ADVERTISEMENT

ದಂಡದ ಮೊತ್ತ ಕಡಿಮೆಯಾದರೂ ಹೆಚ್ಚು ಹಣ ವಸೂಲಿ!

ಹೆಲ್ಮೆಟ್‌ ಹಾಕದ್ದಕ್ಕೆ ₹ 500 ಬದಲು ₹ 1 ಸಾವಿರ ದಂಡ ವಿಧಿಸಿದ ಸಂಚಾರ ಪೊಲೀಸರು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 19:45 IST
Last Updated 25 ಸೆಪ್ಟೆಂಬರ್ 2019, 19:45 IST
ದಂಡದ ಮೊತ್ತ ಇಳಿಕೆಯಾದ ಎರಡು ದಿನಗಳ ಬಳಿಕವೂ ಕಲಬುರ್ಗಿ ಸಂಚಾರ ಪೊಲೀಸರು ಹೆಲ್ಮೆಟ್‌ ಹಾಕದ್ದಕ್ಕೆ ಬೈಕ್‌ ಸವಾರರಿಂದ ₹ 1 ಸಾವಿರ ದಂಡ ವಸೂಲಿ ಮಾಡಿರುವ ಚಲನ್
ದಂಡದ ಮೊತ್ತ ಇಳಿಕೆಯಾದ ಎರಡು ದಿನಗಳ ಬಳಿಕವೂ ಕಲಬುರ್ಗಿ ಸಂಚಾರ ಪೊಲೀಸರು ಹೆಲ್ಮೆಟ್‌ ಹಾಕದ್ದಕ್ಕೆ ಬೈಕ್‌ ಸವಾರರಿಂದ ₹ 1 ಸಾವಿರ ದಂಡ ವಸೂಲಿ ಮಾಡಿರುವ ಚಲನ್   

ಕಲಬುರ್ಗಿ: ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ದಂಡದ ಮೊತ್ತ ಹೆಚ್ಚಾಗಿದೆ ಎಂಬ ವಾಹನ ಸವಾರರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಮೋಟಾರು ವಾಹನ ಕಾಯ್ದೆಯನ್ನು ಪರಿಷ್ಕರಿಸಿ ಇಳಿಕೆ ಮಾಡಿದೆ. ಆದರೆ, ಕಲಬುರ್ಗಿಯ ಸಂಚಾರ ಪೊಲೀಸರು ಮಾತ್ರ ಪರಿಷ್ಕರಣೆ ಮಾಡಿದ ಬಳಿಕವೂ ಹೆಚ್ಚಿನ ಮೊತ್ತವನ್ನು ವಸೂಲಿ ಮಾಡಿದ ಸಂಗತಿ ಬೆಳಕಿಗೆ ಬಂದಿದೆ.

ರಾಜ್ಯ ಸರ್ಕಾರ ಸೆ 21ರಂದು ಶನಿವಾರ ದಂಡದ ಮೊತ್ತವನ್ನು ಇಳಿಕೆ ಮಾಡಿ ಆದೇಶ ಹೊರಡಿಸಿತ್ತು. ಅದರಂತೆ ಹೆಲ್ಮೆಟ್‌ ಹಾಕದ್ದಕ್ಕೆ ₹ 500 ದಂಡ ವಿಧಿಸಬಹುದು. ಆದರೆ, ಸಂಚಾರ ಪೊಲೀಸರು ಮೊತ್ತದ ಪ್ರಮಾಣ ಇಳಿಕೆಯಾದ ಎರಡು ದಿನಗಳ ಬಳಿಕ ಅಂದರೆ ಸೆ 23ರಂದು ರಾತ್ರಿ ಬಸವರಾಜ ಧರ್ಮಣ್ಣ ಎಂಬುವವರಿಗೆ ಹೆಲ್ಮೆಟ್‌ ಹಾಕದಿರುವ ಕಾರಣ ನೀಡಿ ₹ 1 ಸಾವಿರ ದಂಡ ವಿಧಿಸಿ ಚಲನ್‌ ಕಟ್ಟಿಸಿಕೊಂಡಿದ್ದಾರೆ! ಪೊಲೀಸರ ಈ ಕ್ರಮ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

‘ಅಂದು ರಾತ್ರಿ 10 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಅಡ್ಡಗಟ್ಟಿ ಬೈಕ್‌ ಹಿಡಿದರು. ಹೆಲ್ಮೆಟ್‌ ಇಲ್ಲದ್ದಕ್ಕೆ ₹ 1 ಸಾವಿರ ದಂಡ ಕೊಡಬೇಕು ಎಂದು ಚಲನ್‌ ಹರಿದರು. ಅಷ್ಟೊಂದು ಹಣ ನನ್ನ ಬಳಿ ಇರಲಿಲ್ಲ. ನಾಲ್ಕೈದು ಎಟಿಎಂಗಳಿಗೆ ಎಡತಾಕಿದ ಮೇಲೆ ಹಣ ಸಿಕ್ಕಿತು. ಕಡಿಮೆ ಇದ್ದ ದಂಡದ ಪ್ರಮಾಣ ಜಾಸ್ತಿಯಾದ ಕೂಡಲೇ ತಕ್ಷಣ ನಿಯಮ ಅನ್ವಯ ಮಾಡುವ ಪೊಲೀಸರು ಕಡಿಮೆಯಾದ ದಂಡದ ಮೊತ್ತವನ್ನು ಪಡೆಯಲು ನಿರಾಸಕ್ತಿ ತೋರಿಸುತ್ತಾರೆ. ಇದು ಲೂಟಿಯಲ್ಲದೇ ಇನ್ನೇನು’ ಎಂದು ಬಸವರಾಜ ಪ್ರಶ್ನಿಸಿದರು.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಸಂಚಾರ ವಿಭಾಗದ ಎಸಿಪಿ ವೀರೇಶ್‌, ‘ಸೆ 21ರಂದು ದಂಡದ ಮೊತ್ತ ಪರಿಷ್ಕರಣೆಯಾಗಿದ್ದು ನಿಜ. ಆದರೆ, ಅದು ಯಂತ್ರಗಳಲ್ಲಿ ತಕ್ಷಣಕ್ಕೆ ಅಪ್‌ಡೇಟ್‌ ಆಗಲಿಲ್ಲ. ಹೀಗಾಗಿ, ಹಿಂದಿನ ದರವೇ ಬಂದಿತ್ತು. ಅಧಿಸೂಚನೆ ನಮಗೆ ತಲುಪುವುದೂ ವಿಳಂಬವಾಗಿದ್ದರಿಂದ ಹೀಗಾಗಿದೆ. ಈಗಲೂ ಕೆಲ ಯಂತ್ರಗಳು ಅಪ್‌ಡೇಟ್ ಆಗಿಲ್ಲ. ಅದಕ್ಕೆ ಪರ್ಯಾಯವಾಗಿ ದಂಡದ ಹಣಕ್ಕೆ ಮೊದಲಿನ ಪದ್ಧತಿಯಂತೆ ಎಲೆಕ್ಟ್ರಾನಿಕ್‌ ಚಲನ್‌ ಬದಲು ಕಾಗದದ ರಸೀದಿ ನೀಡುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.