ADVERTISEMENT

ಸೇಡಂ | ಮಧ್ಯರಾತ್ರಿ ತೇರು ಎಳೆದು ಭಕ್ತಿ ಸಮರ್ಪಣೆ

ಮೋತಕಪಲ್ಲಿ: ಚಳಿ ಮಧ್ಯೆಯೂ ಬಲಭೀಮಸೇನ ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 4:49 IST
Last Updated 6 ಡಿಸೆಂಬರ್ 2025, 4:49 IST
ಸೇಡಂ ತಾಲ್ಲೂಕು ಮೋತಕಪಲ್ಲಿ ಬಲಭೀಮಸೇನನ ರಥೋತ್ಸವ ಗುರುವಾರ ಮಧ್ಯರಾತ್ರಿ ಜರುಗಿತು
ಸೇಡಂ ತಾಲ್ಲೂಕು ಮೋತಕಪಲ್ಲಿ ಬಲಭೀಮಸೇನನ ರಥೋತ್ಸವ ಗುರುವಾರ ಮಧ್ಯರಾತ್ರಿ ಜರುಗಿತು   

ಸೇಡಂ: ತಾಲ್ಲೂಕಿನ ಧಾರ್ಮಿಕ ಕ್ಷೇತ್ರ ಮೋತಕಪಲ್ಲಿ ಗ್ರಾಮದ ಬಲಭೀಮಸೇನನ ರಥೋತ್ಸವ ಗುರುವಾರ ಮಧ್ಯರಾತ್ರಿ ಭಕ್ತಿ ಸಡಗರದಿಂದ ಅದ್ದೂರಿಯಾಗಿ ಜರುಗಿತು.

ರಥೋತ್ಸವ ನಿಮಿತ್ತ ಗುರುವಾರ ಬೆಳಿಗ್ಗೆ 5 ಗಂಟೆಗೆ ವ್ಯಾಸ ಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೇವಾಲಯದಲ್ಲಿ ಜರುಗಿದವು. ಮಧ್ಯರಾತ್ರಿ ರಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ತೆಂಗು, ಕಾಯಿ ಕರ್ಪೂರ ಬೆಳಗಿಸಿ ನೈವೇದ್ಯ ಸಮರ್ಪಿಸಲಾಯಿತು.

ತಹಶೀಲ್ದಾರ್ ಹಾಗೂ ದೇವಾಲಯದ ಆಡಳಿತಾಧಿಕಾರಿ ಶ್ರೀಯಾಂಕ ಧನಶ್ರೀ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ಭಕ್ತರು ಬಲಭೀಮಸೇನ ಮಹಾರಾಜ್ ಕೀ ಜೈ ಎಂದು ಜೈ ಘೋಷಣೆ ಕೂಗುತ್ತ ರಥ ಎಳೆದರು.

ADVERTISEMENT

ರಥ ಚಲಿಸುತ್ತಿದ್ದಂತೆಯೇ ಭಕ್ತರು ಬಾಳೆ ಹಣ್ಣು, ಉತ್ತತ್ತಿ ಹಾಗೂ ಹಣ್ಣುಗಳನ್ನು ರಥದತ್ತ ಎಸೆದು ಭಕ್ತಿ ಸಮರ್ಪಿಸಿದರು. ರಥವು ಮುಂದೆ ಚಲಿಸಿ, ಪುನಃ ಸ್ಥಳಕ್ಕೆ ಮರಳಿತು. ರಥ ಸ್ಥಳ ತಲುಪುತ್ತಿದ್ದಂತೆಯೇ ರಥಕ್ಕೆ ನಮಿಸಿದ ಭಕ್ತರು ಮನೆಯತ್ತ ಹೆಜ್ಜೆ ಹಾಕಿದರು. ರಥವು ವರ್ಷ ಹೂವು, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಚಳಿಯೂ ಮಧ್ಯೂ ಸಹ ಮಧ್ಯರಾತ್ರಿ ಭಕ್ತರು ಸೇಡಂ ತಾಲ್ಲೂಕು ಸೇರಿದಂತೆ ಕಲಬುರ್ಗಿ, ಯಾದಗಿರಿ, ಬೀದರ್, ಆಂಧ್ರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿ ರಥೊತ್ಸವದಲ್ಲಿ ಪಾಲ್ಗೊಂಡು ಭಕ್ತಿ ಮೆರೆದರು.

