ADVERTISEMENT

ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಿ: ಶಾಸಕ ಅಜಯಸಿಂಗ್

ಯಾಳವಾರ: ಕೋವಿಡ್ ಆರೈಕೆ ಕೇಂದ್ರಕ್ಕೆ ಶಾಸಕ ಅಜಯಸಿಂಗ್ ಭೇಟಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 1:06 IST
Last Updated 1 ಜೂನ್ 2021, 1:06 IST
ಜೇವರ್ಗಿ ತಾಲ್ಲೂಕಿನ ಯಾಳವಾರ ಕೋವಿಡ್ ಆರೈಕೆ ಕೇಂದ್ರಕ್ಕೆ ಸೋಮವಾರ ಶಾಸಕ ಡಾ. ಅಜಯಸಿಂಗ್ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿದರು
ಜೇವರ್ಗಿ ತಾಲ್ಲೂಕಿನ ಯಾಳವಾರ ಕೋವಿಡ್ ಆರೈಕೆ ಕೇಂದ್ರಕ್ಕೆ ಸೋಮವಾರ ಶಾಸಕ ಡಾ. ಅಜಯಸಿಂಗ್ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿದರು   

ಜೇವರ್ಗಿ: ಜೇವರ್ಗಿಮತ್ತು ಯಡ್ರಾಮಿ ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೂ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು ಎಂದು ಶಾಸಕ ಡಾ.ಅಜಯಸಿಂಗ್ ಹೇಳಿದರು.

ತಾಲ್ಲೂಕಿನ ಯಾಳವಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿದ ನಂತರ ಅವರು ಮಾತನಾಡಿದರು.

ಎರಡು ತಾಲ್ಲೂಕುಗಳಲ್ಲಿ 181 ಕೋವಿಡ್ ಪ್ರಕರಣ ಪತ್ತೆಯಾಗಿದ್ದು, 88 ಜನ ಗುಣಮುಖರಾಗಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ 11 ಜನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಜೇವರ್ಗಿ ಮತ್ತು ಯಡ್ರಾಮಿ ಆಸ್ಪತ್ರೆಯಲ್ಲಿ 41 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಲಾಕ್‍ಡೌನ್ ಜಾರಿಗೊಳಿಸಿದ್ದರಿಂದ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದರು.

ADVERTISEMENT

ರಾಜ್ಯದಲ್ಲಿ ಕೊರೊನಾ 3ನೇ ಅಲೆ ಹರಡುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ವಿಶೇಷವಾಗಿ ಮಕ್ಕಳಿಗೆ ಸೋಂಕು ಹರಡುವ ಸಾಧ್ಯತೆಗಳು ಅಧಿಕವಾಗಿವೆ. ಕಾರಣ ಪ್ರತಿಯೊಬ್ಬ ಪಾಲಕರು, ಪೋಷಕರು ತಮ್ಮ ಮಕ್ಕಳ ಆರೋಗ್ಯ ಕುರಿತು ತೀವೃ ನಿಗಾ ವಹಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ಹೊರಗಡೆ ಅಲೆಯಲು ಬಿಡಬಾರದು ಎಂದರು.

ಎರಡು ತಾಲ್ಲೂಕುಗಳಲ್ಲಿ ಇಲ್ಲಿಯವರೆಗೂ 33,807 ಜನರು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಬ್ಲಾಕ್ ಮತ್ತು ವೈಟ್ ಫಂಗಸ್ ಸೋಂಕು ತಡೆಗಟ್ಟಲು 5 ಸಾವಿರ ವೈಲ್ ಲಸಿಕೆ ತರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ ತಿಳಿಸಿದ್ದಾರೆ. ಆದರೆ ರಾಜ್ಯದ ಜನತೆಗೆ 5 ಸಾವಿರ ವೈಲ್ ಸಾಕಾಗುವುದಿಲ್ಲ ಎಂದು ಅವರು ತಿಳಿಸಿದರು.

ಯಾಳವಾರ ಆರೈಕೆ ಕೇಂದ್ರದಲ್ಲಿ ಒಟ್ಟು 43 ಜನ ದಾಖಲಾಗಿದ್ದರು. 24 ಜನ ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. 19 ಜನ ಕೋವಿಡ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಯಾಳವಾರ ಕೋವಿಡ್ ಆರೈಕೆ ಕೇಂದ್ರದಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ಶಾಸಕರು ಪರಿಶೀಲಿಸಿದರು.

ತಹಶೀಲ್ದಾರ್ ವಿನಯಕುಮಾರ ಪಾಟೀಲ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸಿದ್ದು ಪಾಟೀಲ, ಗೊಲ್ಲಾಳಪ್ಪಗೌಡ ಮಾಗಣಗೇರಾ, ಮುನ್ನಾಪಟೇಲ ಯಾಳವಾರ, ಖಾಸಿಂ ಪಟೇಲ್ ಮುದವಾಳ, ಚಂದ್ರಕಾಂತ ಪಾಟೀಲ ಮಾಗಣಗೇರಾ, ರಿಯಾಜ್ ಪಟೇಲ್ ಮುದವಾಳ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.