ADVERTISEMENT

ಕಲಬುರಗಿ: ಮಗನನ್ನೇ ಕೊಂದ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 12:37 IST
Last Updated 28 ಅಕ್ಟೋಬರ್ 2025, 12:37 IST
ಕೋರ್ಟ್ (ಸಾಂದರ್ಭಿಕ ಚಿತ್ರ)
ಕೋರ್ಟ್ (ಸಾಂದರ್ಭಿಕ ಚಿತ್ರ)   

ಕಲಬುರಗಿ: ತಂದೆ–ತಾಯಿ ಮಧ್ಯದ ಜಗಳ ಬಿಡಿಸಲು ಬಂದ ಮಗನನ್ನೇ ತಂದೆ ತರಕಾರಿ ಕತ್ತರಿಸುವ ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ತಾಜನಗರದ ಮಹ್ಮದ್ ಯೂಸುಫ್ ವಾಡಿವಾಲೆ (42) ಎಂಬಾತನಿಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹ 10,500 ದಂಡ ವಿಧಿಸಿದೆ.

ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಅಪರಾಧಿ ಮಹ್ಮದ್ ಯೂಸುಫ್ 2024ರ ಮೇ 31ರಂದು ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ. ಈ ಸಂದರ್ಭದಲ್ಲಿ ಏಕೆ ಪದೇ ಪದೇ ತಾಯಿಯೊಂದಿಗೆ ಜಗಳ ತೆಗೆಯುತ್ತೀ ಎಂದು ಮಗ ಅಸ್ರಾರ್ ಅಹ್ಮದ್ (24) ಪ್ರಶ್ನಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಹ್ಮದ್ ಯೂಸುಫ್ ನಿನ್ನ ತಾಯಿಯ ಪರವಾಗಿಯೇ ನನಗೆ ಬುದ್ಧಿವಾದ ಹೇಳಲು ಬರುತ್ತೀಯಾ ಎಂದು ಪ್ರಶ್ನಿಸಿ ಅಡುಗೆ ಮನೆಗೆ ಹೋಗಿ ಚಾಕು ತೆಗೆದುಕೊಂಡು ಮಗನ ಹೊಟ್ಟೆಯ ಎಡಭಾಗ, ರಟ್ಟೆ ಹಾಗೂ ಮುಂಗೈಗೆ ಹೊಡೆದು ಗಾಯಗೊಳಿಸಿದ್ದ. ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಜೂನ್ 3ರಂದು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದನು.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಚೌಕ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರಾಘವೇಂದ್ರ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ADVERTISEMENT

ವಿಚಾರಣೆ ನಡೆಸಿದ ನ್ಯಾಯಾಧೀಶ ಚನ್ನಪ್ಪಗೌಡ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ₹ 10,500 ದಂಡ ವಿಧಿಸಿದರು. ದಂಡದ ಹಣವನ್ನು ಮೃತನ ತಾಯಿಗೆ ಪರಿಹಾರವಾಗಿ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರದ ಪರವಾಗಿ 3ನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ತೇಲಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.