ಆಳಂದ: ತಾಲ್ಲೂಕಿನ ಧಂಗಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿದ್ದ ₹1.88 ಲಕ್ಷ ಮೌಲ್ಯದ ಇನ್ವರ್ಟರ್, ಪ್ರೊಜೆಕ್ಟರ್ ಸೇರಿದಂತೆ ಕಲಿಕಾ ಸಾಮಗ್ರಿ ಕಳವು ಮಾಡಿರುವ ಘಟನೆ ಬುಧವಾರ ನಡೆದಿದೆ.
ಗುರುವಾರ ಎಂದಿನಂತೆ ಶಿಕ್ಷಕರು, ವಿದ್ಯಾರ್ಥಿಗಳು ಶಾಲೆಗೆ ಬಂದಾಗ, ಕೊಠಡಿಗಳ ಬಾಗಿಲು ಕೀಲಿ ಮುರಿಯದೇ ರಾಡ್‌ಗಳನ್ನು ಎತ್ತಿ ಕಳವು ಮಾಡಿದನ್ನು ಗಮನಿಸಿ ನಿಂಬರ್ಗಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕ್ರೈಂ ಪಿಎಸ್‌ಐ ಬಸವರಾಜ ಸಣ್ಣಮನಿ ಅವರು ಬೆರಳಚ್ಚು, ಶ್ವಾನ ದಳದ ಸಮೇತ ಶಾಲೆಗೆ ಆಗಮಿಸಿ ಘಟನೆ ಕುರಿತು ಪರಿಶೀಲಿಸಿದ್ದಾರೆ.
ಪ್ರೊಜೆಕ್ಟರ್ ₹ 50 ಸಾವಿರ ಹಾಗೂ ಇನ್ವರ್ಟರ್, 8 ಬ್ಯಾಟರಿಗಳ ಅಂದಾಜು ಮೊತ್ತ ₹1.28 ಲಕ್ಷ ಹಾಗೂ ಧ್ವನಿ ವರ್ಧಕ ₹ 10 ಸಾವಿರ ಮೌಲ್ಯದ ಸಾಮಗ್ರಿ ಸೇರಿದಂತೆ ಇನ್ನೂ ಕೆಲವು ಸಾಮಾನುಗಳು ಕಳವು ಆಗಿರುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಶಾಲೆಯ ಮುಖ್ಯ ಶಿಕ್ಷಕಿ ಸ್ನೇಹಲತಾ ನಾಡಗೌಡ ಅವರು ಠಾಣೆಗೆ ದೂರು ನೀಡಿ, ಶಾಲೆಯಲ್ಲಿ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಕಳವು ಆದ ಸಾಮಗ್ರಿಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ಕುರಿತು ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.