ADVERTISEMENT

PV Web Exlusive: ಮಾದರಿಯಾದ ವಿಶ್ವೇಶ್ವರಯ್ಯ ಕಾಲೊನಿ

ಎಲ್‌.ಮಂಜುನಾಥ್‌.ಸಾಸಲು, ದೊಡ್ಡಬಳ್ಳಾಪುರ ತಾ.
Published 24 ಸೆಪ್ಟೆಂಬರ್ 2020, 11:20 IST
Last Updated 24 ಸೆಪ್ಟೆಂಬರ್ 2020, 11:20 IST
ಕಲಬುರ್ಗಿ ನಗರದ ವಿಶ್ವೇಶ್ವರಯ್ಯ ಕಾಲೊನಿಯ ನೋಟ
ಕಲಬುರ್ಗಿ ನಗರದ ವಿಶ್ವೇಶ್ವರಯ್ಯ ಕಾಲೊನಿಯ ನೋಟ   

ಕಲಬುರ್ಗಿ: ಜನರ ಇಚ್ಛಾಶಕ್ತಿ ಹಾಗೂ ಜನಪ್ರತಿನಿಧಿಗಳ ಸಹಕಾರ ಇದ್ದರೆ ಯಾವುದೇ ಪ್ರದೇಶ, ನಗರವನ್ನು ವ್ಯವಸ್ಥಿತವಾಗಿ ನಿರ್ಮಿಸಬಹುದು ಎನ್ನುವುದಕ್ಕೆ ಇಲ್ಲಿನ ವಿಶ್ವೇಶ್ವರಯ್ಯ ಕಾಲೊನಿಉತ್ತಮ ಉದಾಹರಣೆ ಎನ್ನಬಹುದು.

ನಗರದ ಸೇಡಂ ರಸ್ತೆಯಲ್ಲಿ ಸುಮಾರು 6 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ವಿಶ್ವೇಶ್ವರಯ್ಯ ಕಾಲೊನಿಯು ಎಲ್ಲಾ ಮೂಲಸೌಲಭ್ಯಗಳನ್ನು ತನ್ನೊಡಲಲ್ಲಿ ವ್ಯವಸ್ಥಿತವಾಗಿ ನಿರ್ಮಿಸಿಕೊಂಡಿದೆ. ಸ್ಥಳೀಯ ನಿವಾಸಿಗಳು 'ನಮ್ಮ ಕಾಲೊನಿ ನಮ್ಮ ಮನೆಯಂತೆ' ಎಂಬ ಮನೋಭಾವದಿಂದ ಸ್ವಚ್ಛ ಹಾಗೂ ಸುಂದರ ಕಾಲೊನಿಯಾಗಿ ರೂಪಗೊಂಡಿದೆ.

ಈ ಕಾಲೊನಿಯು 1980ರಲ್ಲಿ ನಿರ್ಮಾಣವಾಯಿತು. ನಗರದ ಪಿಡಿಎ ಕಾಲೇಜಿನ ಮಾಜಿ ಪ್ರಾಂಶುಪಾಲರಾಗಿದ್ದ ಭೀಮಶಂಕರ ಹೆಬ್ಳೆ, ಪರಮೇಶ್ವರಪ್ಪ, ಮಲ್ಲಪ್ಪ ಹಾಗೂ ಬಿ.ಆರ್‌.ಪಾಟೀಲ ಅವರು ಆರಂಭದಲ್ಲಿ ಇಲ್ಲಿ ನಿವೇಶನ ಹೊಂದಿದ್ದರು. ಈ ಎಲ್ಲ ಸಮಾನ ಮನಸ್ಕರು ಸೇರಿ ಒಂದು ಮಾದರಿ ಕಾಲೊನಿಯನ್ನು ನಿರ್ಮಾಣ ಮಾಡೋಣ ಎಂಬ ಚಿಂತನೆಯೊಂದಿಗೆ ಉಗಮವಾಗಿದ್ದೇ ಈ ವಿಶ್ವೇಶ್ವರಯ್ಯ ಕಾಲೊನಿ.

