ADVERTISEMENT

₹ 30 ಕೋಟಿ ಅನುದಾನದಲ್ಲಿ ಕ್ರೀಡಾ ಪ್ರೋತ್ಸಾಹ: ಸಚಿವ ನಾರಾಯಣಗೌಡ

ಚಂದ್ರಶೇಖರ ‍ಪಾಟೀಲ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಸಚಿವ ನಾರಾಯಣಗೌಡ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 4:52 IST
Last Updated 27 ಅಕ್ಟೋಬರ್ 2021, 4:52 IST
ಕಲಬುರಗಿಯಲ್ಲಿ ಮಂಗಳವಾರ ಕ್ರೀಡಾ ಸಚಿವ ನಾರಾಯಣಗೌಡ ಅವರು ಜೂಡೊ ತರಬೇತಿ ಅಂಕಣವನ್ನು ಪರಿಶೀಲಿಸಿದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ.ನಾಡಗೀರ, ಅಯುಕ್ತ ಎಚ್‌.ಎಂ. ಗೋಪಾಲಕೃಷ್ಣ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ.ಪಾಟೀಲ ರೇವೂರ, ಕರ್ನಾಟಕ ರೇಷ್ಮೆ‌ ಮಾರುಕಟ್ಟೆ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಹಾಗೂ ಕೋಚ್‌ಗಳು ಇದ್ದರು
ಕಲಬುರಗಿಯಲ್ಲಿ ಮಂಗಳವಾರ ಕ್ರೀಡಾ ಸಚಿವ ನಾರಾಯಣಗೌಡ ಅವರು ಜೂಡೊ ತರಬೇತಿ ಅಂಕಣವನ್ನು ಪರಿಶೀಲಿಸಿದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ.ನಾಡಗೀರ, ಅಯುಕ್ತ ಎಚ್‌.ಎಂ. ಗೋಪಾಲಕೃಷ್ಣ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ.ಪಾಟೀಲ ರೇವೂರ, ಕರ್ನಾಟಕ ರೇಷ್ಮೆ‌ ಮಾರುಕಟ್ಟೆ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಹಾಗೂ ಕೋಚ್‌ಗಳು ಇದ್ದರು   

ಕಲಬುರಗಿ: ‘ಜಿಲ್ಲೆಯಲ್ಲಿ ಕ್ರೀಡಾ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ₹ 30 ಕೋಟಿ ಅನುದಾನ ನೀಡಿದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುವುದು. ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ಹಾಗೂ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ ತಿಳಿಸಿದರು.‌

‘ದತ್ತಾತ್ರೇಯ ಪಾಟೀಲ ರೇವೂರ ಅವರು ಕೆಕೆಆರ್‌ಡಿಬಿ ಅಧ್ಯಕ್ಷರಾದ ತಕ್ಷಣಕ್ಕೆ ಈ ಅನುದಾನ ನೀಡಿದ್ದಾರೆ. ಆದರೆ, ಕೊರೊನಾ ಕಾರಣ ಕಾಮಗಾರಿ ನಿಂತುಹೋಗಿವೆ. ಈಗ ಎಲ್ಲವನ್ನೂ ಮತ್ತೆ ಆರಂಭಿಸಲಾಗುತ್ತಿದೆ’ ಎಂದು ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹೆಣ್ಣುಮಕ್ಕಳನ್ನು ಕ್ರೀಡೆಗೆ ಸೆಳೆಯುವ ಉದ್ದೇಶದಿಂದ 31 ಜಿಲ್ಲೆಗಳಲ್ಲಿಯೂ ತಲಾ ಒಂದೊಂದು ಮಹಿಳಾ ಕ್ರೀಡಾ ವಸತಿ ಶಾಲೆ ನಿರ್ಮಿಸುವ ಯೋಚನೆ ಇದೆ. ಇದಕ್ಕೆ ತಲಾ ₹ 1.50 ಕೋಟಿ ಅಂದಾಜಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಶೀಘ್ರ ಚರ್ಚೆ ನಡೆಸಿ ನಿರ್ಧಾರ ಪ್ರಕಟಿಸುತ್ತೇನೆ. ಕ್ರೀಡಾಕೂಟದಲ್ಲಿ ಪದಕದ ಸಾಧನೆ ಮಾಡಲು ತರಬೇತಿ ಅಗತ್ಯ. ಹಾಗಾಗಿ, ಅದಕ್ಕೆ ಅಗತ್ಯವಾದ ಕೋಚ್‍ಗಳು ಬೇಕಾಗಿದ್ದಾರೆ. ಕ್ರೀಡಾ ಇಲಾಖೆಗೆ ಶಕ್ತಿ ಬರುವುದೇ ಕೋಚ್‌ಗಳಿಂದ.ಉತ್ತಮವಾದ ಕೋಚ್‍ಗಳ ನೇಮಕ ಮಾಡಿಕೊಳ್ಳುವ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ತಂಡದ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದರು.

