ADVERTISEMENT

ಅಫಜಲಪುರ: ಕೋವಿಡ್‌ ಕಾರಣ ಅನುದಾನ ಕಡಿತ; ಮೂಲಸೌಕರ್ಯಕ್ಕೆ ಆದ್ಯತೆ

ಹೆಚ್ಚಿನ ಅನುದಾನ ನಿರೀಕ್ಷೆಯಲ್ಲಿ ಶಾಸಕ ಎಂ.ವೈ. ಪಾಟೀಲ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 6:38 IST
Last Updated 6 ಅಕ್ಟೋಬರ್ 2021, 6:38 IST
ಎಂ.ವೈ.ಪಾಟೀಲ
ಎಂ.ವೈ.ಪಾಟೀಲ   

ಅಫಜಲಪುರ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಅಡಿ ಅಫಜಲಪುರ ಕ್ಷೇತ್ರಕ್ಕೆ ಕಳೆದ ಮೂರು ವರ್ಷಗಳಿಂದ ₹6 ಕೋಟಿ ಅನುದಾನ ಮಂಜೂರಾಗಿದ್ದರೂ, ಬಿಡುಗಡೆಯಾಗಿದ್ದು ಮಾತ್ರ ₹ 3 ಕೋಟಿ. ಕೋವಿಡ್‌ ಕಾರಣ ಹಾನಿ ಭರಿಸಲು ಶಾಸಕರ ನಿಧಿಯ ಅನುದಾನವನ್ನು ಅರ್ಧದಷ್ಟು ವಾಪಸ್‌ ಪಡೆಯಲಾಗಿದೆ ಎನ್ನುವುದು ಕಾಂಗ್ರೆಸ್‌ ಶಾಸಕ ಎಂ.ವೈ.ಪಾಟೀಲ ಅವರ ಹೇಳಿಕೆ.

₹ 95 ಲಕ್ಷ ಅನುದಾನದಲ್ಲಿ ಇದೇ ಜುಲೈ ಅಂತ್ಯದವರೆಗೆ ₹ 65.49 ಲಕ್ಷ ಖರ್ಚು ಮಾಡಲಾಗಿದೆ. ಇನ್ನೂ ₹ 2 ಕೋಟಿ ಪ್ರಸಕ್ತ ವರ್ಷದ ನಿಧಿ ಬಿಡುಗಡೆಯಾಗಿದೆ ಎಂದು ಸರ್ಕಾರ ಹೇಳುತ್ತಿದೆಯಾದರೂ ನಮ್ಮ ಖಾತೆಗೆ ಹಣ ಬಂದಿಲ್ಲ ಎಂಬುದು ಅವರ ಹೇಳಿಕೆ.

ಈವರೆಗೆ ಬಿಡುಗಡೆಯಾದ ಅನುದಾನದಲ್ಲಿ 21 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ 13 ಕಾಮಗಾರಿಗಳು ಮುಗಿದಿದ್ದು, ಇನ್ನೂ 5 ಕಾಮಗಾರಿಗಳು ಪ್ರಗತಿಯಲ್ಲಿವೆ. 3 ಕಾಮಗಾರಿಗಳಿಗೆ ಹೊಸದಾಗಿ ಕ್ರಿಯಾಯೋಜನೆ ತಯಾರಿಸಲಾಗಿದೆ. ಖರ್ಚು ಮಾಡಿರುವ ಅನುದಾನದಲ್ಲಿ ಗ್ರಾಮಗಳಿಗೆ ರಸ್ತೆ, ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಕೆ ಹಾಗೂ ಚರಂಡಿ ನಿರ್ಮಾಣ, ಕಲ್ಯಾಣ ಮಂಟಪಕ್ಕೆ ಆದ್ಯತೆ ನೀಡಲಾಗಿದೆ.

