ಜೇವರ್ಗಿ ತಾಲ್ಲೂಕಿನ ಸೊನ್ನ ಗ್ರಾ.ಪಂಗೆ ಬೀಗ ಹಾಕಿರುವುದು
ಜೇವರ್ಗಿ: ಗ್ರಾಮ ಪಂಚಾಯಿತಿಗೆ ಬಾರದ ಪಿಡಿಒ ಕಾರ್ಯವೈಖರಿಗೆ ಬೇಸತ್ತು ಸದಸ್ಯೆಯೊಬ್ಬರು ಗ್ರಾ.ಪಂ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ನಡೆದಿದೆ.
ಸೊನ್ನ ಗ್ರಾ.ಪಂ ಪಿಡಿಒ ಸಲೀಮ್ ಪಟೇಲ ಕಳೆದ ಕೆಲ ತಿಂಗಳುಗಳಿಂದ ಪಂಚಾಯತಿಗೆ ಬಾರದ ಹಿನ್ನೆಲೆ ಗ್ರಾ.ಪಂ ಸದಸ್ಯೆ ಸಾಬಮ್ಮ ಮಲ್ಲಪ್ಪ ಹೆಗಡೆ ಬುಧವಾರ ಬೆಳಿಗ್ಗೆ 8ಕ್ಕೆ ಬೀಗ ಜಡಿದು ಪಿಡಿಒ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
‘ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪ, ಆಸ್ತಿ ನೊಂದಣಿ, ರಸ್ತೆ, ಚರಂಡಿ, ಸ್ವಚ್ಚತೆ ಹೀಗೆ ಹತ್ತು ಹಲವಾರು ಸಮಸ್ಯೆಗಳು ತಾಂಡವಾಡುತ್ತಿವೆ. ಗ್ರಾಮಸ್ಥರು ಸಮಸ್ಯೆ ಹೊತ್ತುಕೊಂಡು ನಿತ್ಯ ಪಂಚಾಯಿತಿಗೆ ಬಂದರೂ ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಫೋನ್ ಮೂಲಕ ಸಂಪರ್ಕಿಸಲು ಸಾಕಷ್ಟು ಬಾರಿ ಪ್ರಯತ್ನಿಸಿದಾಗ ಸ್ವಿಚ್ ಆಪ್ ಬರುತ್ತಿದೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ತಾಲ್ಲೂಕು ಪಂಚಾಯಿತಿ ಇಒ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಆಕ್ರೋಶ ಹೊರಹಾಕಿದರು.
‘ಕಲಬುರಗಿ ನಗರದಲ್ಲಿ ಮನೆ ಮಾಡಿಕೊಂಡಿರುವ ಪಿಡಿಒ ಅವರು ಕಚೇರಿಗೆ ಬಾರದೇ ಇರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಪಿಡಿಒ ಕಾರ್ಯವೈಖರಿ ವಿರುದ್ದ ಜಿ.ಪಂ ಸಿಇಒ ಭನ್ವರಸಿಂಗ್ ಮೀನಾ ಅವರಿಗೆ ಸದಸ್ಯರೆಲ್ಲರೂ ಸೇರಿ ದೂರು ನೀಡಲಾಗುವುದು. ಪಿಡಿಒ ವಿರುದ್ದ ಸೂಕ್ತ ಕ್ರಮಕೈಗೊಂಡು ಬೇರೆ ಪಿಡಿಒ ಅವರನ್ನು ನೇಮಕ ಮಾಡುವಂತೆ ಒತ್ತಾಯಿಸಲಾಗುವುದು’ ಎಂದು ಸಾಬಮ್ಮ ಹೆಗಡೆ ಪ್ರಜಾವಾಣಿಗೆ ತಿಳಿಸಿದರು.
ಪಂಚಾಯಿತಿಗೆ ಪಿಡಿಒ ಬಾರದ ಕಾರಣ ಬಡಾವಣೆಯ ಜನ ನಮಗೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅನೇಕ ದಿನಗಳಿಂದ ಕಚೇರಿ ಕಡೆ ತಲೆ ಹಾಕದ ಪಿಡಿಒ ಅವರನ್ನು ವರ್ಗಾವಣೆ ಮಾಡಿ ಬೇರೆಯವರನ್ನು ನೇಮಕ ಮಾಡಬೇಕು.ನಾಗಣಗೌಡ ಪಾಟೀಲ , ಸದಸ್ಯ ಗ್ರಾ.ಪಂ ಸೊನ್ನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.