ಪಾರ್ಕಿಂಗ್ ವ್ಯವಸ್ಥೆ: ಜನದಟ್ಟಣೆ ನಿಯಂತ್ರಿಸಲು ಪೊಲೀಸರು ದೂರದ ಸ್ಥಳದಲ್ಲಿಯೇ ಕಾರ್, ಜೀಪು, ಕ್ರೂಸರ್, ಬಸ್‌ಗಳಿಗೆ ಹಾಗೂ ಬೈಕ್‌ಗಳಿಗೆ ಪ್ರತ್ಯೇಕ ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಸೇಡಂ ಮತ್ತು ಗುರುಮಠಕಲ್ ಕಡೆ ಒಂದು ಕಿ.ಮೀ ದೂರದಲ್ಲಿಯೇ ವಾಹನಗಳು ನಿಂತಿದ್ದವು. ತಡರಾತ್ರಿಯಾದರೂ ಸಹ ಭಕ್ತರ ದಂಡು ಹರಿದು ಬರುತ್ತಿರುವುದು ಸರ್ವೆ ಸಾಮಾನ್ಯವಾಗಿತ್ತು. ಬ್ಯಾರಿಕೇಡ್ ಹಾಕಿದ ಪೊಲೀಸರು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.

ವಿವಿಧೆಡೆಯಿಂದ ಆಗಮಿಸಿದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಸರತಿಗಟ್ಟಿ ದರ್ಶನ ಪಡೆದರು. ಭಕ್ತರ ದರ್ಶನಕ್ಕಾಗಿ ಉತ್ತಮ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಕೃಷಿಕ ಸಮಾಜ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ ಊಡಗಿ, ಬಿಜೆಪಿ ಮುಖಂಡ ಶಿವಕುಮಾರ ಪಾಟೀಲ ತೆಲ್ಕೂರ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಾಲರಾಜ್ ಗುತ್ತೇದಾರ, ಉಪ ತಹಶೀಲ್ದಾರ್ ಶರಣಗೌಡ ಪಾಟೀಲ, ಪಿಐ ದೌಲತ್ ಕುರಿ, ಮಹಾದೇವ ದಿಡ್ಡಿಮನಿ ಸೇರಿ ಇನ್ನಿತರರು ಇದ್ದರು.

ರಾತ್ರಿಯಿಡಿ ವ್ಯಾಪಾರ ಜೋರು ಬಲಭೀಮಸೇನನ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರು ರಥನ್ನೆಳೆದ ನಂತರು ಅಂಗಡಿಗಳಲ್ಲಿ ವ್ಯಾಪಾರ ಮಾಡಿದರು. ಕಾಯಿ ಕರ್ಪೂರ ಒಡೆದು ಆಟದ ಸಾಮಾನು ಹಾಗೂ ದೇವರ ಪ್ರಸಾದ ಖರೀದಿಸಿದರು. ಭಜಿ ಮಂಡಕ್ಕಿ ಸುಸುಲಾ ಅಂಗಡಿ ನೀರಿನ ಬಾಟಲ್ ಸೇಬು ಹೂವಿನ ಅಂಗಡಿ ಸೇರಿದಂತೆ ರಾತ್ರಿಯಿಡಿ ವ್ಯಾಪಾರಸ್ಥರು ವ್ಯಾಪಾರದಲ್ಲಿ ತೊಡಗಿದ್ದು ಕಂಡು ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.