ADVERTISEMENT

‘ಗ್ರಾಮ ತೊರೆಯಬೇಡಿ, ನಿಮ್ಮ ಜತೆಗೆ ನಾವಿದ್ದೇವೆ’

ಭೂಕಂಪ ಸಂತ್ರಸ್ತರಿಗೆ ಸಂಸದ ಡಾ. ಉಮೇಶ ಜಾಧವ ಅಭಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2021, 3:02 IST
Last Updated 14 ಅಕ್ಟೋಬರ್ 2021, 3:02 IST
ಚಿಂಚೋಳಿ ತಾಲ್ಲೂಕಿನ ಭೂಕಂಪ ಪೀಡಿತ ಗ್ರಾಮಗಳಿಗೆ ಕಲಬುರಗಿ ಸಂಸದ ಡಾ. ಉಮೇಶ ಜಾಧವ ಮಂಗಳವಾರ ತಡ ರಾತ್ರಿ ಭೇಟಿ ನೀಡಿ ಜನರಿಗೆ ಧೈರ್ಯ ಹೇಳಿದರು
ಚಿಂಚೋಳಿ ತಾಲ್ಲೂಕಿನ ಭೂಕಂಪ ಪೀಡಿತ ಗ್ರಾಮಗಳಿಗೆ ಕಲಬುರಗಿ ಸಂಸದ ಡಾ. ಉಮೇಶ ಜಾಧವ ಮಂಗಳವಾರ ತಡ ರಾತ್ರಿ ಭೇಟಿ ನೀಡಿ ಜನರಿಗೆ ಧೈರ್ಯ ಹೇಳಿದರು   

ಚಿಂಚೋಳಿ: ತಾಲ್ಲೂಕಿನ ಭೂಕಂಪ ಪೀಡಿತ ಗ್ರಾಮಗಳಿಗೆ ಸಂಸದ ಡಾ. ಉಮೇಶ ಜಾಧವ ಮಂಗಳವಾರ ತಡರಾತ್ರಿ ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿದರು.

ನೀವು ಯಾವುದೇ ಕಾರಣಕ್ಕೂ ಆತಂಕಗೊಳ್ಳಬೇಕಾಗಿಲ್ಲ. ನಿಮ್ಮ ಜತೆಗೆ ನಾವು ಮತ್ತು ನಮ್ಮ ಸರ್ಕಾರವಿದೆ. ಯಾವುದೇ ಕಾರಣಕ್ಕೂ ನೀವು ಗ್ರಾಮ ತೊರೆಯಬೇಡಿ ಎಂದು ಮನವಿ ಮಾಡಿದರು.

ಮಹಾರಾಷ್ಟ್ರದ ನಾಂದೇಡ್‌ನಲ್ಲಿ ತಮ್ಮ ಅಳಿಯನ ಸಾವು ಸಂಭವಿಸಿದ್ದರೂ ಅಲ್ಲಿಗೆ ಕುಟುಂಬದ ಎಲ್ಲಾ ಸದಸ್ಯರನ್ನು ಕಳುಹಿಸಿದ ಉಮೇಶ ಜಾಧವ ಅವರು ದುಃಖದ ನಡುವೆಯೂ ಕ್ಷೇತ್ರದ ಜನರ ಕಷ್ಟ ಸುಖಗಳಿಗೆ ಸ್ಪಂದಿಸಲು ಮಧ್ಯರಾತ್ರಿ 12ರಿಂದ ಬೆಳಿಗ್ಗೆ 4ರವರೆಗೆ ಭೂಕಂಪನ ಸಂಭವಿಸಿದ ಹಳ್ಳಿಗಳಲ್ಲಿ ಸಂಚರಿಸಿದರು.

ADVERTISEMENT

ಚಿಮ್ಮಾ ಈದಲಾಯಿ, ದಸ್ತಾಪುರ, ಕೊರವಿ, ಹೊಸಳ್ಳಿ (ಎಚ್), ತೇಗಲತಿಪ್ಪಿ, ಗಡಿಕೇಶ್ವಾರ ಗ್ರಾಮಗಳಲ್ಲಿ ಜನರ ಅಹವಾಲು ಆಲಿಸಿದ ಅವರು, ಧೈರ್ಯವಾಗಿರಿ. ಯಾವುದೇ ಕಾರಣಕ್ಕೂ ಊರು ಬಿಟ್ಟು ಹೋಗಬೇಡಿ. ಕೋವಿಡ್ ಸಂದರ್ಭದಲ್ಲಿ ಬೇರೆ ಊರಿನಲ್ಲಿರುವವರೇ ಸ್ವಗ್ರಾಮಕ್ಕೆ ಮರಳಿದ್ದು ನೀವು ನೋಡಿದ್ದೀರಿ. ಹೀಗಾಗಿ ಗ್ರಾಮ ಬಿಟ್ಟು ಹೋಗಬೇಡಿ. ಆದರೆ ಎಚ್ಚರಿಕೆಯಿಂದ ಇದ್ದರೆ ಸಾಕು’ ಎಂದು ಅಭಯ ನೀಡಿದರು.

ವಿಜ್ಞಾನಿಗಳು ಬಂದು ಅಧ್ಯಯನ ನಡೆಸುತ್ತಿದ್ದಾರೆ, ಕಲಬುರಗಿಯಲ್ಲಿ ಭೂಕಂಪನದ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ. ನಿಮಗೆ ಶೆಡ್ ನಿರ್ಮಿಸಿಕೊಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.

ತಹಶೀಲ್ದಾರ್‌ ಅಂಜುಮ್ ತಬಸ್ಸುಮ್, ಡಿವೈಎಸ್ಪಿ ಬಸವೇಶ್ವರ ಹೀರಾ, ಸಿಪಿಐ ಮಹಾಂತೇಶ ಪಾಟೀಲ, ಜಗದೀಶ, ಎ.ಎಸ್‌. ಪಟೇಲ್, ಇಒ ಅನಿಲಕುಮಾರ ರಾಠೋಡ, ಟಿಎಚ್‌ಒ ಡಾ. ಮಹಮದ್ ಗಫಾರ, ಡಾ. ಅಜೀತ ಪಾಟೀಲ, ಡಾ. ಸಂಜಯ ಜಾಪಟ್ಟಿ ಹಾಗೂ ಮುಖಂಡರಾದ ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ, ಅಶೋಕ ಚವ್ಹಾಣ, ಲಕ್ಷ್ಮಣ ಆವಂಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.