ADVERTISEMENT

‘ಗುಲಬರ್ಗಾ ವಿಶ್ವವಿದ್ಯಾಲಯ ಆವರಣದ 50 ಎಕರೆ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣ ನಿರ್ಮಿಸುವ ಕೆಲಸ ಇನ್ನಷ್ಟೇ ವೇಗ ಪಡೆಯಬೇಕಿದೆ. ಇದು ಸಿದ್ಧಗೊಂಡ ಬಳಿಕ ಕಲ್ಯಾಣ ಕರ್ನಾಟಕ ಭಾಗದ ಕ್ರೀಡಾ‍ಪಟುಗಳು ಅವಕಾಶಗಳ ಹೆಬ್ಬಾಗಿಲು ತೆರೆಯಲಿದೆ’ ಎಂದೂ ಹೇಳಿದರು.‌

‘ಕಳೆದ ಎರಡು ವರ್ಷಗಳಿಂದ ಎಲ್ಲವೂ ಬಂದ್‌ ಇದ್ದರೂ, ಜಿಲ್ಲಾ ಕ್ರೀಡಾ ಇಲಾಖೆಯಿಂದ ₹ 1.81 ಕೋಟಿ ನಿರ್ವಹಣೆ ವೆಚ್ಚ ಮಾಡಲಾಗಿದ್ದು, ಇದು ಹೇಗೆ ಸಾಧ್ಯ?’ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಒಳಾಂಗಣ ಕ್ರೀಡಾಂಗಣ, ಈಜುಕೊಳ, ಹಾಕಿ ಮೈದಾನ, ಟ್ರ್ಯಾಕ್‌ಗಳ ನಿರ್ವಹಣೆ ಹಾಗೂ ಸಿಬ್ಬಂದಿ ಸಂಬಳ ಸೇರಿದಂತೆ ಈ ವೆಚ್ಚ ಆಗಿರಬಹುದು. ಗೊಂದಲಗಳಿದ್ದರೆ ಇನ್ನೊಮ್ಮೆ ಪರಿಶೀಲಿಸುತ್ತೇನೆ’ ಎಂದರು.

‘ಹೊಸ ಶಿಕ್ಷಣ ನೀತಿಯ ಪ್ರಕಾರ ಎಲ್ಲ ಶಾಲೆಗಳಲ್ಲೂ ಒಂದು ಗಂಟೆಯನ್ನು ಕಡ್ಡಾಯವಾಗಿ ಕ್ರೀಡಾ ಚಟುವಟಿಕೆಗಳಿಗೇ ಮೀಸಲಿಸಲಾಗುತ್ತಿದೆ. ಸದ್ಯಕೆ 5,000 ದೈಹಿಕ ಶಿಕ್ಷಣ ಶಿಕ್ಷಕರಿದ್ದಾರೆ. ಅವರಿಗೆ ಸೂಕ್ತ ತರಬೇತಿ ನೀಡಿ, ಶಾಲೆಗಳಲ್ಲೂ ಕ್ರೀಡಾ ಕಾರ್ಯಕ್ರಮಕ್ಕೆ ಆದ್ಯತೆ ನೀಡಲಾಗುವುದು’ ಎಂದರು.

ಇದಕ್ಕೂ ಮುನ್ನ ಅವರು, ಚಂದ್ರಶೇಖರ ಪಾಟೀಲ ಕ್ರೀಡಾಂಗಣಕ್ಕೆ ಭೇಟಿ ನೀಡಿದರು. ಇಲ್ಲಿನ ಸಿಂಥೆಟಿಕ್ ಟ್ರ್ಯಾಕ್, ಜುಡೊ ಹಾಲ್, ಒಳಾಂಗಣ ಸ್ಟೇಡಿಯಂ ಸೇರಿದಂತೆ ವಿವಿಧ ಕ್ರೀಡಾ ಅಂಕಣಗಳಿಗೆ ಭೇಟಿ ನೀಡಿ ನಿರ್ವಹಣೆ ಪಡೆದರು. ಸ್ಥಳದಲ್ಲಿದ್ದ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿಗಳು ಮತ್ತು ಕೋಚ್‍ಗಳ ಸಮಸ್ಯೆ ಆಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.