ADVERTISEMENT

ಕಾರ್ಮಿಕ ಕಾನೂನು ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

ಜಿಲ್ಲಾ ಕಾರ್ಮಿಕ ಕಚೇರಿ ಎದುರು ಔಷಧ ಮಾರಾಟ ಪ್ರತಿನಿಧಿಗಳ ಧರಣಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 15:39 IST
Last Updated 22 ಆಗಸ್ಟ್ 2019, 15:39 IST
ಕರ್ನಾಟಕ ರಾಜ್ಯ ಔಷಧ ಮಾರಾಟ ಪ್ರತಿನಿಧಿಗಳ ಸಂಘಟನೆ ಕಾರ್ಯಕರ್ತರು ಕಾರ್ಮಿಕ ಇಲಾಖೆ ಕಚೇರಿ ಎದುರು ಗುರುವಾರ ಕಲಬುರ್ಗಿಯಲ್ಲಿ ಧರಣಿ ನಡೆಸಿದರು
ಕರ್ನಾಟಕ ರಾಜ್ಯ ಔಷಧ ಮಾರಾಟ ಪ್ರತಿನಿಧಿಗಳ ಸಂಘಟನೆ ಕಾರ್ಯಕರ್ತರು ಕಾರ್ಮಿಕ ಇಲಾಖೆ ಕಚೇರಿ ಎದುರು ಗುರುವಾರ ಕಲಬುರ್ಗಿಯಲ್ಲಿ ಧರಣಿ ನಡೆಸಿದರು   

ಕಲಬುರ್ಗಿ: ‘ಔಷಧ ಮಾರಾಟಗಾರರನ್ನು ಸಂಸ್ಥೆಗಳು ಇನ್ನಷ್ಟು ಶೋಷಿಸಲು ಅನುಕೂಲವಾಗುವ ತಿದ್ದುಪಡಿಗಳನ್ನು ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳಲ್ಲಿ ಮಾಡಿದೆ’ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಔಷಧ ಮಾರಾಟ ಪ್ರತಿನಿಧಿಗಳ ಸಂಘಟನೆ ಕಾರ್ಯಕರ್ತರು ಕಾರ್ಮಿಕ ಇಲಾಖೆ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.

‘ಕಾರ್ಮಿಕ ಕಾಯ್ದೆಯ ವೇತನ ಸಂಹಿತೆಯಲ್ಲಿ ಕಾರ್ಮಿಕರು ಮತ್ತು ಕೆಲಸಗಾರರ ಪದಗಳನ್ನು ಪರಸ್ಪರ ಬದಲಾಯಿಸುವ ರೀತಿಯಲ್ಲಿ ಉಪಯೋಗಿಸಲಾಗಿದ್ದು, ಇವುಗಳ ವ್ಯಾಖ್ಯಾನ ಹಾಗೂ ಅನುಷ್ಠಾನದಲ್ಲಿ ಸಾಕಷ್ಟು ಗೊಂದಲಗಳಿವೆ. ಇದರಿಂದಾಗಿ ಔಷಧ ಕಂಪನಿಗಳ ಮಾಲೀಕರು ಮಾರಾಟ ಪ್ರತಿನಿಧಿಗಳನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಲು ಅವಕಾಶ ಕಲ್ಪಿಸಲಾಗಿದೆ’ ಎಂದು ದೂರಿದರು.

ಔದ್ಯೋಗಿಕ ಸುರಕ್ಷತೆ ಮತ್ತು ಕೆಲಸದ ನಿಯಮದ ಸಂಹಿತೆಯಲ್ಲಿ 1976ರಲ್ಲಿ ಜಾರಿಯಾದ ಎಸ್‌ಪಿಇ ಕಾಯ್ದೆಯನ್ನು ರದ್ದುಗೊಳಿಸುವುದಾಗಿ ತಿಳಿಸಲಾಗಿದೆ. ಇದರಿಂದ ಮಾರಾಟ ಪ್ರತಿನಿಧಿಗಳು ಹೊಂದಿರುವ ಹಕ್ಕುಗಳು ಮೊಟಕುಗೊಳ್ಳಲಿವೆ. ದೇಶದಾದ್ಯಂತ ಇರುವ 5 ಲಕ್ಷಕ್ಕೂ ಅಧಿಕ ಮಾರಾಟ ಪ್ರತಿನಿಧಿಗಳಿಗೆ ಜೀವನಾಧಾರಕ್ಕೆ ಕಂಟಕವಾಗಲಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.

ADVERTISEMENT

ಕಾರ್ಮಿಕ ಕಾಯ್ದೆಯ ತಿದ್ದಿಪಡಿಗಳನ್ನು ಅನುಷ್ಠಾನ ಮಾಡಬಾರದು. ಎಸ್‌ಪಿಇ ಕಾಯ್ದೆಯನ್ನು ರದ್ದುಪಡಿಸುವ ಪ್ರಸ್ತಾವವನ್ನು ಹಿಂದಕ್ಕೆ ಪಡೆಯಬೇಕು. 2017ರ ಆಗಸ್ಟ್‌ನಲ್ಲಿ ನಡೆದ ಕೈಗಾರಿಕಾ ತ್ರಿಪಕ್ಷೀಯ ಸಭೆಯಲ್ಲಿ ಚರ್ಚೆಯಾದಂತೆ ಕಾರ್ಮಿಕ ಸಂಘಟನೆಗಳ ಪ್ರಸ್ತಾವದಂತೆ ಮಾರಾಟ ಪ್ರತಿನಿಧಿಗಳಿಗೆ ಎಸ್‌ಪಿಇ ಕಾಯ್ದೆಯ ನಿಯಮಗಳನ್ವಯ ಶಾಸನಬದ್ಧ ಕೆಲಸದ ಅವಧಿಯನ್ನು ಕೂಡಲೇ ಸೂಚಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಮಹಾದೇವ ಮಾನಕರ, ಆನಂದ ಎನ್‌.ಜಿ., ಸಂಜೀವ ದೇಶಪಾಂಡೆ, ಶರಣಬಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.