿ, ಯೋಜನೆಯ ವೆಚ್ಚದ ಗಾತ್ರವೂ ಹಿಗ್ಗುತ್ತದೆ.‌ ಇದು ಸರ್ಕಾರದ‌ ಬೊಕ್ಕಸಕ್ಕೆ ಹೊರೆಯಾಗುತ್ತದೆ. ಹಾಗಾಗಿ ಆದಷ್ಟು ಶೀಘ್ರ ಯೋಜನೆ ಕೈಗೆತ್ತಿಕೊಳ್ಳಬೇಕು’ ಎಂದು ಮಲ್ಲಿಕಾರ್ಜುನ ಖರ್ಗೆ ಕೋರಿದ್ದಾರೆ.

ಹೈದರಾಬಾದ್ ವಿಜಯಪುರ ರಾಷ್ಟ್ರೀಯ ಹೆದ್ದಾರಿ 50 ಬೀದರ್ ಜಿಲ್ಲೆಯ ಹಳ್ಳಿಖೇಡ–ಕೆ ಗ್ರಾಮದ ಮೂಲಕ ಹಾದು ಹೋಗಿದ್ದು, ಗ್ರಾಮದ ಬಳಿ ಅಪಾಯಕಾರಿ ತಿರುವುಗಳನ್ನು ಹೊಂದಿದೆ. ಹಾಗಾಗಿ, ಗ್ರಾಮದ ಬಳಿ ಆಗಾಗ ರಸ್ತೆ ಅಪಘಾತಗಳು ಸಂಭವಿಸುವುದರಿಂದ ಜನರು ಜೀವಭಯದಲ್ಲೇ ಅಡ್ಡಾಡುವಂತಾಗಿದೆ. ರಾಷ್ಟ್ರೀಯ ಹೆದ್ದಾರಿಯನ್ನು ವಿಸ್ತಾರ ಮಾಡಬೇಕು ಎಂದು ಹಳ್ಳಿಖೇಡ ಗ್ರಾಮದ ಜನರು ಮನವಿ ಮಾಡಿದ್ದಾರೆ. ಕೂಡಲೇ ಸಂಬಂಧಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ರಸ್ತೆ ವಿಸ್ತರಣೆ ಮಾಡಬೇಕು. ತಿರುವುಗಳನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಹೈದರಾಬಾದ್ ವಿಜಯಪುರ ಅಂತರರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ರಾಷ್ಟ್ರೀಯ ಹೆದ್ದಾರಿ 50ಕ್ಕೆ ಸೇರುವ ಸಿಂದಗಿಯವರೆಗಿನ ರಸ್ತೆಗೆ (ಚೆವಲ್ಲಾ, ಪರಗಿ, ಕೊಡಂಗಲ್, ಗುರಮಠಕಲ್, ಯಾದಗಿರಿ, ಶಹಾಪುರ,‌ ಭೀಮರಾಯನಗುಡಿ) ಯನ್ನು ರಾಷ್ಟ್ರೀಯ ಹೆದ್ದಾರಿ 163 ಎಂದು ನಾಮಕರಣ ಮಾಡಿ ಯೋಜನೆಗೆ ಮಂಜೂರಾತಿ ನೀಡಲು ಉದ್ದೇಶಿಸಲಾಗಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಯೋಜನೆ ಕರ್ನಾಟಕ ರಾಜ್ಯದ ಗಡಿಯವರೆಗೆ ಮಾತ್ರ ಮಂಜೂರಾಗಿದ್ದು, ಸಂವಿಧಾನದ ಕಲಂ 371 (ಜೆ) ಅಡಿಯಲ್ಲಿ ವಿಶೇಷ ಸೌಲಭ್ಯ ಹೊಂದಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಾದು ಹೋಗುವ ಬಾಕಿ ಉಳಿದ 151 ಕಿ.ಮೀ. ರಸ್ತೆಗೆ ಇನ್ನೂ ಮಂಜೂರಾತಿ ಸಿಕ್ಕಿಲ್ಲ. ಉದ್ದೇಶಿತ ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ಶೀಘ್ರದಲ್ಲೇ ಮಂಜೂರು ಮಾಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.