ADVERTISEMENT

‘ಶಿಕ್ಷಣ ಸುಧಾರಣೆಗೆ ಕೈ ಜೋಡಿಸುವವರಿಗೆ ಸಹಕಾರ’

10 ಸಾವಿರ ಮಕ್ಕಳಿಗೆ ಉಪಾಹಾರ ನೀಡುವ ಯೋಜನೆಗೆ ಚಾಲನೆ ನೀಡಿದ ಸಚಿವ ಸುರೇಶಕುಮಾರ್‌

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 12:48 IST
Last Updated 28 ಸೆಪ್ಟೆಂಬರ್ 2019, 12:48 IST
ಕಮಲಾಪುರ ತಾಲ್ಲೂಕಿನ ನವನಿಹಾಳ ಹಳ್ಳಿಯಲ್ಲಿರುವ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಚಿವ ಸುರೇಶಕುಮಾರ್‌ ಹಾಗೂ ಬಿ.ಎನ್‌.ನರಸಿಂಹಮೂರ್ತಿ ಮಾತುಕತೆ ನಡೆಸಿದರು. ಮಧುಸೂದನ ಸಾಯಿ ಇದ್ದಾರೆ
ಕಮಲಾಪುರ ತಾಲ್ಲೂಕಿನ ನವನಿಹಾಳ ಹಳ್ಳಿಯಲ್ಲಿರುವ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಚಿವ ಸುರೇಶಕುಮಾರ್‌ ಹಾಗೂ ಬಿ.ಎನ್‌.ನರಸಿಂಹಮೂರ್ತಿ ಮಾತುಕತೆ ನಡೆಸಿದರು. ಮಧುಸೂದನ ಸಾಯಿ ಇದ್ದಾರೆ   

‌ಕಲಬುರ್ಗಿ: ‘ಶೈಕ್ಷಣಿಕ ಪ್ರಗತಿ ಹಾಗೂ ಶಾಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸರ್ಕಾರದೊಂದಿಗೆ ಕೈಜೋಡಿಸಲು ಮುಂದೆಬರುವ ಎಲ್ಲ ಸಂಸ್ಥೆಗಳಿಗೂ ಕೈಬಿಚ್ಚಿ ಸಹಕಾರ ನೀಡುತ್ತೇವೆ’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶಕುಮಾರ್‌ ಭರವಸೆ ನೀಡಿದರು.

ಅದಮ್ಯ ಚೇತನ ಹಾಗೂ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ಗಳ ಆಶ್ರಯದಲ್ಲಿ ಜಿಲ್ಲೆಯ 75 ಸರ್ಕಾರಿ ಶಾಲೆಗಳ 10 ಸಾವಿರ ಮಕ್ಕಳಿಗೆ ಬೆಳಗಿನ ಉಪಾಹಾರ ನೀಡುವ ಯೋಜನೆಗೆ, ಕಮಲಾಪುರ ತಾಲ್ಲೂಕಿನ ನವನಿಹಾಳ ಹಳ್ಳಿಯಲ್ಲಿರುವ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದಲ್ಲಿ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಈ ಎರಡೂ ಟ್ರಸ್ಟ್‌ಗಳು ಸದ್ಯಕ್ಕೆ 10 ಸಾವಿರ ಮಕ್ಕಳಿಗೆ ಪೌಷ್ಟಿಕಾಂಶ ಭರಿತ ಉಪಾಹಾರ ನೀಡಲು ಮುಂದೆ ಬಂದಿವೆ. ಅನುಕೂಲ ನೋಡಿಕೊಂಡು ಇದನ್ನು ಜಿಲ್ಲೆಯ ಎಲ್ಲ ಶಾಲೆಗಳಿಗೂ ವಿಸ್ತರಿಸುವುದಾದರೆ ನಾನು ಹೆಚ್ಚು ಖುಷಿಪಡುತ್ತೇನೆ’ ಎಂದರು.

ADVERTISEMENT

‘ಹಳ್ಳಿಗಳ ಬಹಳಷ್ಟು ಕುಟುಂಬದವರು ಬೆಳಕಾಗುವಷ್ಟರಲ್ಲಿ ದುಡಿಮೆಗೆ ಹೋಗುತ್ತಾರೆ. ಮಕ್ಕಳಿಗೆ ಬೆಳಿಗ್ಗೆ ಉಪಾಹಾರ ಕೊಡಬೇಕು ಎಂಬ ಆಲೋಚನೆ ಇರುವುದಿಲ್ಲ. ಖಾಲಿ ಹೊಟ್ಟೆಯಲ್ಲಿ ಶಾಲೆಗೆ ಬಂದರೆ ಮಕ್ಕಳ ಆರೋಗ್ಯ ಹಾಳಾಗುತ್ತದೆ. ಅಪೌಷ್ಟಿಕತೆಯಿಂದ ಮಗುವಿನ ಕಲಿಕಾ ಸಾಮರ್ಥ್ಯವೂ ಕುಗ್ಗುತ್ತದೆ. ಇದನ್ನು ತಪ್ಪಿಸುವುದು ಅಗತ್ಯ’ ಎಂದು ಹೇಳಿದರು.

