
ಕಲಬುರಗಿ: ಜಿಲ್ಲೆಯಲ್ಲಿ ಶೇ 80ರಷ್ಟು ಬೆಳೆಹಾನಿಯಾಗಿದೆ ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಸಮೀಕ್ಷೆ ನಡೆಸಿ, ಹೆಕ್ಟೇರ್‌ಗೆ ₹17 ಸಾವಿರ ಪರಿಹಾರ ಘೋಷಿಸಿದ್ದರು. ಆದರೆ, ಬೇಕಾಬಿಟ್ಟಿಯಾಗಿ ರೈತರ ಖಾತೆಗೆ ನಾಲ್ಕೈದು ಸಾವಿರ ಜಮಾ ಮಾಡುತ್ತಿದ್ದು, ಕೂಡಲೇ ಹೆಚ್ಚಿನ ಪರಿಹಾರವನ್ನು ಜಮಾ ಮಾಡಬೇಕು ಎಂದು ಶಾಸಕ ಬಸವರಾಜ ಮತ್ತಿಮಡು ಆಗ್ರಹಿಸಿದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಅಧಿಕಾರಿಗಳು, ಸರ್ಕಾರ ಕೇವಲ 3 ಲಕ್ಷ ಹೆಕ್ಟೇರ್ ಬೆಳೆ ಹಾನಿ ಎಂದು ವರದಿ ನೀಡಿದ್ದು ತಪ್ಪಾಗಿದೆ. ಬಾಕಿ ಉಳಿದ ಎಲ್ಲ ರೈತರಿಗೆ ಪೂರ್ಣ ಪರಿಹಾರ ನೀಡಬೇಕು ಎಂದರು.
ತೊಗರಿ ರಾಶಿ ಆರಂಭವಾಗಿದ್ದು, ಎಂಎಸ್ಪಿ ಪ್ರಕಾರ ₹8,500 ನೀಡುವ ಜತೆಗೆ ರಾಜ್ಯ ಸರ್ಕಾರ ₹500 ಸೇರಿಸಿ ತೊಗರಿ ಖರೀದಿಸಬೇಕು. ವಿಳಂಬ ಮಾಡದೇ 15 ದಿನದಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಮನವಿ ಮಾಡಿದರು.
ರೈತರಿಗೆ ಬೆಳಗಿನ ಜಾವ ಕನಿಷ್ಠ 6 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು. ರಾಜ್ಯಾದ್ಯಂತ ಸರ್ಕಾರ ಟನ್ ಕಬ್ಬಿಗೆ ₹3,300 ಘೋಷಣೆ ಮಾಡಿದೆ. ಆದರೆ, ಕಲಬುರಗಿ ಜಿಲ್ಲೆಯಲ್ಲಿ ಇದು ಪಾಲನೆಯಾಗುತ್ತಿಲ್ಲ. ಕೂಡಲೇ ಕಲಬುರಗಿಯಲ್ಲೂ ನಿಗದಿತ ದರ ನೀಡಬೇಕೆಂದು ಆಗ್ರಹಿಸಿದರು.
ಮುಂಗಾರು ಹಂಗಾಮಿನಲ್ಲಿ ಸುರಿದ ಭಾರಿ ಮಳೆಗೆ ಹೆಸರು ಬೆಳೆ ಸಂಪೂರ್ಣ ಹಾನಿಗೀಡಾಗಿದೆ. ಸರ್ಕಾರ ಅದಕ್ಕೂ ಪರಿಹಾರ ಒದಗಿಸಬೇಕು. ಗ್ರಾಮೀಣ ಭಾಗದಲ್ಲಿ ಜಮೀನುಗಳಿಗೆ ಹೋಗುವ ರಸ್ತೆಗಳ ಬಗ್ಗೆ ರೈತರ ಮಧ್ಯೆ ನಿರಂತರ ವಾಜ್ಯಗಳು ನಡೆಯುತ್ತಿದ್ದು, ತಹಸೀಲ್ದಾರ್, ಸಹಾಯಕ ಆಯುಕ್ತರಿಂದ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದ್ದು, ಬೇಕಿದ್ದರೆ ಶಾಸಕರ ಅನುದಾನ ಸ್ವಲ್ಪ ಕಡಿಮೆ ಮಾಡಿ, ರೈತರಿಗೆ ಪರಿಹಾರ ವಿತರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.