ADVERTISEMENT

ಕಲಬುರಗಿ: ಧರ್ಮದ ಗಡಿ ಮೀರಿ ಮೊಹರಂ ಆಚರಣೆ

ಹಸನ್‌–ಹುಸೇನ್‌ರ ನೆನಪಿಗಾಗಿ ದೇಹ ದಂಡಿಸಿ, ರಕ್ತ ತರ್ಪಣ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 5:15 IST
Last Updated 7 ಜುಲೈ 2025, 5:15 IST
ಕಲಬುರಗಿಯಲ್ಲಿ ಭಾನುವಾರ ಮೊಹರಂ ಕೊನೆಯ ದಿನದಂದು ಬ್ರಹ್ಮಪುರ ಶಾ ಹುಸೇನ್‌ ಬಡಾವಣೆಯಲ್ಲಿ ಪಂಜಾಗಳ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಭಕ್ತರು   ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಕಲಬುರಗಿಯಲ್ಲಿ ಭಾನುವಾರ ಮೊಹರಂ ಕೊನೆಯ ದಿನದಂದು ಬ್ರಹ್ಮಪುರ ಶಾ ಹುಸೇನ್‌ ಬಡಾವಣೆಯಲ್ಲಿ ಪಂಜಾಗಳ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಭಕ್ತರು   ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌   

ಕಲಬುರಗಿ: ತ್ಯಾಗ, ಬಲಿದಾನ, ಭಾವೈಕ್ಯತೆ, ಸಾಮರಸ್ಯದ ಪ್ರತೀಕವಾಗಿರುವ ಮೊಹರಂ ಹಬ್ಬವನ್ನು ಭಾನುವಾರ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಹಿಂದೂ–ಮುಸ್ಲಿಂ ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಪ್ರವಾದಿ ಮೊಹಮದ್‌ ಅವರ ಮೊಮ್ಮಕ್ಕಳಾದ ಹಸನ್‌ ಹಾಗೂ ಹುಸೇನ್‌ ಅವರ ಬಲಿದಾನದ ಪ್ರತೀಕವಾಗಿ ಮೊಹರಂ ಆಚರಿಸಲಾಗುತ್ತದೆ. ಬೆಳಿಗ್ಗೆಯಿಂದಲೇ ದರ್ಗಾಗಳಲ್ಲಿ ಅಲಾಯಿ, ಪಂಜಾ, ಡೋಲಿಗಳನ್ನು ಎಬ್ಬಿಸಿ ಮೆರವಣಿಗೆ ಮಾಡುವ ಆಚರಣೆಗಳು ಜರುಗಿದವು.

ನಗರದ ಹಳೇ ಜೇವರ್ಗಿ ರಸ್ತೆಯಲ್ಲಿರುವ ಹಳೇ ದರ್ಗಾ, ಸ್ಟೇಷನ್ ರಸ್ತೆ, ರೋಜಾ ಬಡಾವಣೆಯ ಹುಸೇನಿ ಆಲಂ ಪ್ರದೇಶ, ಪಾಶ್ಚಾಪುರ ಬಡಾವಣೆಯ ಹಳೇ ದರ್ಗಾ, ಅಂಜುಮನ್ ಏರಿಯಾ, ಎಂಎಸ್‌ಕೆ ಮಿಲ್, ಸ್ಟೇಷನ್‌ ರಸ್ತೆ, ಬ್ರಹ್ಮಪುರ ಸೇರಿದಂತೆ ಹಲವು ಪ್ರದೇಶಗಳ ದರ್ಗಾಗಳಿಂದ ಅಲಾಯಿಗಳ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯ ಉದ್ದಕ್ಕೂ ‘ಹಸನ್‌ ಹುಸೇನ್‌ ಕಿ ದೋಸ್ತಾರಾಹೋದ್ದಿನ್‌...’ ಎಂಬ ಘೋಷಣೆ ಮೊಳಗಿದವು.

ADVERTISEMENT

ವಿಶೇಷ ಹೂವಿನ ಅಲಂಕಾರ ಮಾಡಿದ ಪಂಜಾಗಳನ್ನು ಹೊತ್ತ ಯುವಕರು, ಹಿರಿಯರು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು. ಪಂಜಾಗಳ ಮುಂದೆ ಹಲಗೆ ವಾದನಕ್ಕೆ ಎಲ್ಲಾ ಸಮುದಾಯದವರು ಒಗ್ಗೂಡಿ ಕುಣಿದು ಕುಪ್ಪಳಿಸಿದರು.

