ADVERTISEMENT

ಆಳಂದ: 25 ವರ್ಷಗಳ ಬಳಿಕ ಕೊಲೆ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 4:40 IST
Last Updated 2 ಜುಲೈ 2022, 4:40 IST
   

ಆಳಂದ: ತಾಲ್ಲೂಕಿನ ಹಡಲಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದತ್ತ ಹಡಲಗಿ ಕೊಲೆ ಆರೋಪಿ ಕರೀಂಸಾಬ್‌ನನ್ನು 25 ವರ್ಷಗಳ ಬಳಿಕ ನಿಂಬರ್ಗಾ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಅಕ್ಕಲಕೋಟ ನಿವಾಸಿಯಾಗಿದ್ದ ಕರೀಂಸಾಬ್, ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. 25 ವರ್ಷಗಳಿಂದ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ: 1997ರಲ್ಲಿ ನಡೆದ ಹಡಲಗಿ ಗ್ರಾ.ಪಂ ಅಧ್ಯಕ್ಷ ದತ್ತು ದೊಡ್ಡಮನಿ ಕೊಲೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು. ಕಲಬುರಗಿ ನಗರದಿಂದ ಸ್ವಗ್ರಾಮ ಹಡಲಗಿಗೆ ಮರಳುತ್ತಿದ್ದ ದತ್ತು ಹಡಲಗಿ ಅವರನ್ನು ವೈಜಾಪುರ ಕ್ರಾಸ್ ಬಳಿ ಸುಪಾರಿ ಹಂತಕರಿಂದ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ 12 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಆದರೆ, ದೀರ್ಘ ಕಾಲ ವಿಚಾರಣೆ ನಡೆದು ಕೆಲವರು ಖುಲಾಸೆಯಾದರು. ಪ್ರಮುಖ ಆರೋಪಿ ಕರೀಂ ಸಾಬ್ ಮಾತ್ರ ಪೊಲೀಸರ ಕೈಗೆ ಸಿಕ್ಕಿರಲಿಲ್ಲ.

ADVERTISEMENT

ಟಂಟಂ ಉರುಳಿ ಬಿದ್ದು ಪ್ರಯಾಣಿಕ ಸಾವು
ಆಳಂದ:
ತಾಲ್ಲೂಕಿನ ಹೊನ್ನಳ್ಳಿ ಕ್ರಾಸ್ ಬಳಿ ಟಂಟಂ ಉರುಳಿ ಬಿದ್ದ ಪರಿಣಾಮ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಮುನ್ನೋಳಿ ಗ್ರಾಮದ ನಿವಾಸಿ ಶಾಂತಪ್ಪ ತುಕ್ಕಪ್ಪ ಜಮಾದಾರ(50) ಮೃತರು.

ಪಟ್ಟಣಕ್ಕೆ ಸಂತೆಗೆ ಬಂದು, ಮನೆಗೆ ಮರಳುವ ವೇಳೆ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡ ಇಬ್ಬರು ಪ್ರಯಾಣಿಕರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.