ADVERTISEMENT

ಪಾಲಿಕೆ ಬಜೆಟ್‌ಗೆ ನಾಗರಿಕರ ಸಲಹೆ

‘ನನ್ನ ನಗರ ನನ್ನ ಬಜೆಟ್‌’ ಸಮೀಕ್ಷಾ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 15:18 IST
Last Updated 2 ಫೆಬ್ರುವರಿ 2023, 15:18 IST
ಮಹಾನಗರ ಪಾಲಿಕೆ ಕಚೇರಿ ಮುಂಭಾಗ ಗುರುವಾರ ‘ನನ್ನ ನಗರ ನನ್ನ ಬಜೆಟ್’ ಸಮೀಕ್ಷಾ ಅಭಿಯಾನಕ್ಕೆ ಗಣ್ಯರು ಚಾಲನೆ ನೀಡಿದರು
ಮಹಾನಗರ ಪಾಲಿಕೆ ಕಚೇರಿ ಮುಂಭಾಗ ಗುರುವಾರ ‘ನನ್ನ ನಗರ ನನ್ನ ಬಜೆಟ್’ ಸಮೀಕ್ಷಾ ಅಭಿಯಾನಕ್ಕೆ ಗಣ್ಯರು ಚಾಲನೆ ನೀಡಿದರು   

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜನಾಗ್ರಹ ಸಂಸ್ಥೆಯು ‘ನನ್ನ ನಗರ ನನ್ನ ಬಜೆಟ್‌’ ಎಂಬ ಸಮೀಕ್ಷಾ ಅಭಿಯಾನ ಕೈಗೊಂಡಿದೆ. ಮಹಾನಗರ ಪಾಲಿಕೆ ಮಂಡಿಸಲಿರುವ 2023–24ನೇ ಸಾಲಿನ ಬಜೆಟ್‌ನಲ್ಲಿ ತಮ್ಮ ಬಡಾವಣೆಗೆ ಅವಶ್ಯವಿರುವ ಸೌಲಭ್ಯಗಳ ಬಗ್ಗೆ ನಾಗರಿಕರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ಬೇಡಿಕೆಗಳ ಪಟ್ಟಿ ಸಲ್ಲಿಸಬಹುದು.

ಅಭಿಯಾನದ ಭಾಗವಾಗಿ ‘ನನ್ನ ನಗರ ನನ್ನ ಬಜೆಟ್’ ವಾಹನವು ಪಾಲಿಕೆ ವ್ಯಾಪ್ತಿಯ ಎಲ್ಲಾ ಬಡಾವಣೆಗಳಲ್ಲೂ ಸಂಚರಿಸಲಿದೆ. ಫೆ.2ರಿಂದ ಶುರುವಾಗಿರುವ ಅಭಿಯಾನ ಫೆ.12 ರವರೆಗೆ ನಡೆಯಲಿದೆ. ಮೊದಲ ದಿನ ಒಂದನೇ ವಾರ್ಡ್‌ನಿಂದ ಆರನೇ ವಾರ್ಡ್‌ಗಳಲ್ಲಿ ಅಭಿಯಾನ ನಡೆಯಿತು. ಎಲ್ಲಾ 55 ವಾರ್ಡ್‌ಗಳಲ್ಲಿ ಸಂಘ ಸಂಸ್ಥೆಗಳ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಿದ್ದಾರೆ.

ಪ್ರತಿ ಬಡಾವಣೆಯಲ್ಲಿ ‘ನಾಗರಿಕ ಸಲಹೆ ಸ್ವೀಕೃತಿ’ ಎಂಬ ಪ್ರಶ್ನಾವಳಿಯ ನಮೂನೆಯನ್ನು ನೀಡಿ ನಾಗರಿಕರಿಂದಲೇ ಭರ್ತಿ ಮಾಡಿಸಿಕೊಳ್ಳಲಾಗುತ್ತದೆ. ನಾಗರಿಕರು ಹೆಸರು, ವಾರ್ಡ್‌ ಸಂಖ್ಯೆ, ಮೊಬೈಲ್‌ ಸಂಖ್ಯೆ, ಸಂಘ ಸಂಸ್ಥೆಯ ಹೆಸರು ಭರ್ತಿ ಮಾಡಬೇಕು. ನಂತರ ಕಾಲೊನಿಗೆ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ಆದ್ಯತೆ ಮೇಲೆ ತಿಳಿಸಬೇಕು.

ADVERTISEMENT

ಪಾದಚಾರಿ ಮಾರ್ಗ, ಬೀದಿ ದೀಪ ನಿರ್ವಹಣೆ, ರಸ್ತೆಗಳಿಗೆ ಸೂಚನಾ ಫಲಕ, ಒಳಚರಂಡಿ ನಿರ್ಮಾಣ/ ದುರಸ್ತಿ, ಸಾರ್ವಜನಿಕ ಶೌಚಾಲಯ, ಕಸ ಸಂಗ್ರಹಿಸುವ ಪ್ರಕ್ರಿಯೆ ಸೇರಿದಂತೆ ಇನ್ನಿತರ ಮೂಲಸೌಲಭ್ಯದ ಕುರಿತು ನಾಗರಿಕರು ಸಲಹೆ ನೀಡಬಹುದು.

