ADVERTISEMENT

ಹಿಂದುಳಿದವರನ್ನು ಎತ್ತಿಕಟ್ಟುವ ಹುನ್ನಾರ: ಪ್ರಿಯಾಂಕ್‌ಗೆ ಉಮೇಶ ಜಾಧವ ತಿರುಗೇಟು

ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಸಂಸದ ಡಾ. ಉಮೇಶ ಜಾಧವ ತಿರುಗೇಟು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 14:16 IST
Last Updated 12 ಡಿಸೆಂಬರ್ 2021, 14:16 IST
ಉಮೇಶ ಜಾಧವ
ಉಮೇಶ ಜಾಧವ   

ಕಲಬುರಗಿ: ‘ಬಂಜಾರ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್ಟಿ) ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಲು ಸಮುದಾಯದ ಕುಲಗುರುಗಳಾಗಿದ್ದ ದಿ. ರಾಮರಾವ ಮಹಾರಾಜರನ್ನು ಪ್ರಧಾನಿಯವರ ಬಳಿ ಕರೆದೊಯ್ದಿದ್ದೆ ಎಂದು ತಪ್ಪು ಮಾಹಿತಿ ನೀಡುವ ಮೂಲಕ ಶಾಸಕ ಪ್ರಿಯಾಂಕ್ ಖರ್ಗೆ ನನ್ನ ವಿರುದ್ಧ ಹಿಂದುಳಿದ ಸಮುದಾಯಗಳನ್ನು ಎತ್ತಿಕಟ್ಟುವ ಹುನ್ನಾರ ನಡೆಸಿದ್ದಾರೆ’ ಎಂದು ಸಂಸದ ಡಾ.ಉಮೇಶ ಜಾಧವ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಿಯಾಂಕ್ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು 9 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿದ್ದಾರೆ. ಅಷ್ಟಾಗಿಯೂ ಒಂದು ಬಾರಿ ಸೋಲು ಕಂಡಿದ್ದಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ನಾನು ಆಯ್ಕೆಯಾದ ದಿನದಿಂದಲೇ ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಎಸ್ಸಿ ಪಟ್ಟಿಯಲ್ಲಿರುವ ಬಂಜಾರ ಸಮುದಾಯವು ಎಸ್ಟಿ ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆ ಇಲ್ಲ. ಎಸ್ಟಿಯಲ್ಲಿರುವ ಅರಣ್ಯ ಹಕ್ಕು ಕಾಯ್ದೆಗೆ ಕೆಲ ಕಾಲ ರಿಯಾಯಿತಿ ನೀಡಬೇಕು ಎಂಬ ಬೇಡಿಕೆಯನ್ನು ಮಾತ್ರ ಮಂಡಿಸಲಾಗಿದೆ. ಇದು ಎಸ್ಟಿಗೆ ಸೇರಿಸಿ ಎಂಬಂತಾಗುತ್ತದೆಯೇ’ ಎಂದು ಪ್ರಶ್ನಿಸಿದರು.

‘ನನ್ನ ವಿರುದ್ಧ ಕೋಲಿ ಸಮಾಜ, ಲಿಂಗಾಯತ ಸಮುದಾಯ ಸೇರಿದಂತೆ ಇತರೆ ಸಮುದಾಯಗಳನ್ನು ಎತ್ತಿ ಕಟ್ಟಲಾಗುತ್ತದೆ. ತಮ್ಮ ತಂದೆಯ ಸೋಲನ್ನು ಅರಗಿಸಿಕೊಳ್ಳಲು ಪ್ರಿಯಾಂಕ್ ಅವರಿಗೆ ಆಗುತ್ತಿಲ್ಲ’ ಎಂದರು.

ADVERTISEMENT

‘ರಾಮರಾವ ಮಹಾರಾಜರನ್ನು ಪ್ರಧಾನಿ ಅವರ ಬಳಿ ಕರೆದೊಯ್ದಿದ್ದು ನಿಜ. ಆದರೆ, ಇತ್ತೀಚೆಗೆ ಪ್ರಿಯಾಂಕ್ ಅವರು ಬಿಡುಗಡೆ ಮಾಡಿದ ಪತ್ರವನ್ನು ನೀಡಿಲ್ಲ. ಬದಲಾಗಿ, ಬೇರೆ ಬೇಡಿಕೆಗಳುಳ್ಳ ಪತ್ರವನ್ನು ನೀಡಿದ್ದೇವೆ. ಈ ವಿಚಾರದಲ್ಲಿ ರಾಮರಾವ ಮಹಾರಾಜರ ಹೆಸರನ್ನು ಪ್ರಸ್ತಾಪಿಸುತ್ತಿರುವುದು ಸರಿಯಲ್ಲ. ಯಾರೋ ಸೃಷ್ಟಿ ಮಾಡಿದ ಪತ್ರವನ್ನು ಬಂಜಾರ ಕುಲಗುರುಗಳ ಮೂಲಕ ಪ್ರಧಾನಿಯವರಿಗೆ ಸಲ್ಲಿಸಿದ್ದೇನೆ ಎಂದು ತಪ್ಪು ಮಾಹಿತಿ ನೀಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಅವರಿಗೆ ಸಲ್ಲಿಸಿದ ಪತ್ರದ ಫೋಟೊಗಳನ್ನು ಪ್ರದರ್ಶಿಸಿದರು.

