ಕಲಬುರಗಿ: ಚುಮುಚುಮು ಚಳಿ ಸರಿದು ಸೂರ್ಯನ ಪ್ರತಾಪ ಏರುವ ಹೊತ್ತು ಕರಣ್‌ಸಿಂಗ್ ಅವರ ಗೆಲುವಿನ ಆಸೆ ದೂರ ಸರಿಯಿತು. ನಾಲ್ಕನೇ ಶ್ರೇಯಾಂಕದ ಭಾರತದ ಆಟಗಾರ ಅಮೆರಿಕದ ನಿಕ್ ಚಾಪೆಲ್ ಎದುರು ಸೋತು ಕಲಬುರಗಿ ಓಪನ್ ಐಟಿಎಫ್ ಟೆನಿಸ್ ಟೂರ್ನಿಯಿಂದ ಹೊರಬಿದ್ದರು.
ಇಲ್ಲಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಟೂರ್ನಿಯ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಕರಣ್ 5–7, 2–6ರಿಂದ 6ನೇ ಶ್ರೇಯಾಂಕದ ನಿಕ್ ಚಾಪೆಲ್ ಎದುರು ಎಡವಿದರು. ಈ ಮೂಲಕ ಕರಣ್ ವಿರುದ್ಧ ಮುಂಬೈ ಐಟಿಎಫ್ ಟೂರ್ನಿಯ ಸೋಲಿನ ಸೇಡನ್ನು ಚಾಪೆಲ್ ತೀರಿಸಿಕೊಂಡರು.
ಮುಂಬೈ ಐಟಿಎಫ್ ಟೂರ್ನಿಯಲ್ಲಿ ಸೆಮಿಫೈನಲ್‌ಗೇರಿದ್ದ ಕರಣ್, ಈ ಪಂದ್ಯದಲ್ಲಿ ಕೆಲವು ಉತ್ತಮ ಡ್ರಾಪ್ ಶಾಟ್‌ಗಳನ್ನು ಹಾಕಿದರೂ ನೆಟ್ಸ್‌ಸಮೀಪದ ಆಟದಲ್ಲಿ ಪಾಯಿಂಟ್ ಹೆಕ್ಕುವಲ್ಲಿ ವೈಫಲ್ಯ ಅನುಭವಿಸಿದರು. ಜತೆಗೆ ಒತ್ತಡಕ್ಕೆ ಒಳಗಾದಂತೆ ಕಂಡ ಅವರು, ಮೂರು ಬಾರಿ ಡಬಲ್‌ಫಾಲ್ಟ್‌ಗಳನ್ನೂ ಮಾಡಿದರು. ಇದರಿಂದಾಗಿ ಎದುರಾಳಿಗೆ ಲಾಭವಾಯಿತು.
ಕರಣ್ ಆರಂಭದ ಸೆಟ್‌ನ ಮೊದಲೆರಡು ಗೇಮ್‌ಗಳನ್ನು ಸುಲಭವಾಗಿ ತಮ್ಮದಾಗಿಸಿಕೊಂಡು ಮುನ್ನಡೆ ಸಾಧಿಸಿದರು. ಆದರೆ, 3, 4ನೇ ಗೇಮ್‌ಗಳಲ್ಲಿ ತಿರುಗೇಟು ನೀಡಿದ ಚಾಪೆಲ್ 2–2ರಿಂದ ಸಮಬಲ ಸಾಧಿಸಿದರು. ನಂತರವೂ ಇಬ್ಬರ ನಡುವೆ 3–3, 4–4, 5–5ರಿಂದ ಸಮಬಲದ ಹೋರಾಟ ಕಂಡುಬಂತು. ಕೊನೆಯಲ್ಲಿ ಕರಣ್ ಸಿಂಗ್ ಎಸಗಿದ ತಪ್ಪುಗಳ ಲಾಭ ಎತ್ತಿದ ಚಾಪೆಲ್, 7–5ರಿಂದ ಸೆಟ್ ವಶಪಡಿಸಿಕೊಂಡರು.
