ADVERTISEMENT

ನೆರೆ ಹಾವಳಿ ಭೀತಿಯಲ್ಲಿ ಗ್ರಾಮಸ್ಥರು | ಉಜನಿಯಿಂದ ಇನ್ನಷ್ಟು ನೀರು

ಸೊನ್ನ ಭೀಮಾ ಬ್ಯಾರೇಜಿನಿಂದ 1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

ಮನೋಜ ಕುಮಾರ್ ಗುದ್ದಿ
Published 13 ಸೆಪ್ಟೆಂಬರ್ 2022, 20:15 IST
Last Updated 13 ಸೆಪ್ಟೆಂಬರ್ 2022, 20:15 IST
ಅಫಜಲಪುರ ತಾಲ್ಲೂಕಿನ ಬಿಲ್ವಾಡ (ಕೆ) ಗ್ರಾಮದ ಸಮೀಪದ ಹೊಲದಲ್ಲಿ ಮಳೆ ನೀರು ನಿಂತು ಸೂರ್ಯಕಾಂತಿ ಬೆಳೆ ಹಾಳಾಗಿರುವುದು     –ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್
ಅಫಜಲಪುರ ತಾಲ್ಲೂಕಿನ ಬಿಲ್ವಾಡ (ಕೆ) ಗ್ರಾಮದ ಸಮೀಪದ ಹೊಲದಲ್ಲಿ ಮಳೆ ನೀರು ನಿಂತು ಸೂರ್ಯಕಾಂತಿ ಬೆಳೆ ಹಾಳಾಗಿರುವುದು     –ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್   

ಕಲಬುರಗಿ: 2020ರಲ್ಲಿ ಜಿಲ್ಲೆಯ ಭೀಮಾ ನದಿಯಲ್ಲಿ ಪ್ರವಾಹ ಕಾಣಿಸಿಕೊಂಡ ರೀತಿಯಲ್ಲೇ ಮತ್ತೆ ಈಗಲೂ ಪ್ರವಾಹ ಕಾಣಿಸಿಕೊಳ್ಳುವ ಮುನ್ಸೂಚನೆಗಳಿವೆ. ಭೀಮಾ, ಅಮರ್ಜಾ ಮತ್ತು ಅದರ ಉಪನದಿಗಳು, ಹಳ್ಳಗಳು ಉಕ್ಕಿ ಹರಿಯುತ್ತಿವೆ.

‘ಪ್ರಜಾವಾಣಿ’ ತಂಡ ಕಲಬುರಗಿ ಮತ್ತು ಅಫಜಲಪುರ ತಾಲ್ಲೂಕಿನ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನದಿ ದಡದ ಗ್ರಾಮಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿರುವುದು ಕಾಣಸಿಕ್ಕಿತು.

ಭೀಮಾ ಜೊತೆಗೆ, ಬೋರಿಹಳ್ಳ, ಮರ್ಜಿ ಹಳ್ಳಗಳು ಭಾನುವಾರ ಸುರಿದ ಮಳೆ ಹಾಗೂ ಸೊನ್ನ ಭೀಮಾ ಬ್ಯಾರೇಜಿನಿಂದ ಬಿಡುಗಡೆಯಾದ ನೀರಿನಿಂದ ತಮ್ಮ ಅಚ್ಚುಕಟ್ಟು ಪ್ರದೇಶಗಳನ್ನು ಆವರಿಸಿದವು. ಹೀಗಾಗಿ, ರೈತರು ಬೆಳೆದ ಕಬ್ಬು, ಸೂರ್ಯಕಾಂತಿ, ತೊಗರಿ ಬೆಳೆಗಳೂ ಜಲಾವೃತವಾದವು.

ADVERTISEMENT

ಹಡಗಿಲ್ ಹಾರುತಿ, ಬಿದನೂರ, ಕಣ್ಣಿ, ಹಾವನೂರ, ಚೌಡಾಪುರ, ಗೊಬ್ಬೂರ (ಬಿ), ಬಾದನಳ್ಳಿ, ಆತನೂರ, ಆನೂರ, ಕೇಶಾಪುರ, ಶಿವಪುರ, ಬಿಲ್ವಾಡ, ಕರಜಗಿ, ಗೌರ (ಬಿ), ಬಂಕಲಗಿ ಮತ್ತು ದಿಕ್ಸಂಗಿ ಗ್ರಾಮಗಳಲ್ಲಿ ನೀರಿನಿಂದ ಭಾರಿ ಪ್ರಮಾಣದಲ್ಲಿ ಬೆಳೆ ಹಾಳಾಗಿವೆ.

