ADVERTISEMENT

World Engineering Day: ಎಂಜಿನಿಯರ್‌ಗಳೆಂಬ ಆಧುನಿಕ ಭಾರತದ ಶಿಲ್ಪಿಗಳು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:23 IST
Last Updated 15 ಸೆಪ್ಟೆಂಬರ್ 2025, 5:23 IST
ಭಾರತದ ಅತ್ಯದ್ಭುತ ಎಂಜಿನಿಯರಿಂಗ್‌ಗೆ ಸಾಕ್ಷಿಯಾದ ಜಮ್ಮು ಕಾಶ್ಮೀರದ ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ರೈಲ್ವೆ ಸೇತುವೆ
–ಪಿಟಿಐ ಚಿತ್ರ
ಭಾರತದ ಅತ್ಯದ್ಭುತ ಎಂಜಿನಿಯರಿಂಗ್‌ಗೆ ಸಾಕ್ಷಿಯಾದ ಜಮ್ಮು ಕಾಶ್ಮೀರದ ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ರೈಲ್ವೆ ಸೇತುವೆ –ಪಿಟಿಐ ಚಿತ್ರ   

ಸಪ್ತ ಸೋದರಿಗಳ ರಾಜ್ಯ ಎಂದೇ ಹೆಸರಾದ ಈಶಾನ್ಯ ಭಾರತದ ಮಿಜೋರಾಂಗೆ ಇದುವರೆಗೂ ರೈಲು ಸಂಪರ್ಕ ಇರಲಿಲ್ಲ. ಸತತ 11 ವರ್ಷಗಳ ಶ್ರಮದ ಬಳಿಕ ಸಿದ್ಧಗೊಂಡ ಮಿಜೋರಾಂನ ಐಜ್ವಾಲ್‌ಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಚಾಲನೆ ನೀಡಿದರು.

ಕರ್ನಾಟಕ ಹಾಗೂ ಮಹಾರಾಷ್ಟ್ರದ ಕರಾವಳಿ ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕಡಿದಾದ ಬೆಟ್ಟಗಳನ್ನು ಕೊರೆದು ಕೊಂಕಣ ರೈಲ್ವೆಯ ಹಳಿಗಳನ್ನು ಜೋಡಿಸಿದ್ದು ಕೂಡಾ ಆಧುನಿಕ ಭಾರತದ ಅದ್ಭುತ ಎಂಜಿನಿಯರಿಂಗ್‌ನ ಸಾಹಸವೇ. ಬೆಂಗಳೂರಿನ ನೆಲದಾಳವನ್ನು ಕೊರೆದು ಸುರಂಗದಲ್ಲಿ ಮೆಟ್ರೊವನ್ನು ಕೊರೆದುದು ಸಣ್ಣ ಸಾಧನೆಯೇನೂ ಅಲ್ಲ.

ಜಮ್ಮು ಕಾಶ್ಮೀರದ ಉಧಂಪುರ–ಶ್ರೀನಗರ–ಬಾರಾಮುಲ್ಲಾ ರೈಲ್ವೆ ಯೋಜನೆಯ ಭಾಗವಾಗಿ ಕೈಗೆತ್ತಿಕೊಳ್ಳಲಾದ ಚೆನಾಬ್ ನದಿಗೆ ನಿರ್ಮಿಸಲಾದ ರೈಲ್ವೆ ಸೇತುವೆಯು ಭಾರತದ ಎಂಜಿನಿಯರ್‌ಗಳ ಕೌಶಲವನ್ನು ಇಡೀ ಜಗತ್ತಿಗೆ ಸಾರಿ ಹೇಳಿತ್ತು.  

