ADVERTISEMENT

ಕಲಾ ಪ್ರೌಢಿಮೆಯ ಮಲ್ಲಿಕಾರ್ಜುನ ದೇವಸ್ಥಾನ

ಕಾಳಗಿಯಲ್ಲಿ ವಾಸ್ತುಕಲೆಯ ಶ್ರೀಮಂತಿಕೆ, 11ನೇ ಶತಮಾನದ ಭವ್ಯ ಪರಂಪರೆ

ಗುಂಡಪ್ಪ ಕರೆಮನೋರ
Published 4 ಅಕ್ಟೋಬರ್ 2020, 3:31 IST
Last Updated 4 ಅಕ್ಟೋಬರ್ 2020, 3:31 IST
ಕಾಳಗಿ ಪಟ್ಟಣದ ಐತಿಹಾಸಿಕ ಮಲ್ಲಿಕಾರ್ಜುನ ದೇವಸ್ಥಾನ
ಕಾಳಗಿ ಪಟ್ಟಣದ ಐತಿಹಾಸಿಕ ಮಲ್ಲಿಕಾರ್ಜುನ ದೇವಸ್ಥಾನ   

ಕಾಳಗಿ: ಭವ್ಯ ಪರಂಪರೆ, ಸಾಂಸ್ಕೃತಿಕ ಶ್ರೀಮಂತಿಕೆ, ಉಜ್ವಲ ಇತಿಹಾಸ ಹೊಂದಿರುವ ಕಾಳಗಿ ಸ್ಮಾರಕಗಳು, ವೀರಗಲ್ಲುಗಳು ಮತ್ತು ಅಳಿದುಳಿದ ಐತಿಹಾಸಿಕ ಅವಶೇಷಗಳಿಂದ ತನ್ನದೇ ಆದ ಚರಿತ್ರೆಯನ್ನು ಒಳಗೊಂಡಿದೆ.

ಕಾಳಗಿಯ ಇತಿಹಾಸದ ಪುಟಗಳನ್ನು ತಿರುಚಿದಾಗ ಇಲ್ಲಿನ ಭವ್ಯ ಪರಂಪರೆ 11ನೇ ಶತಮಾನಕ್ಕೆ ಕೊಂಡೊಯ್ಯುತ್ತದೆ. ‘ದಕ್ಷಿಣಕಾಶಿ’ ಎಂದೇ ಖ್ಯಾತಿ ಪಡೆದಿರುವ ಕಾಳಗಿ ಹಿಂದೆ ‘ಮನ್ನೆದಡಿ 1000’ ನಾಡಿನ ರಾಜಧಾನಿ ಪಟ್ಟಣವಾಗಿತ್ತು ಎಂದು ತಿಳಿದುಬರುತ್ತದೆ. ಪ್ರಾಚೀನ ಶಾಸನಗಳಲ್ಲಿ ಕಾಳಗಿಯು ‘ಕಾಳುಗೆ’ ಎಂದೇ ಉಲ್ಲೇಖವಾಗಿದೆ.

ಇಂಥಹ ಐತಿಹಾಸಿಕ ಪರಂಪರೆ ಶ್ರೀಮಂತಿಕೆಯ ಕಾಳಗಿ ಊರಿನ ನಡುವೆ ಕಾಣಸಿಗುವ ಮಲ್ಲಿಕಾರ್ಜುನ ದೇವಸ್ಥಾನ ಶಾಸನೋಕ್ತ ಗೊಂಕೇಶ್ವರ ದೇವಾಲಯವಾಗಿದೆ. ಈ ದೇವಾಲಯವನ್ನು 1163ರಲ್ಲಿ ಮಹಾಮಂಡಳೇಶ್ವರ ಬಾಣ ವೀರಗೊಂಕರಸನು ನಿರ್ಮಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ADVERTISEMENT

ಈ ದೇವಾಲಯವು ಪೂರ್ವಾಭಿಮುಖವಾಗಿದ್ದು, ಎತ್ತರವಾದ ಜಗತಿ ಹಾಗೂ ಅಧಿಷ್ಟಾನದ ಮೇಲೆ ಬಹುಕೋನಾಕಾರದ ತಳ ವಿನ್ಯಾಸವುಳ್ಳ ಗರ್ಭಗೃಹ ಅಂತರಾಳ ಹಾಗೂ ತೆರೆದ ನವರಂಗಗಳನ್ನು ಹೊಂದಿದೆ.

ದೇಗುಲದ ಗರ್ಭಗೃಹದಲ್ಲಿ ಬೃಹತ್ತಾದ ಶಿವಲಿಂಗವಿದ್ದು ಇದರ ದ್ವಾರಬಂಧವು ಚತುರ್ ಶಾಖಾಲಂಕೃತವಾಗಿ ಇಕ್ಕೆಲಗಳಲ್ಲಿ ಶೈವ ದ್ವಾರಪಾಲಕರಿದ್ದಾರೆ. ಲಲಾಟದಲ್ಲಿ ಗಜಲಕ್ಷ್ಮಿ ಇದ್ದು ಉತ್ತರಾಂಗವನ್ನು ಪಂಚಶಿಖರಗಳಿಂದ ಅಲಂಕರಿಸಲಾಗಿದೆ. ಅಂತರಾಳದ ದ್ವಾರ ಬಂದವು ತ್ರಿಶಾಖಾಲಂಕೃತವಾಗಿದ್ದು ಜಾಲಾಂದ್ರಗಳಿವೆ.

ಈ ದೇವಾಲಯವನ್ನು ರಾಮೋಜ ಶಿಲ್ಪಿಯ ನೇತೃತ್ವದಲ್ಲಿ ಮಲ್ಲೋಜ, ಬಮ್ಮೋಜ, ಕೊಪ್ಪದ ಮಲ್ಲೋಜ, ಅವರೋಜ ಮೊದಲಾದ 12 ಜನ ಓಜರು ನಿರ್ಮಿಸಿದ್ದಾರೆ ಎಂದು ದೇವಸ್ಥಾನದಲ್ಲೇ ಇರುವ ಶಾಸನ ಪರೋಕ್ಷವಾಗಿ ತಿಳಿಸುತ್ತದೆ.

ದೇವಾಲಯದ ಒಳ ಮತ್ತು ಹೊರಭಿತ್ತಿಯು ಸುಂದರ ಶಿಲ್ಪಕಲೆ ಹಾಗೂ ವೈವಿಧ್ಯಮಯದಿಂದ ಚಿತ್ತಾಕರ್ಷಕವಾಗಿದೆ. ಪ್ರವಾಸಿಗರಿಗೆ ಕೈ ಮಾಡಿ ಕರೆಯುವ ಪ್ರೇಕ್ಷಣೀಯ ಸ್ಥಳ ಇದಾಗಿದೆ. ಇಲ್ಲಿನ ಶಾಸನ ಕಲಬುರ್ಗಿಯಲ್ಲಿ ಜರುಗಿದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನದಲ್ಲಿ ಮೂಡಿಬಂದು ಸ್ಥಳೀಯರಿಗೆ ಖುಷಿ ತಂದಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಈ ದೇವಸ್ಥಾನ ಹಾಳಾಗಿ ಹೋಗುತ್ತಿದೆ. ಆದ್ದರಿಂದ ಈ ದೇವಸ್ಥಾನದ ಸಂರಕ್ಷಣೆಗೆ ಸರ್ಕಾರ ಮುಂದಾಗಿ ಇಲ್ಲಿನ ವೈಭವವನ್ನು ಜೀವಂತವಾಗಿ ಇರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.