ADVERTISEMENT

ಮಲ್ಲಿಕಾರ್ಜುನ ಖರ್ಗೆ ಇಂದು ಕಲಬುರ್ಗಿಗೆ

ಸ್ವಾಗತಕ್ಕೆ ಭರ್ಜರಿ ಸಿದ್ಧತೆ, ರಸ್ತೆಗಳಲ್ಲಿ ರಾರಾಜಿಸುತ್ತಿವೆ ಫ್ಲೆಕ್ಸ್‌, ಸ್ವಾಗತ ಕಮಾನು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 1:48 IST
Last Updated 2 ಅಕ್ಟೋಬರ್ 2021, 1:48 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಕಲಬುರ್ಗಿ: ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ನಂತರ ಮಲ್ಲಿಕಾರ್ಜುನ ಖರ್ಗೆ ಅವರು ಮೊದಲ ಬಾರಿಗೆ ಇದೇ 2ರಂದು ನಗರಕ್ಕೆ ಬರುತ್ತಿದ್ದು, ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಜಿಲ್ಲಾ ಕಾಂಗ್ರೆಸ್‌ ಸಿದ್ಧತೆ ಮಾಡಿಕೊಂಡಿದೆ.

ಬೆಂಗಳೂರಿನಿಂದ ಶನಿವಾರ ಬೆಳಿಗ್ಗೆ 9.45ಕ್ಕೆ ವಿಮಾನದ ಮೂಲಕ ಖರ್ಗೆ ಅವರು ನಗರಕ್ಕೆ ಬರಲಿದ್ದಾರೆ. 11ಕ್ಕೆ ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಜಿಲ್ಲೆಯ ಹಿರಿಯ ನಾಯಕರು ಅವರನ್ನು ಬರಮಾಡಿಕೊಳ್ಳುವರು. ಅಲ್ಲಿಂದ ನೇರವಾಗಿ ಸಮಾರಂಭ ನಿಗದಿ ಮಾಡಿರುವ ರಾಜಾಪುರದ (ಕೆಜಿಬಿ ಬ್ಯಾಂಕ್‌ ಕಚೇರಿ ಹಿಂದೆ) ಅಂಬಾಭವಾನಿ ಕನ್ವೆನ್ಷಲ್‌ ಹಾಲ್‌ಗೆ ತೆರಳುವರು.‌

ಅಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಬೆಳಿಗ್ಗೆ 11.30ಕ್ಕೆ ಖರ್ಗೆ ಅವರ ಸನ್ಮಾನ ಸಮಾರಂಭ ನಡೆಯಲಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಬಸವರಾಜ ಪಾಟೀಲ ಮುರುಮ್ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಏಳೂ ಜಿಲ್ಲೆಗಳ ಹಿರಿಯ ನಾಯಕರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ADVERTISEMENT

ಕಲಬುರ್ಗಿ ವಿಮಾನ ನಿಲ್ದಾಣದಿಂದ ಅವರನ್ನು ಬೈಕ್‌ ರ್‍ಯಾಲಿ ಮೂಲಕ ಕರೆತರಲು ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದಾರೆ. ಸೇಡಂ ಮಾರ್ಗದ ರಸ್ತೆಯಲ್ಲಿ ಹಲವು ಅಭಿಮಾನಿಗಳು ಕ್ರೇನ್‌ಗಳ ಮೂಲಕ ಹೂಮಳೆಗರೆಯಲು ತಯಾರಿ ಮಾಡಿಕೊಂಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂದಿನ ರಸ್ತೆ, ಮಾರ್ಕೆಟ್‌ ರೋಡ್‌, ಹೊಸ ಜೇವರ್ಗಿ ರಸ್ತೆ, ಎಂಎಸ್‌ಕೆ ಮಿಲ್‌ ರೋಡ್‌, ಸ್ಟೇಷನ್ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ
ವರ್ಣಮಯ ಸ್ವಾಗತ ಕಮಾನುಗಳು ರಾರಾಜಿಸುತ್ತಿವೆ. ರಸ್ತೆ ವಿಭಜಕಗಳ ಮಧ್ಯೆ ಇರುವ ಜಾಗಗಳಲ್ಲಿ ಕಾರ್ಯಕರ್ತರು ಸ್ವಾಗತ ಕೋರುವ, ಅಭಿನಂದನೆ ಸಲ್ಲಿಸುವ ಫ್ಲೆಕ್ಸ್‌ಗಳನ್ನೂ ಹಾಕಿಕೊಂಡಿದ್ದಾರೆ. ಪ್ರಮುಖ ಚೌಕ, ವೃತ್ತಗಳನ್ನು ಪರಪರಿಯಿಂದ ಅಲಂಕಾರ ಮಾಡಿದ್ದು, ಕಾಂಗ್ರೆಸ್‌ ಧ್ವಜಗಳೂ ಹಾರಾಡುತ್ತಿವೆ.

‘ಕೊರೊನಾ ಕಾರಣದಿಂದಾಗಿ ಸುಮಾರು ಒಂದೂವರೆ ವರ್ಷದಿಂದ ಅವರು ಕಲಬುರ್ಗಿಗೆ ಬಂದಿರಲಿಲ್ಲ. ಈಗಲೂ ಕೋವಿಡ್‌ ಮಾರ್ಗಸೂಚಿಗಳು ಜಾರಿಯಲ್ಲಿರುವ ಕಾರಣ ನಾವು ಮೆರವಣಿಗೆ ಮಾಡುತ್ತಿಲ್ಲ. ಸರಳ ಕಾರ್ಯಕ್ರಮ ಮಾಡಬೇಕೆಂಬ ಉದ್ದೇಶ ದಿಂದ ಹೆಚ್ಚಿನ ಕಾರ್ಯಕರ್ತರನ್ನು ಸೇರಿಸುತ್ತಿಲ್ಲ. ಆದರೆ, ಅವರ ಅಭಿಮಾ ನಿಗಳ ಹೆಚ್ಚು ಸೇರುವ ಸಾಧ್ಯತೆ ಇದೆ’ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.