ADVERTISEMENT

ವಿಶ್ವ ಎಂಜಿನಿಯರ್‌ಗಳ ದಿನಾಚರಣೆ ಪ್ರಯುಕ್ತ ದೇಶದ ಎಂಜಿನಿಯರ್‌ಗಳ ಸಾಹಸಗಾಥೆಯನ್ನು ಮೆಲುಕು ಹಾಕಿದಾಗ ಹಲವು ಅಚ್ಚರಿಗಳು ಕಾಣಿಸಿಕೊಳ್ಳುತ್ತವೆ. ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದ ವೃತ್ತಿಪರರಲ್ಲಿ ಎಂಜಿನಿಯರ್‌ಗಳ ಪಾಲು ದೊಡ್ಡದು. ಅದರಲ್ಲೂ ಬಾಹ್ಯಾಕಾಶ, ವಿಮಾನಯಾನ, ಕೃಷಿಯಲ್ಲಿ ಡ್ರೋನ್ ಬಳಕೆ, ಕೈಗೆಟಕುವ ದರದಲ್ಲಿ ಮನೆಗಳ ತಯಾರಿಕೆ, ಸಿಮೆಂಟ್, ಕಬ್ಬಿಣದಿಂದ ಭಾರಿ ಕಟ್ಟಡಗಳ ನಿರ್ಮಾಣ, ನಿಗದಿತ ಸಮಯಕ್ಕಿಂತಲೂ ಮುಂಚೆಯೇ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಮಾಡುವ ಬೃಹತ್ ಯಂತ್ರಗಳ ಆವಿಷ್ಕಾರ, ಖಾಲಿಯಾಗಬಹುದಾದ ಹಾಗೂ ಪರಿಸರಕ್ಕೆ ನಾಶವಾಗುವ ಪೆಟ್ರೋಲ್, ಡೀಸೆಲ್‌ನಂತಹ ಫಾಸಿಲ್ ಇಂಧನಕ್ಕೆ ಪರ್ಯಾಯವಾಗಿ ಮಾಲಿನ್ಯ ರಹಿತ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಎಂಜಿನಿಯರ್‌ಗಳ ಪಾತ್ರ ಹಿರಿದಾದುದು.

ಭಾರತದಲ್ಲಿ ಅಧ್ಯಯನ ಮಾಡಿದ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೆ ಅಮೆರಿಕ, ಚೀನಾ, ಸಿಂಗಪುರ, ಕೆನಡಾ, ಫ್ರಾನ್ಸ್, ಲಂಡನ್‌ ಹಾಗೂ ಇತರ ಯುರೋಪಿಯನ್ ದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಭಾರತೀಯ ಮೂಲದ ಸುಂದರ ಪಿಚ್ಚೈ, ಸತ್ಯ ನಾದೆಲ್ಲ ಸೇರಿದಂತೆ ಹಲವರು ಅಮೆರಿಕದ ಬಹುರಾಷ್ಟ್ರೀಯ ಟೆಕ್ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿರುವುದು ಭಾರತೀಯರು ಜಗತ್ತಿನೆದುರು ಹೆಮ್ಮೆಯಿಂದ ನಡೆದಾಡುವಂತೆ ಮಾಡಿದೆ.

ಮೆಟ್ರೊ ರೈಲಿನ ಬಳಕೆಯು ಬೆಂಗಳೂರಿನಂತಹ ಮಹಾನಗರಗಳಲ್ಲಿನ ರಸ್ತೆಗಳ ಮೇಲಿನ ವಾಹನ ದಟ್ಟಣಿಯನ್ನು ತಕ್ಕಮಟ್ಟಿಗೆ ನಿವಾರಿಸಿವೆ. ಸೂರ್ಯನ ಶಾಖವನ್ನು ಬಳಸಿಕೊಂಡು ಗೃಹ ಬಳಕೆ, ಕಚೇರಿಗಳ ಬಳಕೆಗೆ ಬಳಸಲಾಗುವ ಸೋಲಾರ್ ಪ್ಯಾನೆಲ್‌ಗಳು ವಿದ್ಯುತ್ ಕ್ಷೇತ್ರದ ಪರಿಭಾಷೆಯನ್ನೇ ಬದಲಿಸಿವೆ. ಸೋಲಾರ್ ಪ್ಯಾನೆಲ್ ತಯಾರಿಕಾ ಕಂಪನಿಗಳು ಗುಡ್ಡಗಾಡಿನಲ್ಲಿ ವಾಸಿಸುವ ಜನಗಳಿಗೆ ನಿಜ ಅರ್ಥದಲ್ಲಿ ದಾರಿ ದೀಪವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.