ADVERTISEMENT

ಸಚಿವ ಸ್ಥಾನಕ್ಕೆ ಶಾಸಕದ್ವಯರ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 16:23 IST
Last Updated 28 ಜುಲೈ 2021, 16:23 IST
ದತ್ತಾತ್ರೇಯ ಪಾಟೀಲ
ದತ್ತಾತ್ರೇಯ ಪಾಟೀಲ   

ಕಲಬುರ್ಗಿ: ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ನೂತನ ಸಂಪುಟದಲ್ಲಿ ಜಿಲ್ಲೆಯಿಂದ ಯಾರು ಸಚಿವರಾಗಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕವೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಸ್ವತಃ ಬೊಮ್ಮಾಯಿ ಅವರು ಹೇಳಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷಗಳು ಮುಗಿದು ಮೂರನೇ ವರ್ಷಕ್ಕೆ ಕಾಲಿಟ್ಟರೂ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಹೀಗಾಗಿ, ಹೇಗಾದರೂ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯಬೇಕು ಎಂಬುದು ಜಿಲ್ಲೆಯ ಪಕ್ಷದ ಮುಖಂಡರದ್ದಾಗಿದೆ. ಆ ನಿಟ್ಟಿನಲ್ಲಿ ಹಲವರು ತಮ್ಮದೇ ಆದ ದಾರಿಯಲ್ಲಿ ವರಿಷ್ಠರ ಗಮನ ಸೆಳೆಯಲು ಮುಂದಾಗಿದ್ದಾರೆ.

ಲಭ್ಯವಿರುವ ಮಾಹಿತಿಗಳ ಪ್ರಕಾರ ಸಚಿವರಾಗುವ ರೇಸ್‌ನಲ್ಲಿ ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಅವರು ಮುಂಚೂಣಿಯಲ್ಲಿದ್ದಾರೆ ಎನ್ನಲಾಗುತ್ತಿದೆ.

ADVERTISEMENT

ಆಳಂದ ಶಾಸಕ ಸುಭಾಷ್ ಗುತ್ತೇದಾರ ಅವರೂ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ದತ್ತಾತ್ರೇಯ ಪಾಟೀಲ ರೇವೂರ ಅವರ ತಂದೆ ದಿ.ಚಂದ್ರಶೇಖರ ಪಾಟೀಲ ರೇವೂರ ಅವರ ಕಾಲದಿಂದಲೂ ಬೊಮ್ಮಾಯಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಕೋವಿಡ್ ಹರಡುವುದಕ್ಕೂ ಮುನ್ನ ಆಯೋಜಿಸಿದ್ದ ಉದ್ಯೋಗ ಮೇಳದ ಮುಖ್ಯ ಅತಿಥಿಯನ್ನಾಗಿ ಬೊಮ್ಮಾಯಿ ಅವರನ್ನು ಆಹ್ವಾನಿಸಿದ್ದರು. ಹೀಗಾಗಿ, ಬೊಮ್ಮಾಯಿ ಅವರದೇ ನಿರ್ಧಾರ ಅಂತಿಮವಾದರೆ ರೇವೂರ ಅವರಿಗೆ ಸಚಿವ ಸ್ಥಾನದ ಅದೃಷ್ಟ ಒಲಿಯಬಹುದು ಎನ್ನುತ್ತಾರೆ ಅವರ ಬೆಂಬಲಿಗರು.

ಸಂಘ ಪರಿವಾರದ ಪ್ರಮುಖರೊಂದಿಗೆ ನಿಕಟ ಸಂಪರ್ಕ ಹೊಂದಿರುವ ತೆಲ್ಕೂರ, ಪಕ್ಷದ ವಿಭಾಗೀಯ ಪ್ರಭಾರಿಯೂ ಆಗಿದ್ದಾರೆ. ಇದು ಅವರಿಗೆ ಅನುಕೂಲಕರವಾಗಲಿದೆ ಎಂಬುದು ಅವರ ಬೆಂಬಲಿಗರ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.