
ಕಲಬುರಗಿ: ಮಳೆಗಾಲ ಮುಗಿಯುತ್ತಿದ್ದಂತೆ ಗ್ರಾಮೀಣ ಜನ ಕೂಲಿ ಅರಸಿ ಸಮೀಪದ ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ನೆರೆಯ ರಾಜ್ಯಗಳಿಗೆ ಗುಳೆ ಹೋಗುವುದು ಸಾಮಾನ್ಯ. ಇದರ ನಡುವೆಯೇ ಪ್ರತಿದಿನ ತುತ್ತಿನ ಚೀಲ ತುಂಬಿಸಿಕೊಳ್ಳಲು ಬುತ್ತಿ ಚೀಲ ಕೈಯಲ್ಲಿ ಹಿಡಿದು ಕಲಬುರಗಿ ನಗರದತ್ತ ಹಜ್ಜೆ ಹಾಕುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.
ಕೆಲಸ ಸಿಕ್ಕರೆ ಒಪ್ಪತ್ತಿನ ಊಟ, ಇಲ್ಲದಿದ್ದರೆ ಉಪವಾಸದ ನಿದ್ದೆ ಎನ್ನುತ್ತ ನಗರದ ರೈಲು ನಿಲ್ದಾಣ, ಸೇಡಂ ರಸ್ತೆಯ ರಿಂಗ್‌ರೋಡ್, ಗಂಜ್, ಖರ್ಗೆ ಪೆಟ್ರೋಲ್ ಪಂಪ್ ಸೇರಿದಂತೆ ನಗರದ ಮುಖ್ಯ ವೃತ್ತಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗ್ರಾಮೀಣ ಭಾಗದ ಜನರು ಕೂಲಿಗಾಗಿ ಕಾಯುತ್ತಿರುವ ದೃಶ್ಯಗಳು ಬೆಳಿಗ್ಗೆ ಕಾಣಸಿಗುತ್ತವೆ.
ಮನೆ ನಿರ್ಮಾಣದ ಕೆಲಸಗಳಾದ ಇಟ್ಟಿಗೆ ಹೊರುವುದು, ಗೌಂಡಿ ಕೆಲಸ, ಮನೆಗೆ ನೀರು ಹೊಡೆಯುವುದು, ರಸ್ತೆ ಕಾಮಗಾರಿ, ಮಣ್ಣು ಹೊರುವುದು, ಖಡಿ ಎತ್ತುವ ಕೆಲಸಕ್ಕೂ ಹಿಂಜರಿಯದೆ ಹೋಗುತ್ತಾರೆ. ಬೆಳಿಗ್ಗೆಯಿಂದ ಸಂಜೆವರೆಗೆ ದುಡಿದು ₹500ರಿಂದ ₹600 ಸಂಪಾದಿಸಿ ಸಂಜೆ ಮನೆ ಸೇರಿಕೊಳ್ಳುತ್ತಾರೆ.
ಮಳೆಗಾಲದಲ್ಲಿ ಊರಲ್ಲೇ ಕೆಲಸ: ಅನೇಕರು ಮಳೆಗಾಲದಲ್ಲಿ ಕೃಷಿ ಕಾಯಕದಲ್ಲಿ ತೊಡಗುತ್ತಾರೆ. ಕುಟುಂಬ ನಿರ್ವಹಣೆಗೆ ಕೆಲ ಮಹಿಳೆಯರು ತಮ್ಮ ಊರಲ್ಲೇ ಕೆಲಸಕ್ಕೆ ಹೋದರೆ, ಪುರುಷರು ನಗರಗಳತ್ತ ಮುಖ ಮಾಡುತ್ತಾರೆ. ಗ್ರಾಮೀಣ ಭಾಗದ ಜನರಿಗೆ ಸಹಕಾರಿಯಾಗಲೆಂದು ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್‍ಕಾರ್ಡ್, ಕಾರ್ಮಿಕ ಕಾರ್ಡ್‍ಗಳನ್ನು ವಿತರಿಸಲು ಮುಂದಾಗಿದ್ದರೂ ಅನೇಕ ಕಾರ್ಮಿಕರಿಗೆ ಕಾರ್ಡ್‍ಗಳು ತಲುಪದಿರುವುದು ವಿಪರ್ಯಾಸ.
