
ಕಲಬುರಗಿ: ನಗರದ ಜಗತ್ ವೃತ್ತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿ ಎದುರು ಗುರುವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಕ್ರಾಂತಿಕಾರಿ) ನೇತೃತ್ವದಲ್ಲಿ ಮನುಸ್ಮೃತಿ ದಹನ ಮಾಡಲಾಯಿತು.
ಇದಕ್ಕೂ ಮೊದಲು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಮಾಯಿಸಿದ ಸಮಿತಿ ಮುಖಂಡರು, ಪದಾಧಿಕಾರಿಗಳು ಜಗತ್ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಮನುಸ್ಮೃತಿಯ ಪ್ರತಿಯನ್ನು ಚಟ್ಟದ ಮೇಲಿಟ್ಟು ಶವಯಾತ್ರೆಯ ರೀತಿಯಲ್ಲಿ ಮೆರವಣಿಗೆ ಮಾಡಿದರು. ಮಹಿಳೆಯರು ಹೆಗಲ ಮೇಲೆ ಹೊತ್ತು ಸಾಗಿದರು.
ಈ ವೇಳೆ ಪದಾಧಿಕಾರಿಗಳು ‘ಮಾನವ ವಿರೋಧಿ ಮನುಸ್ಮೃತಿಗೆ ಧಿಕ್ಕಾರ’, ‘ದಲಿತ ವಿರೋಧಿ ಮನುಸ್ಮೃತಿಗೆ ಧಿಕ್ಕಾರ’ ಎಂದು ಕೂಗಿದರು. ಜಗತ್ ವೃತ್ತಕ್ಕೆ ತಲುಪಿದ ಬಳಿಕ ಮನುಸ್ಮೃತಿಯ ಪ್ರತಿಗೆ ಬೆಂಕಿ ಹಚ್ಚಲಾಯಿತು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅರ್ಜುನ ಭದ್ರೆ ಮಾತನಾಡಿ, ‘ಸಮಾಜದಲ್ಲಿ ಅಸ್ಪೃಶ್ಯತೆ, ತಾರತಮ್ಯಗಳ ಮೂಲಕ ಜನರ ತಲೆಯಲ್ಲಿ ಇನ್ನೂ ಮನುವಾದ, ಮನು ಜೀವಂತವಾಗಿದ್ದಾನೆ. ಅದು ತೊಲಗಬೇಕು. ಈ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿ ನಿರಂತರವಾಗಿ ಜಾಗೃತಿ, ಹೋರಾಟ ಮಾಡುತ್ತದೆ’ ಎಂದು ಹೇಳಿದರು.
‘ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಮಹಿಳೆಯರಿಗೆ ಮತ್ತು ಶೂದ್ರರಿಗೆ ಬ್ರಾಹ್ಮಣ್ಯದ ಬಂಧನದಿಂದ ಮುಕ್ತಗೊಳಿಸಲು 1927ರ ಡಿಸೆಂಬರ್ 25ರಂದು ಮಹಾಡದಲ್ಲಿ ಮನುಸ್ಮೃತಿ ದಹನ ಮಾಡಿದರು. ಆ ಚಾರಿತ್ರಿಕ ಘಟನೆಯ ಸ್ಮರಣಾರ್ಥ ಕಳೆದ 10 ವರ್ಷಗಳಿಂದ ಮನುಸ್ಮೃತಿ ದಹನ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ಮಲ್ಲಿಕಾರ್ಜುನ ಕ್ರಾಂತಿ, ಮರಿಯಪ್ಪ ಹಳ್ಳಿ, ಪ್ರಮುಖರಾದ ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಆಜಾದಪುರ, ಮಹೇಶ ಕೋಕಿಲೆ, ಅಜೀಜಸಾಬ ಐಕೂರ, ಸುಭಾಷ ಕಲ್ಮೋರೆ, ಪರಶುರಾಮ ರಾಜಾಪುರ, ಸಾಯಬಣ್ಣ ನಾಗಲೇಗಾಂವ, ರಾಜಕುಮಾರ ಹೊಸಮನಿ, ಮಲ್ಲಿಕಾರ್ಜುನ ಶಾಖಾನವರ, ಕುಮಾರ ಕೊಳೆಗೇರಿ, ರಾಮಣ್ಣ ಪಾಸ್ವಾನ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.