ADVERTISEMENT

ಕಲಬುರ್ಗಿಯಲ್ಲಿ 29ರಂದು ಮತ್ತೆ ಕಲ್ಯಾಣ ಅಭಿಯಾನ

ಸಾಣೆಹಳ್ಳಿ ಶ್ರೀಗಳಿಂದ ವಿದ್ಯಾರ್ಥಿಗಳೊಂದಿಗೆ ಸಂವಾದ, ಸಾಮರಸ್ಯ ನಡಿಗೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 11:25 IST
Last Updated 25 ಆಗಸ್ಟ್ 2019, 11:25 IST
ಮತ್ತೆ ಕಲ್ಯಾಣ ಲಾಂಛನ
ಮತ್ತೆ ಕಲ್ಯಾಣ ಲಾಂಛನ   

ಕಲಬುರ್ಗಿ: ಶರಣ ಚಳವಳಿಯ ತಾತ್ವಿಕ ಭಿತ್ತಿಯೊಳಗಿನಿಂದ ಪರಿಹಾರಗಳನ್ನು ಹುಡುಕಿಕೊಳ್ಳುವ ನಿಟ್ಟಿನಲ್ಲಿ ಸಹಮತ ವೇದಿಕೆಯು ಆಯೋಜಿಸಿರುವ ಮತ್ತೆ ಕಲ್ಯಾಣ ಅಭಿಯಾನವು ಇದೇ 29ರಂದು ನಗರದ ಡಾ.ಎಸ್‌.ಎಂ.ಪಂಡಿತ್‌ ರಂಗಮಂದಿರದಲ್ಲಿ ನಡೆಯಲಿದೆ.

ನಗರದ ಮಹಾಂತೇಶ ನಗರದ ಬಸವಮಂಟಪದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಸ್ವಾಗತ ಸಮಿತಿ ಅಧ್ಯಕ್ಷ ಶರಣು ಪಪ್ಪಾ, ‘ಅಭಿಯಾನದ ನೇತೃತ್ವ ವಹಿಸಿರುವ ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಜೇವರ್ಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಆರ್‌.ವೆಂಕಟರೆಡ್ಡಿ, ಚಿಂತಕರಾದ ಪ್ರೊ.ಆರ್‌.ಕೆ.ಹುಡಗಿ, ವಿಶ್ವಾರಾಧ್ಯ ಸತ್ಯಂಪೇಟೆ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಅದೇ ದಿನ ಸಂಜೆ 4ಕ್ಕೆ ಗಂಜ ನಗರೇಶ್ವರ ಶಾಲೆಯಿಂದ ಎಸ್‌.ಎಂ.ಪಂಡಿತ್‌ ರಂಗಮಂದಿರದವರೆಗೆ ಸಹ ಧರ್ಮೀಯರೊಂದಿಗೆ ಸಾಮರಸ್ಯದ ನಡಿಗೆ ಆಯೋಜಿಸಲಾಗಿದೆ. ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಡಿ.ಕಿಶೋರಬಾಬು ಅವರು ಚಾಲನೆ ನೀಡಲಿದ್ದಾರೆ’ ಎಂದರು.

ಅಣದೂರು ಬುದ್ಧವಿಹಾರದ ಭಂತೇಜಿ ವರಜ್ಯೋತಿ, ಐವಾನ್‌ ಇ ಶಾಹಿ ಮಸೀದಿಯ ಇಮಾಮ, ದಲಿತ ಸಂಘರ್ಷ ಸಮಿತಿಯ ಅರ್ಜುನ ಭದ್ರೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ್‌ ಕಿಣ್ಣಿ, ಆರ್ಯವೈಶ್ಯ ಸಮುದಾಯದ ರವೀಂದ್ರ ಮುಕ್ಕಾ, ಜೈನ ಸಮುದಾಯದ ನಾಗನಾಥ ಚಿಂದೆ, ಪ್ರಭುಲಿಂಗ ಮಹಾಗಾಂವಕರ್‌, ಬಾಮ್‌ಸೇಫ್‌ನ ಸುಭಾಷ್ ಶೀಲವಂತ, ಸಿಖ್‌ ಸಮುದಾಯದ ಗುರ್ಮಿತ್‌ ಸಿಂಗ್‌, ಕ್ರೈಸ್ತ ಸಮುದಾಯದ ಡಾ.ರಾಬರ್ಟ್‌ ಮೈಕೆಲ್‌ ಮಿರಾಂಡಾ, ಮಹ್ಮದ್‌ ಯೂಸೂಫ್‌ ಪಟೇಲ್‌, ಮಡಿವಾಳ ಸಮುದಾಯದ ರುಕ್ಮಣ್ಣ ಮಡಿವಾಳ, ಮಾದಾರ ಚನ್ನಯ್ಯ ಸಮುದಾಯದ ಸಂಬಣ್ಣ ಹೊಳಕುಂದಿ, ವಡ್ಡರ ಸಮುದಾಯದ ಅನಿಲ ಜಾಧವ ಭಾಗವಹಿಸುವರು ಸಾಮರಸ್ಯದ ನಡಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ADVERTISEMENT

