ADVERTISEMENT

ರಾಜ್ಯದಲ್ಲಿ ಕೊಲೆ, ದರೋಡೆ ಹೆಚ್ಚಳ: ಭಾರತಿ ಶೆಟ್ಟಿ ಆರೋಪ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 14:09 IST
Last Updated 23 ಏಪ್ರಿಲ್ 2024, 14:09 IST
ಭಾರತಿ ಶೆಟ್ಟಿ
ಭಾರತಿ ಶೆಟ್ಟಿ   

ಕಲಬುರಗಿ: ‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೊಲೆ, ದರೋಡೆ ಪ್ರಕರಣಗಳು ಹೆಚ್ಚಾಗಿವೆ. ಅದನ್ನು ನಿಯಂತ್ರಣ ಮಾಡಬೇಕಾದ ಗೃಹ ಸಚಿವರು ಗಂಭೀರವಾಗಿ ಪರಿಗಣಿಸದೆ ಉಡಾಫೆ ಉತ್ತರ ನೀಡುತ್ತಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯೆ, ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ ಅವರು ಆರೋಪಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಶೇ 41ರಷ್ಟು ಕೊಲೆ, ಶೇ 31ರಷ್ಟು ದರೋಡೆ ಪ್ರಕರಣಗಳು ಹೆಚ್ಚಾಗಿವೆ. ಬೆಳಗಾವಿ ವಿವಸ್ತ್ರ ಪ್ರಕರಣ, ಹಾವೇರಿ ಅತ್ಯಾಚಾರ, ಹುಬ್ಬಳ್ಳಿ ವಿದ್ಯಾರ್ಥಿನಿಯ ಕೊಲೆ ನಡೆದಿದೆ. ಈ ವಿಷಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ಹೇಳಿದರು.

‘ಸರ್ವ ಜನಾಂಗದ ಶಾಂತಿಯ ತೋಟ ಎಂದು ಭಾಷಣ ಮಾಡುವ ಕಾಂಗ್ರೆಸ್‌ ನಾಯಕರು ಆಳಂದ ಅತ್ಯಾಚಾರ ಪ್ರಕರಣದ ಆರೋಪಿಗೆ ಶಿಕ್ಷೆ ನೀಡುವ ಬದಲು ಆರೋಪಿ ಹುಚ್ಚನೆಂದು ಬಿಂಬಿಸಿ ಪ್ರಕರಣಕ್ಕೆ ಅಂತ್ಯ ಹಾಡಲಾಯಿತು. ಇದೇನಾ ಕಾಂಗ್ರೆಸ್‌ ಸರ್ಕಾರ ನೀಡುತ್ತಿರುವ ರಕ್ಷಣೆ’ ಎಂದು ಪ್ರಶ್ನಿಸಿದರು.

ADVERTISEMENT

‘ಕೇಂದ್ರ ಸರ್ಕಾರ ಜನರ ಆರೋಗ್ಯ ಸುಧಾರಣೆ ದೃಷ್ಟಿಯಿಂದ ಆಯುಷ್ಮಾನ್‌ ಭಾರತ್‌, ಪ್ರತಿ ಕುಟುಂಬಗಳಿಗೆ ಶೌಚಾಲಯ, ಕಿಸಾನ್‌ ಸಮ್ಮಾನ್‌ ಸೇರಿದಂತೆ ಹಲವು ಕಾರ್ಯಕ್ರಮ ಜಾರಿಗೊಳಿಸಿದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಚಂದಮ್ಮ ಪಾಟೀಲ, ಭಾಗೀರಥಿ ಗುನ್ನಾಪುರ, ಶೋಭಾ ಬಾಗೇವಾಡಿ, ಸಾವಿತ್ರಿ ಕುಳಗೇರಿ, ಸುಜ್ಞಾನಿ ಪೊದ್ದಾರ, ಸುವರ್ಣಾ ವಾಡೆ ಇತರರು ಉಪಸ್ಥಿತರಿದ್ದರು.

‘ಅಂಕಿಅಂಶಗಳ ಮೇಲೆ ಹಣ ಬಿಡುಗಡೆ’
‘ಕೇಂದ್ರ ಸರ್ಕಾರ ತನ್ನ ಪಾಲಿನ ಬರ ಪರಿಹಾರ ಹಣ ರಾಜ್ಯ ಸರ್ಕಾರ ನೀಡುವ ಅಂಕಿ ಅಂಶಗಳ ಮೇಲೆ ಬಿಡುಗಡೆ ಮಾಡುತ್ತದೆ. ಆದರೆ ಕಾಂಗ್ರೆಸ್‌ನವರು ರಾಜಕೀಯ ಮಾಡುತ್ತಿದ್ದಾರೆ’ ಎಂದು ಭಾರತಿ ಶೆಟ್ಟಿ ಆರೋಪಿಸಿದರು. ಬರ ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ‘ಕೇಂದ್ರದಲ್ಲಿ ಈ ಮೊದಲು ಕಾಂಗ್ರೆಸ್‌ ಸರ್ಕಾರವಿದ್ದಾಗ ಶೇ 100ರಷ್ಟು ಬರ ಪರಿಹಾರ ಕೇಳಿದರೆ ಶೇ 5ರಷ್ಟು ಹಣ ಕೊಡುತ್ತಿದ್ದರು. ಆದರೆ ಮೋದಿ ಸರ್ಕಾರದ ಅವಧಿಯಲ್ಲಿ ಶೇ 25ರಿಂದ 35ರಷ್ಟು ಹಣ ಬಿಡುಗಡೆ ಮಾಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.