ಐತಿಹಾಸಿಕ ಖಾಜಾ ಬಂದಾ ನವಾಜ್‌ ದರ್ಗಾದಲ್ಲಿಯೂ ಕುಟುಂಬದವರ ಹಾಗೂ ಧರ್ಮಗುರುಗಳ ನೇತೃತ್ವದಲ್ಲಿ ಮೊಹರಂ ಸಂಪ್ರದಾಯಗಳು ಜರುಗಿದವು. ನಗರದ ಎಲ್ಲ ಆಶ್ರಖಾನಿಗಳಿಂದ ಹೊತ್ತು ತರುವ ಅಲಾಯಿ ದೇವರುಗಳ ಮೆರವಣಿಗೆ ಸಮಾಪನಗೊಂಡವು. 10 ದಿನಗಳ ಮೊಹರಂ ಹಬ್ಬವನ್ನು ಧರ್ಮದ ಗಡಿಗಳನ್ನು ಮೀರಿ ಹಿಂದೂ– ಮುಸ್ಲಿಮರು ಒಟ್ಟಾಗಿ ಆಚರಿಸಿದರು.

ಶಿಯಾಗಳಿಂದ ದೇಹ ದಂಡನೆ: ಅಲಾಯಿ ದೇವರ ಮೆರವಣಿಗೆಯ ಮತ್ತೊಂದೆ ಕಡೆ ಇಸ್ಲಾಂ ಧರ್ಮದ ಉಳಿವಿಗಾಗಿ ಜೀವತ್ಯಾಗ ಮಾಡಿದ ಹಸನ್–ಹುಸೇನ್‌ರ ನೆನಪಿನಲ್ಲಿ ಇರಾನಿ–ಶಿಯಾ ಮುಸ್ಲಿಮರು ಬೃಹತ್ ಮೆರವಣಿಗೆ ಮೂಲಕ ತಮ್ಮನ್ನು ದಂಡಿಸಿಕೊಂಡು ರಕ್ತವನ್ನು ಹರಿಸಿದರು.

ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶಿಯಾ ಮುಸ್ಲಿಂ ಸಮುದಾಯದ ಯುವಕರು ಸೇರಿದ್ದರು. ಕರ್ಬಾಲಾ ಯುದ್ಧದಲ್ಲಿ ಬಲಿದಾನ ಮಾಡಿದ್ದ ಹಸೇನ್‌–ಹುಸೇನ್‌ ಅವರ ನೆನಪಿಗಾಗಿ ತಮ್ಮ ದೇಹವನ್ನು ಹರಿತವಾದ ಆಯುಧದಿಂದ ದಂಡಿಸಿಕೊಂಡರು. ಇನ್ನೊಂದೆಡೆ ಸುನ್ನಿ ಪಂಗಡದವರು ಉಪವಾಸ ವ್ರತ ಕೈಗೊಂಡರು.

ನಗರದ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಅಲಾಯಿ ಹಾಡುಗಳಿಗೆ ಕುಣಿತ

ಶನಿವಾರ ರಾತ್ರಿ ಜಾಗರಣೆ ವೇಳೆ ಹಸೇನ್– ಹುಸೇನ್ ಮತ್ತು ಅವರ ಮಕ್ಕಳ ಬಲಿದಾನ ಕಥೆಗಳನ್ನು ಕಲಾವಿದರು ಹಾಡುಗಳಲ್ಲಿ ವ್ಯಕ್ತಪಡಿಸಿದರು. ಅಲಾಯಿ ರಿವಾಯತ್ ಪದಗಳೂ ಕೇಳಿಬಂದವು.   ಅಲಾಯಿ ದೇವರು ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿನ ಕೆಂಡದಿಂದ ಮಾಡಿದ ಕೊಂಡದ ಸುತ್ತ ಹಿಂದೂ–ಮುಸ್ಲಿಮರು ಹಲಗೆಯ ನಾದಕ್ಕೆ ಅಲಾಯಿ ಕುಣಿತದ ಹಾಡುಗಳಿಗೆ ಹೆಜ್ಜೆ ಹಾಕಿದರು. ಮೇಳದ ನಾಯಕನ ಮೊಹರಂನ ಹಾಡುಗಳಿಗೆ ಮೇಳದವರೂ ಧ್ವನಿಗೂಡಿಸುತ್ತಾ ಹಲಗೆ ನಾದದ ಲಯಕ್ಕೆ ತಕ್ಕಂತೆ ಕುಣಿದರು. ಒಂದೇ ಬಗೆಯ ಅಂಗಿ ಬನೀನು ಪಂಚೆ ಧರಿಸಿ ಕೋಲಿಗೆ ರಿಬ್ಬನ್‌ ಕಟ್ಟಿ ಕೈಯಲ್ಲಿ ಟವಲ್ ಹಿಡಿದು ಕಾಲಿಗೆ ಗೆಜ್ಜೆ ಹಾಗೂ ಹಣೆಗೆ ರಿಬ್ಬನ್ ಕಟ್ಟಿಕೊಂಡು ಕುಡಿಯುವುದು ಗಮನಸೆಳೆಯಿತು. ಕೆಲವು ಗ್ರಾಮಗಳಲ್ಲಿ ಭಕ್ತರು ಪ್ರಾಣಿ ಬಲಿ ನೀಡುವ ಮೂಲಕ ಹಸನ್ ಹುಸೇನ್ ಇಮಾಮ್ ಕಾಶೀಂ (ದೇವರಿಗೆ) ಅವರಿಗೆ ಹರಕೆ ಸಮರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.