ಆನ್‌ಲೈನ್‌ ಮೂಲಕವೂ ಅಭಿಯಾನದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದು, mycitymybudget.in ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗಿ, ಕಲಬುರಗಿ ಪಾಲಿಕೆಯನ್ನು ಆಯ್ಕೆ ಮಾಡಿಕೊಂಡು ಸಲಹೆ ದಾಖಲಿಸಬಹುದು.

ಸಮೀಕ್ಷೆ ನಂತರ ಮುಂದೇನು?: ನಾಗರಿಕರ, ಸಂಘ ಸಂಸ್ಥೆಗಳಿಂದ ಸಂಗ್ರಹಿಸಿದ ಅಭಿಪ್ರಾಯ, ಸಲಹೆಗಳನ್ನು ಅವಲೋಕನ ನಡೆಸಿ ಸಮೀಕ್ಷೆಯ ಸಮಗ್ರ ಮಾಹಿತಿಯನ್ನು ಫೆ.20ರಂದು ಕಲಬುರಗಿ ಮಹಾನಗರ ಪಾಲಿಕೆಗೆ ಒಪ್ಪಿಸಲಾಗುತ್ತದೆ. ಮಹಾನಗರ ಪಾಲಿಕೆಯು ಬಜೆಟ್ ಸಿದ್ಧಪಡಿಸುವಾಗ ನಾಗರಿಕರ ಬೇಡಿಕೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಿದೆ ಎಂದು ಪಾಲಿಕೆ ಎಂಜಿನಿಯರ್‌ ತಿಳಿಸಿದರು.

ನಗರದಲ್ಲಿ ಮೊದಲ ಬಾರಿ: ಜನಾಗ್ರಹ ಸಂಸ್ಥೆಯಿಂದ ಬೆಂಗಳೂರಿನಲ್ಲಿ 7 ವರ್ಷಗಳಿಂದ ಸಮೀಕ್ಷಾ ಅಭಿಯಾನ ನಡೆಯುತ್ತಿದೆ. ಮಂಗಳೂರಿನಲ್ಲಿ 2 ವರ್ಷಗಳಿಂದ ಅಭಿಯಾನ ನಡೆದಿದೆ. ಕಲಬುರಗಿ ಪಾಲಿಕೆ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿ ಸಮೀಕ್ಷೆ ಕೈಗೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗೆ 9964890856 ಸಂಪರ್ಕಿಸಬಹುದು.

‘ಜನರ ಬೇಡಿಕೆ ಅರಿಯಲು ಸಹಕಾರಿ’

‘ನನ್ನ ನಗರ ನನ್ನ ಬಜೆಟ್ ಸಮೀಕ್ಷಾ ಅಭಿಯಾನವು ಜನರ ಬೇಡಿಕೆಗಳನ್ನು ಅರಿಯಲು ಸಹಕಾರಿಯಾಗಲಿದೆ. ಇದರಿಂದ ಬಜೆಟ್‌ನಲ್ಲಿ ನಾಗರಿಕರಿಗೆ ಯಾವೆಲ್ಲಾ ಸೌಲಭ್ಯಗಳನ್ನು ಆದ್ಯತೆ ಮೇಲೆ ಒದಗಿಸಬೇಕು ಎಂಬುದನ್ನು ತಿಳಿಯಲು ಪಾಲಿಕೆಗೆ ಸುಲಭವಾಗಲಿದೆ’ ಎಂದು ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಎಸ್‌.ಪಾಟೀಲ ಅಭಿಪ್ರಾಯಪಟ್ಟರು.

ಮಹಾನಗರ ಪಾಲಿಕೆ ಕಚೇರಿ ಮುಂಭಾಗ ಗುರುವಾರ ‘ನನ್ನ ನಗರ ನನ್ನ ಬಜೆಟ್’ ಸಮೀಕ್ಷಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ವಿಕಾಸ ಸಜ್ಜನ್, ಜನಾಗ್ರಹ ಸಂಸ್ಥೆಯ ಕಾರ್ಯಕ್ರಮ ಮುಖ್ಯಸ್ಥ ಮಂಜುನಾಥ ಹಂಪಾಪುರ, ಹಿರಿಯ ಸಂಯೋಜಕ ಶಿವಶಂಕರ ಡಿ.ಐಹೊಳಿ, ನಗರ ಸಂಯೋಜಕ ಶ್ರವಣಯೋಗಿ ಹಿರೇಮಠ, ಸಂಘ ಸಂಸ್ಥೆಗಳ ಮುಖಂಡರಾದ ಜಗನ್ನಾಥ ರಾಚೋಟಿ, ಡಾ.ಜೈಭೀಮ್ ಧರ್ಗಿ, ಮೋದಿನ್ ಪಟೇಲ್, ಬಿ.ಎಂ.ರಾವುರ್, ಸಿದ್ದರಾಮ ಯಳ್ವಂತಗಿ, ಜಗನ್ನಾಥ ರಾಚೋಟಿ, ಶ್ರೀದೇವಿ ಬಾಸುತ್ಕರ್, ಮಂಜುಳಾ, ಬಸವರಾಜ್ ಮೊರಬದ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.