ಕಲಬುರಗಿ: ತರಕಾರಿ ವ್ಯಾಪಾರಿಗಳ ಅನುಕೂಲಕ್ಕಾಗಿ ನಿರ್ಮಾಣ ಮಾಡುತ್ತಿರುವ ಕಣ್ಣಿ ತರಕಾರಿ ಮಾರುಕಟ್ಟೆ ಸಂಕೀರ್ಣ ಕಟ್ಟಡ ಕಾಮಗಾರಿ ಆರಂಭವಾಗಿ ಮೂರು ವರ್ಷ 8 ತಿಂಗಳು ಕಳೆದರೂ ಆಮೆಗತಿಯಲ್ಲಿ ಸಾಗುತ್ತಿದೆ.
ನಗರದ ಎಂಎಸ್‌ಕೆ ಮಿಲ್ ರಸ್ತೆಯಲ್ಲಿ ಕೆಕೆಆರ್‌ಡಿಬಿಯಿಂದ ₹20 ಕೋಟಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ₹ 6.30 ಕೋಟಿ ಸೇರಿ ಒಟ್ಟು ₹26 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗೆ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದರು. ಅರ್ಧದಷ್ಟು ಕಾಮಗಾರಿ ಮಾಡಲಾಗಿತ್ತು.
ಕಾಂಗ್ರೆಸ್ ಸರ್ಕಾರ ಬಂದ ನಂತರ ಅನುದಾನದ ಕೊರತೆಯಿಂದ ಕೆಲ ತಿಂಗಳ ಕಾಲ ಸ್ಥಗಿತವಾಗಿತ್ತು. ಸರ್ಕಾರ ಬಂದು ಆರು ತಿಂಗಳ ಬಳಿಕ ಕಾಮಗಾರಿ ಆರಂಭವಾದರೂ ಪೂರ್ಣಮಾತ್ರ ಆಗುತ್ತಿಲ್ಲ ಎಂಬುದು ಅಲ್ಲಿನ ವ್ಯಾಪಾರಿಗಳ ಆರೋಪ.
ಕಣ್ಣಿ ತರಕಾರಿ ಮಾರುಕಟ್ಟೆಯಲ್ಲಿ ಸುಮಾರು 360ಕ್ಕೂ ಹೆಚ್ಚು ನೋಂದಾಯಿತ ತರಕಾರಿ ಮಾರಾಟಗಾರರಿದ್ದು, ಮಾರಾಟ ಮಾಡುವ ಸ್ಥಳದಲ್ಲಿ ದಿನನಿತ್ಯವೂ ದೂಳಿನ ಮಜ್ಜನ, ಪಕ್ಕದಲ್ಲಿಯೇ ಚರಂಡಿ ನೀರು ಹರಿಯುತ್ತದೆ. ಸಂತೆಯಲ್ಲಿ ಹಂದಿಗಳು ಸಂಚರಿಸುತ್ತಿವೆ.
ಕಸ, ಕೊಳಚೆ ಜಾಗದಲ್ಲಿಯೇ ಕುಳಿತು ವ್ಯಾಪಾರ ಮಾಡುವುದು ತರಕಾರಿ ವ್ಯಾಪಾರಿಗಳ ಗೋಳಾದರೆ, ಮಾರುಕಟ್ಟೆಗೆ ಬರುವ ಜನರು ಮೂಗಿಗೆ ಕರವಸ್ತ್ರ ಹಿಡಿದುಕೊಂಡೇ ಸಂಚರಿಸಬೇಕಿದೆ. ಕಾಮಗಾರಿ ಆರಂಭ ಮಾಡಿ ವರ್ಷದಲ್ಲಿಯೇ ಅಂಗಡಿಗಳನ್ನು ವ್ಯಾಪಾರಿಗಳಿಗೆ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ವರ್ಷಗಳೇ ಕಳೆದರೂ ವ್ಯಾಪಾರಿಗಳ ಕನಸು ಮಾತ್ರ ಸಾಕಾರಗೊಂಡಿಲ್ಲ.
ಸೌಕರ್ಯ ಮರೀಚಿಕೆ: ದಿನವಿಡಿ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 10.30ರ ವರೆಗೂ ತರಕಾರಿ ಮಾಡಲಾಗುತ್ತಿದೆ. ರೈತರು ತಾವು ಬೆಳೆದ ತರಕಾರಿಯನ್ನು ಇಲ್ಲಿಗೆ ತಂದು ಸಗಟು ದರದಲ್ಲಿ ಮಾರಾಟ ಮಾಡುತ್ತಾರೆ. ಅಲ್ಲಿಗೆ ಬರುವ ರೈತರಿಗೆ, ಇನ್ನು ಇಡೀ ದಿನ ಕುಳಿತು ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಇಲ್ಲ.
‘ಮಳೆ ಬಂದರೆ ಸಾಕು ವಸ್ತುಗಳು ನೀರುಪಾಲು, ಮಾರುಕಟ್ಟೆ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ರಾತ್ರಿಯಾಗುತ್ತಲೇ ನಮ್ಮ ವಸ್ತುಗಳನ್ನು ಹೊತ್ತುಕೊಂಡು ಹೋಗಬೇಕು. ಬಂಡಿ ಇದ್ದವರು ತಳ್ಳಿಕೊಂಡು ಹೋಗುತ್ತಾರೆ, ನಮ್ಮಂತಹವರು ಏನು ಮಾಡಬೇಕು’ ಎನ್ನುತ್ತಾರೆ ಮಹಿಳಾ ವ್ಯಾಪಾರಿ ಸಿದ್ದಮ್ಮ.
ಈ ಕುರಿತು ಮಾಹಿತಿ ಪಡೆಯಲು ಕರೆ ಮಾಡಿದರೆ ಲೋಕೋಪಯೋಗಿ ಇಲಾಖೆಯ ಇಇ ಅವರು ಕರೆಗೆ ಲಭ್ಯವಾಗಿಲ್ಲ.
ಸದ್ಯದ ತರಕಾರಿ ಮಾರುಕಟ್ಟೆಯಲ್ಲಿ ಯಾವುದೇ ಸೌಕರ್ಯವಿಲ್ಲ. ಹೊಸ ಕಟ್ಟಡ ಕಾಮಗಾರಿ ಬೇಗ ಮುಗಿಸಿ ಉದ್ಘಾಟಿಸಬೇಕುಪಾರ್ವತಿ ತರಕಾರಿ ವ್ಯಾಪಾರಿ
ವ್ಯಾಪಾರಿಗಳು ಕೊಳಚೆ ಜಾಗದಲ್ಲಿಯೇ ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ. ಬೇಗ ಕಾಮಗಾರಿ ಪೂರ್ಣಗೊಳಿಸಿ ಅಂಗಡಿಗಳ ಹಂಚಿಕೆ ಮಾಡಬೇಕುಜಗನ್ನಾಥ ಎಸ್. ಸೂರ್ಯವಂಶಿ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.