
ಕಾಳಗಿ: ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಈಗಿನ ಕಾಲದಲ್ಲಿ ತಾಲ್ಲೂಕಿನ ಮಂಗಲಗಿ ಗ್ರಾಮದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಮುಕ್ತ ವಾತಾವರಣದ ಜ್ಞಾನ ದೇಗುಲವಾಗಿದೆ.
77 ವರ್ಷಗಳ ಇತಿಹಾಸ ಹೊಂದಿರುವ ಶಾಲೆ ಪ್ರಸ್ತುತ ಎಲ್‌ಕೆಜಿಯಿಂದ 8ನೇ ತರಗತಿಯನ್ನು ಹೊಂದಿದ್ದು, 175 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಊರಿಂದ 2 ಕಿ.ಮೀ ದೂರವಿರುವ ಶಾಲೆ ವಿಶಾಲವಾದ ಮೈದಾನದಲ್ಲಿ ಭೌತಿಕ ಪರಿಸರ, ಆಂತರಿಕ ಶಿಕ್ಷಣದಿಂದ ನೋಡುಗರನ್ನು ಕೈ ಮಾಡಿ ಕರೆಯುತ್ತಿದೆ.
2023-24ನೇ ಸಾಲಿನಲ್ಲಿ ಪಿ.ಎಂ.ಶ್ರೀ ಯೋಜನೆಗೆ ಒಳಗಾದ ಶಾಲೆ ಗುಣಾತ್ಮಕ ಮತ್ತು ಸಮಗ್ರ ಶಿಕ್ಷಣದಿಂದ ಹೆಸರಾಗಿ ಮಾದರಿ ಶಾಲೆಯಾಗಿ ಹೊರಹೊಮ್ಮಿದೆ ಎನ್ನುತ್ತಾರೆ ಪೋಷಕರು.
ಮಕ್ಕಳ ನೆರವಿನಿಂದ ಶಾಲಾ ಆವರಣದಲ್ಲಿ ಕೈತೋಟ ಕಂಗೊಳಿಸುತ್ತಿದೆ. ಮಗುವಿಗೊಂದು ಗಿಡ ಶಾಲೆಗೊಂದು ವನ ಎಂಬಂತೆ ಬೇವು, ಸಾಗವಾನಿ, ಬಾದಾಮಿ, ತೆಂಗು, ದಾಳಿಂಬೆ, ನೇರಳೆ, ಹೊಂಗೆ, ತಪಸಿ, ಗುಲ್‌ಮೊಹರ್ ಹೀಗೆ 400 ಗಿಡ-ಮರಗಳ ಹಸಿರಿನ ಶಾಲಾವನ ಮಕ್ಕಳ ಸಂತಸವನ್ನು ಹೆಚ್ಚಿಸಿದೆ.
ಹೀಗೆ ಹೂವು, ತರಕಾರಿ, ಔಷಧಿಯ ಹಸಿರು ಬಳ್ಳಿ ಮಕ್ಕಳಿಂದ ಅರಳುವ ವಾತಾವರಣ ಇಲ್ಲಿದೆ. ವರ್ಷದ 12 ತಿಂಗಳು ಶಾಲಾವನದ ನಿರ್ವಹಣೆಯನ್ನು ಮಕ್ಕಳೇ ಮಾಡುತ್ತಿರುವುದು ವಿಶೇಷವಾಗಿದೆ. ಹಸಿಕಸ, ಒಣಕಸ, ಪರಿಸರ ಸಂರಕ್ಷಣೆ, ಶುದ್ಧಗಾಳಿ, ತಂಪಾದ ನೆರಳಿನ ಕಲ್ಪನೆ ಮಕ್ಕಳಿಗೆ ಕರಗತವಾಗಿದೆ.
ಇನ್ನೂ ಈ ಶಾಲೆಯ ಮಕ್ಕಳು ದೈಹಿಕ ಶಿಕ್ಷಣದ ಶಿಕ್ಷಕ ಇಲ್ಲದಿದ್ದರೂ ಥ್ರೋಬಾಲ್ ಸ್ಪರ್ಧೆಯಲ್ಲಿ 12 ಬಾರಿ ತಾಲ್ಲೂಕಿಗೆ, 2 ಬಾರಿ ಜಿಲ್ಲೆಗೆ ಮತ್ತು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕ್ರೀಡಾಲೋಕ, ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್, ವಿಜ್ಞಾನ ಶಿಕ್ಷಣ ಕೊಠಡಿಯ ನಿರ್ವಹಣೆ ಸ್ವತಃ ಮಕ್ಕಳೇ ಮಾಡುತ್ತಾರೆ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ.
ಒಟ್ಟಾರೆ, ಕನ್ನಡ ಮಾಧ್ಯಮ ಶಾಲೆ ಮತ್ತು ಹಳ್ಳಿ ಮಕ್ಕಳೆಂದರೆ ವಕ್ರದೃಷ್ಟಿಯಿಂದ ನೋಡುವ ಸದ್ಯದ ಪರಿಸ್ಥಿತಿಯಲ್ಲಿ ಈ ಶಾಲಾ ಬೆಳವಣಿಗೆಯ ಪ್ರತಿ ಹೆಜ್ಜೆಯಲ್ಲಿ ಮಕ್ಕಳೇ ಗುರುತರ ಜವಾಬ್ದಾರಿ ಹೊತ್ತಿರುವುದು ಮರೆಯುವಂತಿಲ್ಲ.
ಇಲ್ಲಿ ಮಕ್ಕಳಲ್ಲಿ ಹುಮ್ಮಸ್ಸು ಬಹಳಷ್ಟಿದೆ. ಊರಿನ ಜನರ ಸಹಕಾರವೂ ಚೆನ್ನಾಗಿದೆ. ಈ ಎಲ್ಲರ ಪರಿಶ್ರಮದಿಂದ ಶಾಲೆ ನೋಡುವಂತಾಗಿದೆ.ಸಂತೋಷ ಮುಖ್ಯಶಿಕ್ಷಕ
ಮಕ್ಕಳೇ ಸ್ಪಂದಿಸದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಇಲ್ಲ ಮಕ್ಕಳು ವಿಭಿನ್ನವಾಗಿದ್ದು, ಶಾಲೆಯ ಕೆಲಸಕ್ಕೆ ನಾಮುಂದು, ತಾಮುಂದು ಎನ್ನುತ್ತಾರೆ.ಸುರೇಶ ಮಡಿವಾಳ, ಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.