ADVERTISEMENT

‘ಪ್ರತಿವರ್ಷ ಶಾಸಕರಿಗೆ ₹ 2 ಕೋಟಿ ಅನುದಾನ ನೀಡಲಾಗುತ್ತದೆ. ನಾಲ್ಕು ಕಂತಿನಂತೆ (ಪ್ರತಿ ಕಂತಿನಲ್ಲಿ ₹ 50 ಲಕ್ಷ) ಒಟ್ಟಾರೆ ₹ 8 ಕೋಟಿ ಅನುದಾನ ಬರಬೇಕಿತ್ತು. ಆದರೆ ಇಲ್ಲಿಯವರೆಗೆ ಪೂರ್ಣ ಅನುದಾನ ಒಮ್ಮೆಯೂ ಬಂದಿಲ್ಲ. ಕೋವಿಡ್‌ ಹಾವಳಿಯ ಕಾರಣ ಅನುದಾನ ಕಡಿತಗೊಳಿಸಲಾಗಿದೆ ಎಂದು ಸರ್ಕಾರ ಸಮಜಾಯಿಷಿ ನೀಡುತ್ತಿದೆ. ಆದರೆ, ಕೆಲವರ ಆಯ್ದ ಕ್ಷೇತ್ರಗಳಿಗೆ ಮಾತ್ರ ₹ 4 ಕೋಟಿಯಿಂದ ₹ 5 ಕೋಟಿಗೂ ಅಧಿಕ ಅನುದಾನ ಬಂದಿದೆ. ಅಫಜಲಪುರ ಕ್ಷೇತ್ರಕ್ಕೆ ಮಾತ್ರ ಕಡಿಮೆ ಬಂದಿದೆ. ಈ ತಾರತಮ್ಯ ಮಾಡದೇ ಎಲ್ಲರಿಗೂ ಸಮಾನ ಅನುದಾನ ನೀಡಿ’ ಎಂದು ಸ್ವತಃ ಶಾಸಕ ಎಂ.ವೈ. ಪಾಟೀಲ ಅವರೇ ಈ ಹಿಂದೆ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಆಗ್ರಹಪಡಿಸಿದ್ದರು.‌

‘ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ’ಯಲ್ಲಿ ಹೆಚ್ಚಿನ ಪಾಲನ್ನು ಗ್ರಾಮಗಳಿಗೆ ಸಂಚರಿಸುವ ಕೂಡು ರಸ್ತೆ ಹಾಗೂ ಗ್ರಾಮಗಳಲ್ಲಿ ಸಿಮೆಂಟ್ ರಸ್ತೆಗಳ ನಿರ್ಮಾಣ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ದುರಸ್ತಿ, ಕಾಂಪೌಂಡ್ ನಿರ್ಮಾಣ, ಶೌಚಾಲಯ ಸೇರಿದಂತೆ ಇನ್ನಿತರ ಮೌಲಸೌಕರ್ಯಗಳಿಗೆ ಎರಡನೇ ಆದ್ಯತೆ ನೀಡಿದ್ದೇನೆ’ ಎಂದು ಶಾಸಕ ತಿಳಿಸಿದ್ದಾರೆ.‌

’ತಾಲ್ಲೂಕಿನ ಕರಜಿಗಿ, ಮಣ್ಣೂರು, ಜೇವರ್ಗಿ, ಗೌರವ ಸಾಗನೂರು, ಶಿವಪುರ ಹಸರಗುಂಡಗಿ, ಹೂವಿನಹಳ್ಳಿ, ಕಲ್ಲೂರು, ಭೋಸಗಾ, ಮಾತೋಳಿ, ಕುಲಾಲಿ, ಗಬ್ಬೂರು ಸೇರಿದಂತೆ ಒಟ್ಟು 20 ಗ್ರಾಮಗಳಲ್ಲಿ ಕೂಡ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆಲವು ಗ್ರಾಮಗಳಲ್ಲಿ ದೇವಸ್ಥಾನಕ್ಕೆ ಹೋಗುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.ನಮ್ಮ ಕ್ಷೇತ್ರಕ್ಕೆ ಬಾಕಿ ಇರುವ ಅನುದಾನವನ್ನೂ ಬೇಗ ನೀಡುವ ನಿರೀಕ್ಷೆ ಇದೆ. ಅದು ಬಿಡುಗಡೆಯಾದರೆ ಹೆಚ್ಚಿನ ದೇವಸ್ಥಾನಗಳಿಗೆ ಜೀರ್ಣೋದ್ಧಾರಕ್ಕಾಗಿ ಅನುದಾನ ಖರ್ಚು ಮಾಡಬೇಕಾಗಿದೆ‘ ಎಂದು ಅವರು ತಿಳಿಸಿದರು.

’ಸರಿಯಾದ ಸಮಯಕ್ಕೆ ಹಣ ಹಂತಹಂತವಾಗಿ ಬಿಡುಗಡೆಯಾದರೆ ಗ್ರಾಮಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಅನುಕೂಲವಾಗುತ್ತದೆ. ಅನುದಾನ ಬಿಡುಗಡೆಯಾಗುತ್ತದೆ ಎಂಬ ಭರವಸೆಯಲ್ಲಿ ನಾವಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.