ADVERTISEMENT

ಸ್ಥಳೀಯ ನಿವಾಸಿಗಳು ಸಂಘಟಿತರಾಗಿ ಆರಂಭದಲ್ಲಿ ವಿಶ್ವೇಶ್ವರಯ್ಯ ಗೃಹ ನಿರ್ಮಾಣ ಸಹಕಾರ ಸಂಘವನ್ನು ರಚಿಸಿಕೊಂಡು ಆ ಮೂಲಕ ತಮ್ಮ ಕಾಲೊನಿಯನ್ನು ವ್ಯವಸ್ಥಿತ ನಿರ್ಮಾಣಕ್ಕೆ ಮುನ್ನುಡಿ ಬರೆದರು.

ಇಲ್ಲಿನ ನಿವಾಸಿಗಳು ಆರಂಭದಲ್ಲಿ ಸರ್ಕಾರದಿಂದ ಯಾವುದೇ ಅನುದಾನವನ್ನು ಬಯಸದೇ ಸಂಘಟಿತ ಮನೋಭಾವದಿಂದ ಒಗ್ಗೂಡಿ ತಮ್ಮ ಸ್ವಂತ ಹಣದಿಂದಲೇ ರಸ್ತೆ, ಒಳಚರಂಡಿ ವ್ಯವಸ್ಥೆ, ವಿದ್ಯುತ್‌ ಕಂಬ ಅಳವಡಿಕೆ, ಉದ್ಯಾನ, ಸಮುದಾಯ ಭವನ, ದೇವಸ್ಥಾನ ನಿರ್ಮಾಣ... ಹೀಗೆ ಹಂತ ಹಂತವಾಗಿ ಕಾಲೊನಿಯ ಸಮಗ್ರ ಅಭಿವೃದ್ಧಿಯ ಕಾಮಗಾರಿಗಳನ್ನು ಮಾಡಿಸಿದರು. ನಂತರ ಸ್ಥಳೀಯ ಮುಖಂಡ ಶರಣಕುಮಾರ ಮೋದಿ ಅವರು ಪಾಲಿಕೆಯ ಮೇಯರ್‌ ಆಗಿದ್ದ ಅವಧಿಯಲ್ಲಿ ಪಾಲಿಕೆಯ ಅನುದಾನದಲ್ಲಿ ಕಾಲೊನಿಯಲ್ಲಿ ಡಾಂಬರ್‌ ರಸ್ತೆ, ಮಕ್ಕಳ ಉದ್ಯಾನ ನಿರ್ಮಾಣ ಹಾಗೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ಮೂಲಕ ಕಾಲೊನಿಯ ಅಭಿವೃದ್ಧಿಗೆ ಸ್ಥಳೀಯರೊಂದಿಗೆ ಕೈಜೋಡಿಸಿದರು. ಇಂದು ಈ ಕಾಲೊನಿಯು ಇತರೆ ನಗರಗಳಿಗೆ ಮಾದರಿಯಾಗಿ ಹೊರಹೊಮ್ಮಿದೆ.