ವಾರಕ್ಕೆ 4 ದಿನ ಕೆಲಸ: ಪ್ರತಿದಿನ ಬುತ್ತಿ ಕಟ್ಟಿಕೊಂಡು ಬರುವ ಕಾರ್ಮಿಕರು ಕೆಲವು ದಿನ ಕೆಲಸ ಸಿಕ್ಕರೆ, ಇನ್ನು ಕೆಲವು ದಿನ ಕೆಲಸ ಸಿಗದೆ ಮನೆಗೆ ಬರಿಗೈಯಲ್ಲಿ ತೆರಳುತ್ತಾರೆ. ವಾರದಲ್ಲಿ 4 ದಿನ ಕೆಲಸ ಸಿಕ್ಕರೆ ಅದೇ ಪುಣ್ಯ ಎನ್ನುತ್ತಾರೆ ಕೂಲಿ ಕಾರ್ಮಿಕರು.
ಕಾರ್ಮಿಕರಿಗೆ ಬೇಕು ಭದ್ರತೆ: ನಗರದಲ್ಲಿ ನಿತ್ಯ ಸಾವಿರಾರು ಕಾರ್ಮಿಕರು ನಗರ ಹಾಗೂ ಹೊರವಲಯದಲ್ಲಿ ಕೆಲಸಕ್ಕೆ ಹೋಗಲು ಒಂದೆಡೆ ಸೇರುತ್ತಾರೆ. ಅಲ್ಲಿಂದ ಕಾರ್ಮಿಕರನ್ನು ಬೇರೆ ಬೇರೆ ಕಡೆ ಕೆಲಸಗಳಿಗೆ ಗುತ್ತಿಗೆದಾರರು, ಕಟ್ಟಡಗಳ ಮಾಲೀಕರು ಕರೆದುಕೊಂಡು ಹೋಗುತ್ತಾರೆ. ಆದರೆ, ಯಾರು ಯಾರನ್ನು ಎಲ್ಲಿಗೆ, ಎಷ್ಟು ಕೂಲಿಗೆ ಕರೆದುಕೊಂಡು ಹೋಗುತ್ತಾರೆ ಎಂಬ ಮಾಹಿತಿ ತಿಳಿಯುತ್ತಿಲ್ಲ. ಇದರಿಂದ ಕಾರ್ಮಿಕರಿಗೆ ಕೂಲಿ ಮತ್ತು ಜೀವದ ರಕ್ಷಣೆಯೂ ಇಲ್ಲದಂತಾಗಿದೆ.
ಕಳೆದ 2024ರಲ್ಲಿ ನಗರದ ಹೊರವಲಯದ ತಾವರಗೇರಾ ಕ್ರಾಸ್ ಬಳಿ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಕೆಲಸಕ್ಕೆಂದು ಕರೆದೊಯ್ದು ಇಬ್ಬರು ಮಹಿಳೆಯರನ್ನು ಭೀಕರವಾಗಿ ಕೊಲೆ ಮಾಡಿರುವುದರ ಬಗ್ಗೆ ವರದಿಯಾಗಿತ್ತು. ಈಗಲು ಮಹಿಳೆಯರು ಒಂದು ಹೊತ್ತಿನ ಉಟಕ್ಕಾಗಿ ಜೀವ ಭಯದಲ್ಲಿಯೇ ಕೆಲಸಕ್ಕೆ ನಗರಕ್ಕೆ ಆಗಮಿಸುತ್ತಿದ್ದಾರೆ.
ಊರಲ್ಲಿ ಸರಿಯಾಗಿ ಕೆಲಸ ಸಿಗಲ್ಲ ಅಂತ ಇಲ್ಲಿಗೆ ಬರ್ತಿವಿ. ಕೆಲಸ ಏನೇ ಕೊಟ್ರು ಮಾಡ್ತಿವಿ. ಕೆಲವು ಮಾಲೀಕರು ಹೆಚ್ಚು ಸಮಯ ಕೆಲಸ ಮಾಡಿದ್ರು ಕೂಲಿ ಸರಿಯಾಗಿ ನೀಡಲ್ಲ.– ಮಂಜುನಾಥ, ಕಾರ್ಮಿಕ
ನಿರ್ಮಾಣವಾಗದ ಕಾರ್ಮಿಕ ಆಶ್ರಯ ತಾಣ
‘ಕಾರ್ಮಿಕರಿಗೆ ರಕ್ಷಣೆ ಕೆಲಸದ ಭದ್ರತೆ ಒದಗಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದ್ದ ಕಾರ್ಮಿಕ ಇಲಾಖೆ ಪೊಲೀಸರು ಜಿಲ್ಲಾಡಳಿತ ಮೌನ ವಹಿಸಿದೆ. ಕಾರ್ಮಿಕರು ಸೇರುವ ಸ್ಥಳದಲ್ಲಿ ಸೂಕ್ತ ಭದ್ರತೆ ರಕ್ಷಣೆ ದಾಖಲೀಕರಣದ ಪದ್ಧತಿ ಮಾಡಬೇಕು. ವಿಶೇಷವಾಗಿ ಮಹಿಳಾ ಕಾರ್ಮಿಕರ ರಕ್ಷಣೆಗೆ ಇಲಾಖೆ ಮುಂದಾಗಬೇಕು’ ಎನ್ನುತ್ತಾರೆ ಕಾರ್ಮಿಕ ಮುಖಂಡರು.