‘ಸಮಾಜದಲ್ಲಿ ನಮಗೆ ನಾಲ್ಕು ರೀತಿಯ ಸ್ವಭಾವದ ಮನುಷ್ಯರು ಸಿಗುತ್ತಾರೆ. ‘ನನ್ನದು ನನಗೆ– ನಿನ್ನದು ನಿನಗೆ’ ಎನ್ನುವ ಸಮಭಾವದವರು, ‘ನನ್ನದು ನಿನಗೆ– ನಿನ್ನದು ನನಗೆ’ ಎಂದು ಪರಸ್ಪರ ಹಂಚಿಕೊಳ್ಳುವವರು, ‘ನನ್ನದೂ ನನಗೆ, ನಿನ್ನದೂ ನನಗೇ’ ಎನ್ನುವ ಸ್ವಾರ್ಥಿಗಳು, ‘ನನ್ನದೂ ನಿನಗೆ, ನಿನ್ನದೂ ನಿನಗೇ’ ಎನ್ನುವ ಪರೋಪಕಾರಿಗಳು. ಈ ನಾಲ್ಕನೇಯ ಸಾಲಿಗೆ ಸೇರಿದವರು ಅದಮ್ಯ ಟ್ರಸ್ಟ್‌ನ ವ್ಯವಸ್ಥಾಪಕ ದರ್ಮದರ್ಶಿಗಳಾದ ತೇಜಸ್ವಿನಿ ಅನಂತಕುಮಾರ್‌’ ಎಂದು ಸುರೇಶಕುಮಾರ್‌ ಹಾಸ್ಯಚಟಾಕಿ ಹಾರಿಸಿದರು.

ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎನ್‌. ನರಸಿಂಹಮೂರ್ತಿ ಮಾತನಾಡಿ, ‘ಶ್ರೀಮಂತರ ಮಕ್ಕಳಿಗೆ ಖಾಸಗಿ ಶಾಲೆ, ಬಡವರ ಮಕ್ಕಳಿಗೆ ಸರ್ಕಾರಿ ಶಾಲೆ ಎಂಬ ಧ್ರುವೀಕರಣ ಆಗಿರುವುದು ದೇಶದ ದೊಡ್ಡ ದುರಂತ. ಇಂಥ ಭೇದ ದೂರಾಗಬೇಕು ಎಂಬುದು ಸತ್ಯ ಸಾಯಿಬಾಬಾ ಅವರ ಆಶಯ. ಹಾಗಾಗಿ, ನಮ್ಮ 18 ವಿದ್ಯಾಸಂಸ್ಥೆಗಳು, ವಿಶ್ವವಿದ್ಯಾಲಯ, ಆಸ್ಪತ್ರೆಗಳಲ್ಲಿ ಎಲ್ಲ ಕಡೆಯೂ ಎಲ್ಲವೂ ಉಚಿತ ಸೇವೆ ಜಾರಿಗೆ ತಂದಿದ್ದೇವೆ’ ಎಂದರು.

‘ಯಾವ ದೇಶದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ, ವಿದ್ಯೆ, ವೈದ್ಯ ಸೌಕರ್ಯ ಸರಿಯಾಗಿ ಸಿಗುವುದಿಲ್ಲವೋ ಅದರ ಜಿಡಿಪಿ ಎಷ್ಟೇ ಎತ್ತರಕ್ಕೆ ಹೋದರೂ ಪ್ರಯೋಜನವಿಲ್ಲ. ಅಂಥ ದೇಶ ಹಿಂದುಳಿದಿದೆ ಎಂದೇ ಸಾಯಿಬಾಬಾ ಪ್ರತಿಪಾದಿಸಿದರು. ಮಕ್ಕಳ ಮೂಲಭೂತ ಹಕ್ಕುಗಳಿಗಾಗಿ ಅವರ ಕಾಳಜಿ ಅಪಾರ’ ಎಂದರು.

ಶಾಸಕರಾದ ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ, ಬಿ.ಜಿ. ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ ಇದ್ದರು. ಟ್ರಸ್ಟ್‌ ಅಧ್ಯಕ್ಷ ಸಿ.ಶ್ರೀನಿವಾಸ್‌ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.