ಕಲಬುರಗಿ: ‘ವ್ಯಕ್ತಿಯ ಮನಸ್ಸು ಎಲ್ಲದಕ್ಕೂ ಕಾರಣ. ಮಾನಸಿಕ ಅಸ್ವಸ್ಥತೆಯ ಕಾರಣಗಳನ್ನು ಕಂಡುಹಿಡಿದು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಕೆಲಸದ ವಾತಾವರಣ ಚೆನ್ನಾಗಿಟ್ಟುಕೊಂಡರೆ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ’ ಎಂದು ಮನೋವಿಜ್ಞಾನಿ ಡಾ.ದಿಲೀಪ್ ಕುಮಾರ್ ಹೇಳಿದರು.
ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆ, ಕೌಶಲ, ಶಕ್ತಿ, ಸಾಮರ್ಥ್ಯ ಇರುತ್ತದೆ. ಅದನ್ನು ಸರಿಯಾದ ಕೆಲಸಕ್ಕೆ ಬಳಸಿಕೊಂಡಾಗ ಪ್ರತಿಭೆ ಹೊರಬರುತ್ತದೆ. ನನ್ನಿಂದ ಸಾಧ್ಯವಿಲ್ಲ ಎಂಬ ಕೀಳರಿಮೆ ಬಿಟ್ಟು, ಗುಣ–ಅವಗುಣವನ್ನು ಅರಿತು ಕಷ್ಟದ ವಿಷಯಗಳನ್ನು ಇಷ್ಟಪಟ್ಟು ನಿರಂತರವಾಗಿ ಓದಬೇಕು’ ಎಂದರು.
ಸಂಸ್ಥೆಯ ಸಂಸ್ಥಾಪಕ ಪ್ರೊ. ಚನ್ನಾರಡ್ಡಿ ಪಾಟೀಲ ಮಾತನಾಡಿ, ‘ಮನಸ್ಸಿದ್ದಲ್ಲಿ ಮಾರ್ಗವಿರುತ್ತದೆ. ಮಕ್ಕಳು ತಮ್ಮ ಮನಸ್ಸನ್ನು ಸ್ವಸ್ಥವಾಗಿರಿಕೊಂಡು ಶ್ರದ್ಧೆ, ಆಸಕ್ತಿ, ನಿರಂತರ ಪ್ರಯತ್ನದಿಂದ ಓದಿ ಸಾಧನೆ ಮಾಡಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.