ADVERTISEMENT

ಮೆಗಾ ಜವಳಿ ಪಾರ್ಕ್‌ಗೆ 24ರಂದು ಶಂಕುಸ್ಥಾಪನೆ: ಸಂಸದ ಉಮೇಶ

ಮೊದಲ ಹಂತದಲ್ಲಿ ₹ 500 ಕೋಟಿ ಬಿಡುಗಡೆ, ಒಂದು ಲಕ್ಷ ಉದ್ಯೋಗ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 15:23 IST
Last Updated 18 ಮಾರ್ಚ್ 2023, 15:23 IST
ಉಮೇಶ ಜಾಧವ
ಉಮೇಶ ಜಾಧವ   

ಕಲಬುರಗಿ: ತಾಲ್ಲೂಕಿನ ಹೊನ್ನಕಿರಣಗಿ ಹಾಗೂ ಫಿರೋಜಾಬಾದ್ ಬಳಿ ಮೆಗಾ ಜವಳಿ ಪಾರ್ಕ್‌ಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದ್ದು, ಇದೇ ಮಾ.24ರಂದು ಜವಳಿ ಪಾರ್ಕ್ ಆರಂಭಕ್ಕೆ ಶಂಕುಸ್ಥಾಪನೆ ಹಮ್ಮಿಕೊಳ್ಳಲಾಗುವುದು ಎಂದು ಸಂಸದ ಡಾ. ಉಮೇಶ ಜಾಧವ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಲವು ವರ್ಷಗಳ ಬೇಡಿಕೆಯಾಗಿದ್ದ ಜವಳಿ ಪಾರ್ಕ್‌ಗೆ ಕೊನೆಗೂ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು ಖುಷಿಯ ವಿಚಾರ. ಕೇಂದ್ರ ಸರ್ಕಾರವು ಆರಂಭಿಕ ಹಂತದಲ್ಲಿ ಪಾರ್ಕ್ ಅಭಿವೃದ್ಧಿಗೆ ₹ 500 ಕೋಟಿ ನೀಡಲಿದೆ. ಹಂತ ಹಂತವಾಗಿ ₹ 10 ಸಾವಿರ ಕೋಟಿ ಹೂಡಿಕೆ ಮಾಡಲಿದೆ. ಕೇಂದ್ರ ತಂಡವು ಹಲವು ಬಾರಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತ್ತು. 100ಕ್ಕೂ ಅಧಿಕ ಷರತ್ತುಗಳನ್ನು ಪಾಲಿಸಲಾಗಿದೆ. ಹೀಗಾಗಿ, ಮೆಗಾ ಜವಳಿ ಪಾರ್ಕ್ ಮಂಜೂರಾಗಿದೆ’ ಎಂದರು.

ಮೆಗಾ ಜವಳಿ ಪಾರ್ಕ್ ಆರಂಭವಾಗುವ ಜಾಗದಲ್ಲಿ ಸಂಶೋಧನಾ ಕೇಂದ್ರ, ಪ್ಯಾಕಿಂಗ್ ಯೂನಿಟ್ ಸೇರಿದಂತೆ ಅನೇಕ ಘಟಕಗಳು ಸ್ಥಾಪನೆಯಾಗಲಿವೆ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರ ಜೊತೆ ಸೇರಿ ಕೇಂದ್ರದ ಮೇಲೆ ನಿರಂತರವಾಗಿ ಒತ್ತಡ ಹಾಕಿದ್ದರಿಂದಲೇ ಬೃಹತ್ ಯೋಜನೆ ದಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ADVERTISEMENT