‘ಕಾರ್ಮಿಕರು ನಿಲ್ಲುವ ಸ್ಥಳಗಳಲ್ಲಿ ಕಾರ್ಮಿಕರ ಆಶ್ರಯ ತಾಣಗಳನ್ನು ನಿರ್ಮಿಸಬೇಕು. ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಇಲಾಖೆಗೆ ಮನವಿ ಮಾಡಲಾಗಿದೆ. ಆದರೆ ಜಿಲ್ಲಾಡಳಿತ ಕಾರ್ಮಿಕ ಇಲಾಖೆ ಈವರೆಗೂ ಆಶ್ರಯ ತಾಣಗಳನ್ನು ನಿರ್ಮಿಸಿಲ್ಲ’ ಎನ್ನುತ್ತಾರೆ ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ.
ನಾನು ಗೌಂಡಿ ಕೆಲಸ ಮಾಡ್ತಿನಿ. ಪ್ರತಿದಿನ ಬೆಳಿಗ್ಗೆ ಬಂದು ನಿಂದರ್ತಿವಿ. ಕೆಲವೊಮ್ಮೆ ಕಮ್ಮಿ ಕೂಲಿ ಕೊಟ್ರು ಹೋಗ್ತೀನಿ. ಕೆಲವೊಮ್ಮೆ ಕೆಲಸ ಸಿಗದೆ ಖಾಲಿ ಕೈಯಲ್ಲಿ ಮನಿಗೆ ಹೋಗ್ತೀನಿ– ಸುರೇಶ, ಕಾರ್ಮಿಕ
ಆಶ್ರಯ ತಾಣ ನಿರ್ಮಾಣಕ್ಕೆ ಪ್ರಸ್ತಾವನೆ
‘ಕಲಬುರಗಿ ನಗರದ ರೈಲು ನಿಲ್ದಾಣ ಬಳಿವಿರುವ ಆರ್‌ಟಿಐ ಕಮಿಷನರ್ ಕಚೇರಿ ಬಳಿ ಹಾಗೂ ಸೇಡಂ ರಸ್ತೆಯಲ್ಲಿನ ವಿರೇಂದ್ರ ಪಾಟೀಲ ಬಡಾವಣೆಯ ಬಸ್ ನಿಲ್ದಾಣ ಬಳಿ ಕಾರ್ಮಿಕರಿಗೆ ಆಶ್ರಯ ತಾಣಗಳನ್ನು ನಿರ್ಮಿಸಲು ಕೇಂದ್ರ ಕಚೇರಿಗೆ ಎರಡು ತಿಂಗಳ ಹಿಂದೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಕಾರ್ಮಿಕ ಇಲಾಖೆ ಜಿಲ್ಲಾ ಅಧಿಕಾರಿ ಎಸ್.ಆರ್. ಹಳಿಮನಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೇಂದ್ರ ಕಚೇರಿಯಿಂದ ಅನುಮೋದನೆ ದೊರೆತ ತಕ್ಷಣ ಆಶ್ರಯ ತಾಣ ನಿರ್ಮಿಸಲಾಗುವುದು. ತಾಣದಲ್ಲಿ ಸಿಸಿಟಿವಿ ಕ್ಯಾಮೆರಾ ಕುಡಿಯುವ ನೀರು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಚಿಂತನೆ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು.
‘ಕೆಲವು ಕಾರ್ಮಿಕರಿಗೆ ಮಾಲೀಕರು ವೇತನ ನೀಡುವಲ್ಲಿ ಕಿರುಕುಳ ನೀಡುತ್ತಿದ್ದರೆ ಅಂತಹ ಕಾರ್ಮಿಕರು ನೇರವಾಗಿ ಕಚೇರಿಗೆ ತಿಳಿಸಬಹುದು. ಅಂತಹ ಮಾಲೀಕರ ವಿರುದ್ಧ ದೂರು ಸಲ್ಲಿಸಿ ತನಿಖೆ ನಡೆಸಿ ಕಾನೂನಿನ ಮೂಲಕ ವೇತನ ದೊರಕಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.