‘ಟೆಕ್ಸ್‌ಟೈಲ್ ಪಾರ್ಕ್, ದೂರದರ್ಶನ ಕೇಂದ್ರ, ರೈಲ್ವೆ ವಿಭಾಗವು ರದ್ದಾಗುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಿದ್ದೇನೆ. ದೂರದರ್ಶನ ಕೇಂದ್ರವನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಪ್ರಸಾರ ಭಾರತಿಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ದೇಶದಾದ್ಯಂತ ಆರಂಭವಾಗಲಿರುವ ಟೆಕ್ಸ್‌ಟೈಲ್ ಪಾರ್ಕ್‌ ಪೈಕಿ ರಾಜ್ಯದ ಮೂರು ಕಡೆ ಆರಂಭಿಸುವ ಪ್ರಸ್ತಾವದಲ್ಲಿ ಕಲಬುರಗಿಯೂ ಇದೆ. ಈ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆಯನ್ನೂ ಕೇಳಿದ್ದೇನೆ. ಈ ಕುರಿತು ಇನ್ನೂ ಎಷ್ಟು ಬಾರಿ ಸಮಜಾಯಿಷಿ ನೀಡಲಿ’ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಶಹರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಇದ್ದರು.

‘ಯೋಜನೆ ಕೈತಪ್ಪಿದರೆ ಪ್ರಿಯಾಂಕ್‌ಗೆ ಖುಷಿ’

ಜಿಲ್ಲೆಗೆ ಮಂಜೂರಾಗಬೇಕಿದ್ದ ಯೋಜನೆಗಳು ಕೈತಪ್ಪಿ ಹೋದರೆ ಪ್ರಿಯಾಂಕ್‌ ಖರ್ಗೆ ಅವರು ಟ್ವೀಟ್‌ ಮಾಡಲು ಹೆಚ್ಚು ಖುಷಿಯಾಗುತ್ತದೆ. ಏಕೆಂದರೆ ಆ ವಿಚಾರ ಇಟ್ಟುಕೊಂಡು ನನ್ನನ್ನು ಟೀಕೆ ಮಾಡಬಹುದಲ್ಲ ಎಂದು ಡಾ. ಉಮೇಶ ಜಾಧವ ವ್ಯಂಗ್ಯವಾಡಿದರು.

‘ರಾಜ್ಯದ ಎಲ್ಲ ಸಂಸದರಿಗೂ ಕೇಂದ್ರದ ಯೋಜನೆಗಳು ತಮ್ಮ ಕ್ಷೇತ್ರಕ್ಕೆ ಬರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಹಾಗಾಗಿ, ಅವರೂ ಪ್ರಯತ್ನ ಪಡುತ್ತಿರುತ್ತಾರೆ. ಅದೇ ರೀತಿ ಟೆಕ್ಸ್‌ಟೈಲ್ ಪಾರ್ಕ್ ಮೈಸೂರಿಗೆ ಕೊಂಡೊಯ್ಯಲು ಅಲ್ಲಿನ ಸಂಸದ ಪ್ರತಾಪ ಸಿಂಹ ಪ್ರಯತ್ನಿಸಿದ್ದಾರೆ. ಅದರ ಬದಲು ಅಭಿವೃದ್ಧಿ ವಿಚಾರದಲ್ಲಿ ನನ್ನೊಂದಿಗೆ ಕೈಜೋಡಿಸಬಹುದಿತ್ತು. ಆದರೆ, ಅವರಿಗೆ ಟೀಕಿಸುವುದು, ವ್ಯಂಗ್ಯ ಮಾಡುವುದರಲ್ಲೇ ಹೆಚ್ಚು ಆಸಕ್ತಿ ಇದ್ದಂತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.