ಬ್ಯಾರೇಜಿನ ಪಕ್ಕದಲ್ಲೇ ಇರುವ ಸೊನ್ನ, ಗಾಣಗಾಪುರ ಸಮೀಪದ ತೆಲ್ಲೂರ, ಬಿಲ್ವಾಡ ಗ್ರಾಮಗಳಲ್ಲಿ ನೀರು ನಿಂತಿದ್ದು, ಜನರು ಅದೇ ರಸ್ತೆಯಲ್ಲಿ ಸಂಚರಿಸಬೇಕಿದೆ. ಹಲವು ಶಾಲೆಗಳ ಆವರಣದಲ್ಲಿ ನೀರು ನಿಂತಿದೆ. ಭೀಮಾ ನದಿ ತೀರ, ಬೋರಿಹಳ್ಳ ಹಾಗೂ ಮರ್ಜಿ ಹಳ್ಳದ ಪಕ್ಕದ ಹೊಲಗಳನ್ನು ಹಳ್ಳಗಳೇ ಆಪೋಶನ ತೆಗೆದುಕೊಂಡಿವೆ. ಬಿಲ್ವಾಡ (ಕೆ) ಗ್ರಾಮದ ಬಳಿ ಸೂರ್ಯಕಾಂತಿ ಬೆಳೆ ಸಂಪೂರ್ಣ ನೆಲ ಕಚ್ಚಿತ್ತು.

ಸೇತುವೆ ಬಳಿ ಭಕ್ತರ ಸೆಲ್ಫಿ: ದೇವಲ ಗಾಣಗಾಪುರ ಬಳಿ ಇರುವ ಸೇತುವೆಯ ಮಟ್ಟದಲ್ಲಿ ಭೀಮಾ ನದಿಯು ಉಕ್ಕಿ ಹರಿಯುತ್ತಿದ್ದು, ಸೋಮವಾರ ಬೆಳಿಗ್ಗೆ ಪ್ರವಾಹ ಇಳಿದಿದ್ದರಿಂದ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ದತ್ತ ಮಂದಿರಕ್ಕೆ ಬಂದಿದ್ದ ಕರ್ನಾಟಕ, ಮಹಾ ರಾಷ್ಟ್ರ, ತೆಲಂಗಾಣದ ಭಕ್ತರು ಸೇತುವೆ ಬಳಿ ಬಂದು ಸೆಲ್ಫಿ ತೆಗೆಸಿಕೊಂಡರು.

ಸಂಗಮದಲ್ಲಿ ಪೂಜಾ ಕೈಂಕರ್ಯ: ದೇವಲ ಗಾಣಗಾಪುರ ಬಳಿ ಇರುವ ಸಂಗಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇರಲಿಲ್ಲ ಆದರೂ ಕೆಲವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಸಂಗಮದಲ್ಲಿ ಸ್ನಾನ ಮಾಡಿದ ಬಳಿಕ ಕುಟುಂಬ ಸದಸ್ಯರೊಂದಿಗೆ ಪೂಜೆಯಲ್ಲಿ ಪಾಲ್ಗೊಂಡರು.

ಎಸ್‌ಡಿಆರ್‌ಎಫ್‌, ಅಗ್ನಿಶಾಮಕ ದಳ ಸನ್ನದ್ಧ:ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಬಂಡವಾಳ ಹೂಡಿಕೆ ಸಮಾವೇಶದ ಪ್ರಯುಕ್ತ ಅಮೆರಿಕದಲ್ಲಿದ್ದು, ಭಾನುವಾರ ಸಂಜೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರೊಂದಿಗೆ ಮಾತನಾಡಿ ಪ್ರವಾಹ ಉಂಟಾದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಈ ಸೂಚನೆ ಆಧರಿಸಿ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌) ಹಾಗೂ ಅಗ್ನಿಶಾಮಕ ದಳವನ್ನು ಸನ್ನದ್ಧ ಸ್ಥಿತಿಯಲ್ಲಿರುವಂತೆ ತಿಳಿಸಲಾಗಿದೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನೆರೆ ಉಂಟಾಗಿದ್ದರಿಂದ ಅಲ್ಲಿಗೆ ತೆರಳಿದ್ದ ಸಿಬ್ಬಂದಿ ಜಿಲ್ಲೆಗೆ ವಾಪಸಾಗಿದ್ದಾರೆ.