ಕಾಲೊನಿಯ ವಿಶೇಷ:ಪ್ರಸ್ತುತ ಕಾಲೊನಿಯಲ್ಲಿ 200ಕ್ಕೂ ಅಧಿಕ ಮನೆಗಳಿವೆ. ಒಟ್ಟು 600 ಜನಸಂಖ್ಯೆಯನ್ನು ಒಳಗೊಂಡಿದೆ. 500ಕ್ಕೂ ಹೆಚ್ಚು ಗಿಡ– ಮರಗಳಿವೆ. ಒಂದೇ ಕೊಳವೆ ಬಾವಿ ಇದ್ದು, ಇದರಿಂದಲೇ ಇಲ್ಲಿ ನಿರ್ಮಿಸಿರುವ 50 ಸಾವಿರ ಲೀಟರ್‌ ಸಾಮರ್ಥ್ಯದ ಓವರ್‌ ಹೆಡ್‌ ಟ್ಯಾಂಕ್‌ಗೆ ನೀರು ಪೂರೈಸಲಾಗುತ್ತಿದೆ. ಇದರ ಮೂಲಕವಾಗಿಯೇ ಇಲ್ಲಿನ ಎಲ್ಲಾ ಮನೆಗಳಿಗೆ ನೀರು ಪೂರೈಸಲಾಗುತ್ತಿದೆ. ಜನರ ಸುರಕ್ಷತೆಗಾಗಿ ಕಾಲೊನಿಯ ಸುತ್ತ 5 ಅಡಿ ಎತ್ತರದ ಕಾಂಪೌಂಡನ್ನು ನಿರ್ಮಿಸಲಾಗಿದೆ. ಕಾಲೊನಿಯ ಪ್ರವೇಶಕ್ಕೆ ಮೂರು ಕಡೆಗಳಲ್ಲಿ ವಿಶಾಲವಾದ ಗೇಟುಗಳನ್ನು ಅಳವಡಿಸಲಾಗಿದೆ. ಇಲ್ಲಿಗೆ ಬಂದು ಹೋಗುವವರು ಈ ಮೂರುಗೇಟುಗಳ ಮೂಲಕವೇ ಹಾದುಹೋಗಬೇಕು. ಅಪರಾಧಗಳ ಕಡಿವಾಣಕ್ಕಾಗಿ ಈ ಕಾಲೊನಿಯ ವಿದ್ಯುತ್‌ ಕಂಬಗಳಲ್ಲಿ ಅಲ್ಲಲ್ಲಿ 16 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ನಿರ್ವಹಣೆಗಾಗಿ ವಾರ್ಷಿಕ ₹ 4 ಸಾವಿರ ಸಂಗ್ರಹ:‘ಆರಂಭದಲ್ಲಿ ಸರ್ಕಾರದಿಂದ ಯಾವುದೇ ಅನುದಾನ ಪಡೆಯದೇ ಕಾಲೊನಿಯ ನಿವಾಸಿಗಳ ಸಹಕಾರದಿಂದ ಕಾಲೊನಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಕಾಲೊನಿಯ ನಿರ್ವಹಣೆಗಾಗಿಸಂಘದ ಅಡಿಯಲ್ಲಿ ಸ್ಥಳೀಯರಿಂದ ವಾರ್ಷಿಕ ₹ 4 ಸಾವಿರ ಸಂಗ್ರಹಿಸುತ್ತೇವೆ. ಇದರಿಂದಲೇ ಕಾಲೊನಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತೇವೆ. ಈ ರೀತಿ ಸಂಗ್ರಹವಾದ ಹಣದಿಂದ ₹ 35 ಲಕ್ಷ ವೆಚ್ಚದಲ್ಲಿ ವಿಶ್ವೇಶ್ವರಯ್ಯ ಸಮುದಾಯ ಭವನ ನಿರ್ಮಿಸಿಕೊಂಡಿದ್ದೇವೆ. ₹ 50 ಸಾವಿರ ವೆಚ್ಚದಲ್ಲಿ ಉದ್ಯಾನ ನಿರ್ಮಾಣ ಹಾಗೂ ಶಿವ ಮಂದಿರ ನಿರ್ಮಾಣ ಮಾಡಲಾಗಿದೆ. ಕಾಲೊನಿಯಲ್ಲಿ ನಡೆಯುವ ಯಾವುದೇ ಶುಭ ಕಾರ್ಯಗಳನ್ನು ನಾವು ಎಲ್ಲರೂ ಸೇರೆ ಒಂದೇ ಕುಟುಂಬದ ರೀತಿಯಲ್ಲಿ ಇಲ್ಲಿನ ಸಮುದಾಯದ ಭವನದಲ್ಲಿ ಆಚರಿಸುತ್ತೇವೆ‘ ಎಂದು ಕಾಲೊನಿಯ ನಿವಾಸಿ ಹಾಗೂ ವಿಶ್ವೇಶ್ವರಯ್ಯ ಗೃಹ ನಿರ್ಮಾಣ ಸಹಕಾರ ಸಂಘದ ಕಾರ್ಯದರ್ಶಿ ರವೀಂದ್ರ ಲಟ್ಟೆ ಹೇಳುತ್ತಾರೆ.