‘2021ರ ಕೇಂದ್ರ ಬಜೆಟ್‌ನಲ್ಲಿ ಕಲಬುರಗಿಗೆ ಮೆಗಾ ಜವಳಿ ಪಾರ್ಕ್ ಘೋಷಣೆ ಆಗಿತ್ತು. ಈ ನಿಟ್ಟಿನಲ್ಲಿ ನಿರಂತರ ಹೋರಾಟ ಮಾಡಿದ್ದೆ. ಕೆಕೆಸಿಸಿಐ ಸಭಾಂಗಣದಲ್ಲಿ ನಡೆದ ಉದ್ಯಮಿಗಳ ಸಭೆಯಲ್ಲಿ ವಾಗ್ದಾನ ಮಾಡಿದ್ದೆ. ಒಂದು ವೇಳೆ ಕಲಬುರಗಿಯಿಂದ ಮೆಗಾ ಜವಳಿ ಪಾರ್ಕ್ ಕೈತಪ್ಪಿದ್ದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದೆ. ಎರಡು ವರ್ಷಗಳ ನಿರಂತರ ಹೋರಾಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದೆ’ ಎಂದರು.

ಒಂದು ಲಕ್ಷ ಮಂದಿಗೆ ಉದ್ಯೋಗ: ಮೆಗಾ ಜವಳಿ ಪಾರ್ಕ್ ಸ್ಥಾಪನೆ ಆಗುತ್ತಿರುವುದರಿಂದ ಸ್ಥಳೀಯವಾಗಿ ಒಂದು ಲಕ್ಷ ಮಂದಿಗೆ ಉದ್ಯೋಗ ಲಭಿಸಲಿದೆ. ಸದ್ಯ 50 ಸಾವಿರ ಜನರಿಗೆ ನೇರ ಉದ್ಯೋಗ ದೊರೆಯಲಿದೆ. ಗುರುಮಠಕಲ್, ಚಿಂಚೋಳಿ, ಚಿತ್ತಾಪುರ, ಆಳಂದ ಮತ್ತಿತರ ಕಡೆ ವಲಸೆ ಹೋಗುವವರನ್ನು ತಡೆದು ಅವರಿಗೆ ಉದ್ಯೋಗ ದೊರಕಿಸಿಕೊಡುವ ಚಿಂತನೆ ಇದೆ. ರೇಮಂಡ್ಸ್, ಸಿಯಾರಮ್ಸ್ ಸೇರಿದಂತೆ ಜಗತ್ತಿನ 100 ದೊಡ್ಡ ಕಂಪನಿಗಳು ಹೂಡಿಕೆ ಮಾಡಲಿವೆ. ಇದಕ್ಕೆ ಕೇಂದ್ರ ಸರ್ಕಾರದಿಂದ ರಿಯಾಯಿತಿ, ಪ್ರೋತ್ಸಾಹ ಸಿಗಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.

‘ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಮಾರ್ಚ್‌ 31ರೊಳಗೆ ಜಾರಿಗೊಳ್ಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಅಗತ್ಯ ಪೂರ್ವಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಖುದ್ದು ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ. ಗಡುವು ತಪ್ಪಿದರೂ, ಏಪ್ರಿಲ್ ಮೊದಲ ವಾರದೊಳಗೆ ನೈಟ್ ಲ್ಯಾಂಡಿಂಗ್ ಆರಂಭಗೊಳ್ಳುವ ಸಾಧ್ಯತೆಗಳಿವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಶಹರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ಬಸವರಾಜ ಬೆಣ್ಣೂರ ಇದ್ದರು.

ಮೆಗಾ ಜವಳಿ ಪಾರ್ಕ್‌ಗೆ ಸ್ಥಳ ಗುರುತಿಸಿ ಹಸ್ತಾಂತರಿಸಲಾಗಿದೆ. ನೀರು, ಸಾರಿಗೆ ಸಮಸ್ಯೆ ಆಗುವುದಿಲ್ಲ. ಹೀಗಾಗಿ, ಕಲಬುರಗಿಯಿಂದ ಬೇರೆಡೆ ಸ್ಥಳಾಂತರವಾಗುವ ಪ್ರಶ್ನೆಯೇ ಬರುವುದಿಲ್ಲ. ಇದು ಚುನಾವಣಾ ಘೋಷಣೆಯೂ ಅಲ್ಲ
ಡಾ. ಉಮೇಶ ಜಾಧವ
ಸಂಸದ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.