ಎರಡನೇ ಸೆಟ್‌ನ ಆರಂಭದಲ್ಲಿ 2–2ರಿಂದ ಸಮಬಲದ ಹೋರಾಟ ನಡೆಯಿತು. 5ನೇ ಗೇಮ್ ಅನ್ನು ತಮ್ಮದಾಗಿಸಿಕೊಂಡ ಚಾಪೆಲ್ 3–2ರಿಂದ ಮುನ್ನಡೆ ಸಾಧಿಸಿದರು. 6ನೇ ಗೇಮ್‌ನಲ್ಲಿ ಡಬಲ್ ಫಾಲ್ಟ್ ಮೂಲಕ ಮತ್ತೊಂದು ಗೇಮ್ ಬಿಟ್ಟು ಕೊಟ್ಟಿದ್ದರಿಂದ 2–4ರಿಂದ ಹಿನ್ನಡೆ ಅನುಭವಿಸಿದರು. ನಂತರವೂ ನೆಟ್ಸ್‌ನಲ್ಲಿ ಪಾಯಿಂಟ್ ಗಳಿಸುವ ಕರಣ್ ಯತ್ನ ಫಲಿಸಲಿಲ್ಲ. ಈ ಗೆಲುವಿನೊಂದಿಗೆ ಚಾಪೆಲ್, ಸೆಮಿಫೈನಲ್‌ಗೇರಿದರು.
ಭುವನೇಶ್ವರ ಐಟಿಎಫ್ ಟೂರ್ನಿಯಲ್ಲಿ ನಾಲ್ಕರ ಘಟ್ಟ ತಲುಪಿದ್ದ ಚಾಪೆಲ್, ಇಲ್ಲಿಯೂ ಪ್ರಶಸ್ತಿ ಜಯದ ವಿಶ್ವಾಸ ವೃದ್ಧಿಸಿಕೊಂಡರು. ಸೆಮಿಯಲ್ಲಿ ಅವರು ರಷ್ಯಾದ ಬಾಗ್ದಾನ್ ಬಾಬ್‌ರೋವ್ ಅವರನ್ನು ಎದುರಿಸಲಿದ್ದಾರೆ.
ಆರ್ಯನ್ ಕನಸು ಭಗ್ನ: 19 ವರ್ಷದ ಪ್ರತಿಭೆ, ಭಾರತದ ಆರ್ಯನ್ ಷಾ ಅವರ ಸೆಮಿ ಕನಸೂ ಕೈಗೂಡಲಿಲ್ಲ. ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಬಾಬ್‌ರೋವ್ 7–6, 6–3ರಿಂದ ಆರ್ಯನ್ ಅವರಿಗೆ ಸೋಲುಣಿಸಿದರು.
ಅಗ್ರ ಶ್ರೇಯಾಂಕದ ಖುಮೋಯುನ್ ಸುಲ್ತಾನೋವ್ (ಉಜ್ಬೇಕಿಸ್ತಾನ) ಗೆಲುವಿನ ಓಟ ಮುಂದುವರಿಸಿದರು. ಅವರು 6–2, 6–3ರಿಂದ ರಷ್ಯಾದ ಮ್ಯಾಕ್ಸಿಂ ಝುಕೋವ್‌ರನ್ನು ಪರಾಭವಗೊಳಿಸಿ ಸೆಮಿ ಪ್ರವೇಶಿಸಿದರು. ಅಲ್ಲಿ ಅವರು ಭಾರತದ ದೇವ್ ಜೇವಿಯಾ ಅವರನ್ನು ಎದುರಿಸಲಿದ್ದಾರೆ. ಎಂಟರಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಸಿದ್ಧಾರ್ಥ್ ರಾವತ್ ಅನಾರೋಗ್ಯದಿಂದಾಗಿ ದೂರ ಉಳಿದರು. ಈ ಪಂದ್ಯದಲ್ಲಿ 1–0 ಗೇಮ್‌ನಿಂದ ಮುಂದಿದ್ದ ಜೇವಿಯಾ ನಾಲ್ಕರ ಘಟ್ಟ ಪ್ರವೇಶಿಸಿದರು.
ಡಬಲ್ಸ್ ಫೈನಲ್ ಹಣಾಹಣಿ ಇಂದು
ಡಬಲ್ಸ್ ವಿಭಾಗದ ಫೈನಲ್ ಹಣಾಹಣಿ ಶನಿವಾರ ನಡೆಯಲಿದ್ದು, ರಷ್ಯಾ ಇಗೋರ್ ಅಗಾಫೋನೊವ್–ಬಾಗ್ದಾನ್ ಬಾಬ್‌ರೋವ್ ಹಾಗೂ ನಿಕ್ ಚಾಪೆಲ್–ನಿತಿನ್ ಕುಮಾರ್ ಸಿನ್ಹಾ ಜೋಡಿಗಳು ಪ್ರಶಸ್ತಿಗಾಗಿ ಸೆಣಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.