‘ಈ ಕಾಲೊನಿಯು ಆರಂಭದಲ್ಲಿ ಕುಸುನೂರು ಮಂಡಲ ಪಂಚಾಯಿತಿ ವ್ಯಾಪ್ತಿಗೆ ಸೇರಿತ್ತು. ಇಲ್ಲಿನ ನಿವಾಸಿಗಳೇ ತಮ್ಮ ಸ್ವಂತ ಹಣದಿಂದ ಕಾಲೊನಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. 2017ರಲ್ಲಿ ಪಾಲಿಕೆಯ ಮೇಯರ್‌ ಆದ ನಂತರ ನನ್ನ ಅನುದಾನದಲ್ಲಿ ಕಾಲೊನಿಯಲ್ಲಿ ಮೂರು ರಸ್ತೆಗಳನ್ನು ಡಾಂಬರೀಕರಣ ಮಾಡಲಾಯಿತು. ಹೈಮಾಸ್ಟ್‌ ಬೀದಿ ದೀಪಗಳನ್ನು ಅಳವಡಿಸಲಾಯಿತು. ಇಡೀ ನಗರವನ್ನು ಹಸಿರು ನಗರ ಮಾಡುವ ನಿಟ್ಟಿನಲ್ಲಿ ಈ ಕಾಲೊನಿಯಿಂದಲೇ ನೂರಾರು ಸಸಿಗಳನ್ನು ನೆಡುವ ಮೂಲಕ ಮುನ್ನುಡಿ ಬರೆಯಲಾಯಿತು‘ ಎಂದು ಇಲ್ಲಿನ ನಿವಾಸಿ, ಮಾಜಿ ಮೇಯರ್‌ ಶರಣಕುಮಾರ ಮೋದಿ ಹೆಮ್ಮೆಯಿಂದ ಹೇಳುತ್ತಾರೆ.

‘ನಮ್ಮ ಕಾಲೊನಿಯಲ್ಲಿ 400ಕ್ಕೂ ಹೆಚ್ಚು ಗಿಡ–ಮರಗಳಿದ್ದು, ಹಚ್ಚ ಹಸಿರಿನಿಂದ ಕೂಡಿದೆ. ಎಲ್ಲರೂ ಪರಿಸರ ಪ್ರೇಮಿಗಳಾಗಿದ್ದು, ಮನೆಯಂತೆಯೇ ಇಡೀ ಕಾಲೊನಿಯನ್ನು ಸ್ವಚ್ಛ ಹಾಗೂ ಸುಂದರ ಕಾಲೊನಿಯನ್ನಾಗಿ ಇಟ್ಟುಕೊಂಡಿದ್ದೇವೆ‘ ಎನ್ನುತ್ತಾರೆ ಇಲ್ಲಿನ ನಿವಾಸಿ, ಪಿಡಿಎ ಕಾಲೇಜಿನ ಉಪನ್ಯಾಸಕಿ ಸುಜಾತಾ ಪಾಟೀಲ.

‘ಇಲ್ಲಿನ ಪ್ರತಿ ಮನೆಯವರು ತಮ್ಮ ಮನೆಯ ಮುಂದಿನ ಗಿಡ, ಮರಗಳನ್ನು ಪೋಷಣೆ ಮಾಡುತ್ತಾರೆ. ರಸ್ತೆಗಳ ಸ್ವಚ್ಛತೆಗಾಗಿ ಪಾಲಿಕೆಯ ಕಾರ್ಮಿಕರೊಬ್ಬರನ್ನು ನೇಮಕ ಮಾಡಲಾಗಿದೆ. ಒಂದು ವೇಳೆ ಅವರು ಬಾರದೇ ಇದ್ದಾಗ ನಾವೇ ಸ್ವತಃ ರಸ್ತೆಯನ್ನು ಸ್ವಚ್ಚ ಮಾಡಿಕೊಳ್ಳುತ್ತೇವೆ‘ ಎಂದು ಇಲ್ಲಿನ ನಿವಾಸಿ ಶೈಲಜಾ ರವೀಂದ್ರ ಲಟ್ಟೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.