ADVERTISEMENT

‘ನಾಗಾವಿ ಕೋವಿಡ್ ಆರೈಕೆ ಕೇಂದ್ರದಲ್ಲಿ ಸೌಲಭ್ಯ ಹೆಚ್ಚಳಕ್ಕೆ ಯತ್ನ’

ಕಲಬುರ್ಗಿ ವಿಮಾನ ನಿಲ್ದಾಣ ಸಿಬ್ಬಂದಿಗೆ ಫೇಸ್ ಶೀಲ್ಡ್, ಮಾಸ್ಕ್, ಸ್ಯಾನಿಟೈಸರ್ ವಿತರಣೆ

​ಪ್ರಜಾವಾಣಿ ವಾರ್ತೆ
Published 11 ಮೇ 2021, 7:48 IST
Last Updated 11 ಮೇ 2021, 7:48 IST
ಚಿತ್ತಾಪುರದ ಶಾಸಕ ಪ್ರಿಯಾಂಕ್ ಎಂ. ಖರ್ಗೆ ಕಲಬುರ್ಗಿ ವಿಮಾನ ನಿಲ್ದಾಣದ ಸಿಬ್ಬಂದಿಗೆ ಫೇಸ್ ಶೀಲ್ಡ್, ಮಾಸ್ಕ್ ವಿತರಿಸಿದರು
ಚಿತ್ತಾಪುರದ ಶಾಸಕ ಪ್ರಿಯಾಂಕ್ ಎಂ. ಖರ್ಗೆ ಕಲಬುರ್ಗಿ ವಿಮಾನ ನಿಲ್ದಾಣದ ಸಿಬ್ಬಂದಿಗೆ ಫೇಸ್ ಶೀಲ್ಡ್, ಮಾಸ್ಕ್ ವಿತರಿಸಿದರು   

ಚಿತ್ತಾಪುರ: ಶಾಸಕ ಪ್ರಿಯಾಂಕ್ ಎಂ. ಖರ್ಗೆ ಅವರು ಈಚೆಗೆ ಚಿತ್ತಾಪುರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪಿಪಿಇ ಕಿಟ್ ಧರಿಸಿ ಕೋವಿಡ್ ವಾರ್ಡ್ ಒಳಗೆ ಪ್ರವೇಶಿಸಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರ ಆರೋಗ್ಯ ವಿಚಾರಿಸಿದರು.

ಚಿಕಿತ್ಸಗೆ ಬೇಕಾದ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಲಾಗಿದೆ. ಕೊರೊನಾ ಸೋಂಕಿತರಿಗೆ ಕೊಡುವ ಮಾತ್ರೆ, ಔಷಧ, ಇಂಜೆಕ್ಷನ್, ಆಮ್ಲಜನಕದ ವ್ಯವಸ್ಥೆ ಮಾಡಲಾಗಿದೆ. ಆಮ್ಲಜನಕ ಸಹಿತ 10 ಹಾಸಿಗೆಯ ಐಸಿಯು ವಿಭಾಗ, 14 ಹಾಸಿಗೆ ಒಟ್ಟು 24 ಹಾಸಿಗೆಯ ಕೋವಿಡ್ ವಾರ್ಡ್ ಸಜ್ಜುಗೊಳಿಸಲಾಗಿದೆ. ಸೋಂಕಿತರು ನಿರ್ಭಯವಾಗಿ ಚಿಕಿತ್ಸೆ ಪಡೆಯಬೇಕು ಎಂದು ಅವರು ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದರು.

ಆಸ್ಪತ್ರೆಯಲ್ಲಿ ಹಾಸಿಗೆ ಸಿಗುತ್ತಿಲ್ಲ ಎಂದು ಆತಂಕ ಪಡುವ ಅಗತ್ಯವಿಲ್ಲ. ನಾಗಾವಿಯಲ್ಲಿನ ಕೋವಿಡ್ ಕೇಂದ್ರಕ್ಕೆ ದಾಖಲಾಗಿ ಸೂಕ್ತ ಸಿಕಿತ್ಸೆ ಪಡೆಯಬೇಕು. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವು ಅಗತ್ಯ ವೈದ್ಯಕೀಯ ಸೌಲಭ್ಯ ಹಾಗೂ ವೈದ್ಯರನ್ನು ಒದಗಿಸಿದರೆ ನಾಗಾವಿಯ ಮೊರಾರ್ಜಿಯ ದೇಸಾಯಿ ವಸತಿ ಶಾಲೆಯಲ್ಲಿ ಆರಂಭಿಸಿರುವ 100 ಹಾಸಿಗೆಯ ಕೋವಿಡ್ ಕೇರ್ ಕೇಂದ್ರವನ್ನು 150 ಹಾಸಿಗೆಗೆ ಹೆಚ್ಚಿಸಿ ಜಿಲ್ಲಾ ಮಟ್ಟದಲ್ಲಿ ದೊರೆಯುವ ಚಿಕಿತ್ಸಾ ಸೌಲಭ್ಯ ಒದಗಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಪ್ರಿಯಾಂಕ್ ಅವರು ಹೇಳಿದರು.

ADVERTISEMENT

ತಹಶೀಲ್ದಾರ್ ಉಮಾಕಾಂತ ಹಳ್ಳೆ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ಪಾಟೀಲ್, ಆಸ್ಪತ್ರೆಯ ಆಡಳಿತ ವೈದ್ಯಾದಿಕಾರಿ ಡಾ.ನಂದಾ ರಾಂಪುರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್, ಜಿಲ್ಲಾ ಪಂಚಾಯಿತಿ ಸದಸ್ಯ ಶಿವಾನಂದ ಪಾಟೀಲ್, ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್, ಸಿಪಿಐ ಕೃಷ್ಣಪ್ಪ ಕಲ್ಲದೇವರ್, ಪಿಎಸ್ಐ ವಿಜಯಕುಮಾರ ಭಾವಗಿ ಇದ್ದರು.

ವಿಮಾನ ನಿಲ್ದಾಣ ಸಿಬ್ಬಂದಿಗೆ ಸೌಲಭ್ಯ: ಕಲಬುರ್ಗಿ ವಿಮಾನ ನಿಲ್ದಾಣ ಸಿಬ್ಬಂದಿಗೆ ಭಾನುವಾರ ಶಾಸಕ ಪ್ರಿಯಾಂಕ್ ಅವರು 82 ಫೇಸ್ ಶೀಲ್ಡ್, 430 ಎನ್-95 ಮಾಸ್ಕ್ ಹಾಗೂ 20 ಲೀಟರ್ ಸ್ಯಾನಿಟೈಸರ್ ವಿತರಣೆ ಮಾಡಿದರು.

*ಎಸಿಸಿ ಸಿಮೆಂಟ್ ಕಾರ್ಖಾನೆ ಆಡಳಿತವು ₹30 ಲಕ್ಷ ವೆಚ್ಚದಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲು ಒಪ್ಪಿಕೊಂಡಿದೆ. ಘಟಕದಿಂದ ಸ್ಥಳೀಯ ಆಸ್ಪತ್ರೆಗೆ ಆಮ್ಲಜನಕದ ಕೊರತೆ ಕಾಡಲಾರದು.

–ಪ್ರಿಯಾಂಕ್ ಎಂ. ಖರ್ಗೆ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.