ಮಳೆಯಿಂದ ರಸ್ತೆಗಳಿಗೂ ಹಾನಿ

ಸತತ ಮಳೆ ಮತ್ತು ಪ್ರವಾಹದಿಂದ ಜಿಲ್ಲೆಯಾದ್ಯಂತ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಸಾಕಷ್ಟು ತಗ್ಗುಗಳು ಉಂಟಾಗಿವೆ. ಇದರಿಂದ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಸೊನ್ನ ಭೀಮಾ ಬ್ಯಾರೇಜ್ ಬಳಿ ನಿರ್ಮಿಸಿರುವ ದೇವಣಗಾಂವ ಬಳಿಯ ಸೇತುವೆಯಲ್ಲಿ ಹತ್ತಾರು ತಗ್ಗುಗಳು ಉಂಟಾಗಿದೆ. ನಿತ್ಯ ವಿಜಯಪುರ ಜಿಲ್ಲೆಯಿಂದ ಕಲಬುರಗಿಗೆ, ಕಲಬುರಗಿಯಿಂದ ವಿಜಯಪುರ ಜಿಲ್ಲೆಗೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗಿದೆ.

ಕಲಬುರಗಿ–ಅಫಜಲಪುರ ಮಧ್ಯೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯೂ ಹಾಳಾಗಿದೆ. ಬೈಕ್‌ ಸವಾರರಂತೂ ಜಾರಿ ಬೀಳುವ ಸ್ಥಿತಿಯಿದೆ.

ಎಸ್‌ಡಿಆರ್‌ಎಫ್‌,ಅಗ್ನಿಶಾಮಕ ದಳ ಸನ್ನದ್ಧ

ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಬಂಡವಾಳ ಹೂಡಿಕೆ ಸಮಾವೇಶದ ಪ್ರಯುಕ್ತ ಅಮೆರಿಕದಲ್ಲಿದ್ದು, ಭಾನುವಾರ ಸಂಜೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರೊಂದಿಗೆ ಮಾತನಾಡಿ ಪ್ರವಾಹ ಉಂಟಾದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಈ ಸೂಚನೆ ಆಧರಿಸಿ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌) ಹಾಗೂ ಅಗ್ನಿಶಾಮಕ ದಳವನ್ನು ಸನ್ನದ್ಧ ಸ್ಥಿತಿಯಲ್ಲಿರುವಂತೆ ತಿಳಿಸಲಾಗಿದೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನೆರೆ ಉಂಟಾಗಿದ್ದರಿಂದ ಅಲ್ಲಿಗೆ ತೆರಳಿದ್ದ ಸಿಬ್ಬಂದಿ ಜಿಲ್ಲೆಗೆ ವಾಪಸಾಗಿದ್ದಾರೆ.

₹ 40 ಸಾವಿರ ಖರ್ಚು ಮಾಡಿ ಕಬ್ಬು, ಸೂರ್ಯಕಾಂತಿ ಬಿತ್ತನೆ ಮಾಡಿದ್ದೆ. ಆದರೆ, ಮುಂಜಾನೆ ಆಗುವುದರೊಳಗೆ ಹೊಲದಲ್ಲಿ ನೀರು ನಿಂತುಕೊಂಡಿದೆ. ಬೆಳೆ ಹಾನಿ ಪರಿಶೀಲನೆಗೆ ಯಾವ ಅಧಿಕಾರಿಯೂ ಬಂದಿಲ್ಲ

ಚಂದಪ್ಪ ಪ್ರಭುಗೋಳ

ರೈತ, ಬಿಲ್ವಾಡ (ಕೆ), ಅಫಜಲಪುರ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.