ಸಂಜೆ 6ಕ್ಕೆ ರಂಗಮಂದಿರದಲ್ಲಿ ಮತ್ತೆ ಕಲ್ಯಾಣ ಸಾರ್ವಜನಿಕ ಸಮಾವೇಶವು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಸಮಾವೇಶ ನೆರವೇರದ್ದು, ಸಾರಂಗಮಠ ಶ್ರೀಶೈಲ, ಸುಲಫಲ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ. ಸಾಣೆಹಳ್ಳಿಯ ಶಿವಸಂಚಾರ ಕಲಾವಿದರಿಂದ ವಚನ ಗಾಯನ ನಡೆಯಲಿದ್ದು, ಶರಣರ ಪ್ರತಿಭಟನೆಯ ಮಾರ್ಗ ಕುರಿತು ಡಾ.ಮೀನಾಕ್ಷಿ ಬಾಳಿ, ಶರಣರ ಪ್ರಶ್ನೆ–ಪ್ರತಿಭಟನೆಯ ದಾರಿ ಪಾರ್ಯಾಯದ ಗುರಿ ಕುರಿತು ಡಾ.ಬಸವರಾಜ ಸಾದರ ಉಪನ್ಯಾಸ ನೀಡಲಿದ್ದಾರೆ. ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಜಿ.ಬಿ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ರಾತ್ರಿ 8.30ಕ್ಕೆ ರಂಗಮಂದಿರದಲ್ಲಿ ಶಿವಸಂಚಾರ ತಂಡದಿಂದ ಪಂಡಿತಾರಾಧ್ಯ ಶಿವಾಚಾರ್ಯರು ರಚಿಸಿದ ‘ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನಗೊಳ್ಳಲಿದೆ. ರಾತ್ರಿ 10ಕ್ಕೆ ಸಾಮೂಹಿಕ ಪ್ರಸಾದ ಇರಲಿದೆ ಎಂದು ತಿಳಿಸಿದರು.

ಸ್ವಾಗತ ಸಮಿತಿ ಉಪಾಧ್ಯಕ್ಷ ರವೀಂದ್ರ ಶಾಬಾದಿ ಮಾತನಾಡಿ, ‘ಮತ್ತೆ ಕಲ್ಯಾಣ ಅಭಿಯಾನದ ಕುರಿತು ಜಿಲ್ಲೆಯ ಅಫಜಲಪುರ, ಜೇವರ್ಗಿಯಲ್ಲಿ ಪ್ರಚಾರ ಕೈಗೊಳ್ಳಲಾಗಿದೆ. ಸೋಮವಾರ (ಆ 26) ಯಡ್ರಾಮಿ, ಚಿಂಚೋಳಿ, ಸುಲೇಪೇಟದಲ್ಲಿ ಪ್ರಚಾರ ನಡೆಸಲಾಗುವುದು. ಕಲಬುರ್ಗಿಯಲ್ಲಿಯೂ ಎರಡು ವಾಹನಗಳನ್ನುಪ್ರಚಾರಕ್ಕೆ ಕಳಿಸಲಾಗಿದೆ. ಆ 27 ಅಥವಾ 28ರಂದು ನಗರದಲ್ಲಿ ಬೈಕ್‌ ರ‍್ಯಾಲಿ ನಡೆಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿಸಾರಂಗಮಠ ಶ್ರೀಶೈಲ, ಸುಲಫಲ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಚವದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು, ಸ್ವಾಗತ ಸಮಿತಿ ಗೌರವಾಧ್ಯಕ್ಷೆ ವಿಲಾಸವತಿ ಖೂಬಾ, ಆರ್‌.ಕೆ.ಹುಡಗಿ, ಆರ್‌.ಜಿ.ಶೆಟಗಾರ, ವಿಜಯಕುಮಾರ್ ತೇಗಲತಿಪ್ಪಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.