ADVERTISEMENT

ಕಲಬುರ್ಗಿ: ಉಂಡಿ ತಿನ್ನುತ.. ಜೋಕಾಲಿ ಜೀಕುತ...

ಜಿಲ್ಲೆಯಲ್ಲಿ ಮನೆ ಮಾಡಿದ ನಾಗಪಂಚಮಿ ಸಂಭ್ರಮ, ಹುತ್ತಗಳಿಗೆ ಪೂಜೆ, ಮೂರ್ತಿಗಳಿಗೆ ಹಾಲೆರೆದ ವನಿತೆಯರು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 3:26 IST
Last Updated 14 ಆಗಸ್ಟ್ 2021, 3:26 IST
ಕಲಬುರ್ಗಿಯ ಹೊಸ ಜೇವರ್ಗಿ ರಸ್ತೆಯ ಸಂತೋಷ ಬಡಾವಣೆಯ ದೇವಸ್ಥಾನದಲ್ಲಿ ಶುಕ್ರವಾರ ಮಹಿಳೆಯರು, ಮಕ್ಕಳು ನಾಗಮೂರ್ತಿಗೆ ಹಾಲೆರೆದರು
ಕಲಬುರ್ಗಿಯ ಹೊಸ ಜೇವರ್ಗಿ ರಸ್ತೆಯ ಸಂತೋಷ ಬಡಾವಣೆಯ ದೇವಸ್ಥಾನದಲ್ಲಿ ಶುಕ್ರವಾರ ಮಹಿಳೆಯರು, ಮಕ್ಕಳು ನಾಗಮೂರ್ತಿಗೆ ಹಾಲೆರೆದರು   

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯ ಬಹುಪಾಲು ಕಡೆ ಶುಕ್ರವಾರ ಕೂಡ ನಾಗರ ಪಂಚಮಿ ಸಡಗರ ಮನೆ ಮಾಡಿತು. ಕೆಲವು ಕಡೆಗಳಲ್ಲಿ ಗುರುವಾರವೇ ಹಬ್ಬ ಮಾಡಿದ್ದರೂ ಶುಕ್ರವಾರ ಸಾರ್ವತ್ರಿಕ ಆಚರಣೆ ಎಲ್ಲೆಡೆ ಕಂಡುಬಂತು.

ಶ್ರಾವಣ ಮಾಸದ ಪಲ್ಲವಿ ಎಂದೇ ಹೇಳಲಾಗುವ ನಾಗಪಂಚಮಿ ಹೆಣ್ಣು ಮಕ್ಕಳ ಅಚ್ಚುಮೆಚ್ಚಿನ ಹಬ್ಬ. ನಸುಕಿನಲ್ಲೇ ಎದ್ದು ಮನೆಗಳನ್ನು ಹಸನುಗೊಳಿಸಿದ ವನಿತೆಯರು ಅಂಗಳಲ್ಲಿ ನಾಗರ ಹಾವಿನ ಬಣ್ಣಬಣ್ಣದ ರಂಗೋಲಿ ಬಿಟ್ಟರು. ಬೆಳಿಗ್ಗೆ 6ರ ಹೊತ್ತಿಗೆ ಕುಟುಂಬ ಸಮೇತರಾಗಿ ಸಮೀಪದ ದೇವಸ್ಥಾನಗಳಿಗೆ ತೆರಳಿ ಪೂಜೆ ನೆರವೇರಿಸಿದರು.‌ ಮಧ್ಯಾಹ್ನ ಬಂಧು– ಮಿತ್ರರನ್ನು ಆಹ್ವಾನಿಸಿ ಅಳ್ಳಿಟ್ಟು, ತಂಬಿಟ್ಟು, ಬಗೆಬಗೆಯ ಉಂಡಿಗಳನ್ನು ಮಾಡಿ ಭರ್ಜರಿ ಭೋಜನ ಸವಿದರು. ಹಲವರು ಸಂಜೆಯ ವೇಳೆಗೆ ಸಮೀಪದ ಉದ್ಯಾನಗಳಿಗೆ ತೆರಳಿ ಜೋಕಾಲಿ ಕಟ್ಟಿ ಜೀಕಿದರು. ಹಳ್ಳಿಗಳ ಜನರಂತೂ ಊರ ಹೊರಗಿನ ಹೊಲ, ಶಾಲಾ ಮೈದಾನಗಳಲ್ಲಿ ಜೋಕಾಲಿ ಕಟ್ಟಿ ಸಂಭ್ರಮಿಸಿದರು.

ಹಬ್ಬಕ್ಕಾಗಿ ತವರಿಗೆ ಬಂದ ವನಿತೆಯರೆಲ್ಲ ಬೆಳಿಗ್ಗೆಯೇ ಹೊಸ ಉಡುಗೆ ಉಟ್ಟು ದೇವಸ್ಥಾನಗಳ ಮುಂದೆ ಹಾಜರಾದರು. ದೇವಸ್ಥಾನಗಳ ಆವರಣದಲ್ಲಿ ಇರುವ ನಾಗರ ಕಲ್ಲು ಹಾಗೂ ಹುತ್ತಗಳಿಗೆ ಹಾಲೆರೆದು, ಪೂಜೆ ಸಲ್ಲಿಸಿದರು.ಶಕ್ತಿನಗರದಲ್ಲಿ ಅರಳಿ ಮರದ ಕೆಳಗೆ ಇರುವ ನಾಗರ ದೇವಸ್ಥಾನ, ಚೌಡೇಶ್ವರಿ ಕಾಲೊನಿಯ ಮಾಣಿಕೇಶ್ವರ ದೇವಸ್ಥಾನ, ಹೊಸಜೇವರ್ಗಿ ರಸ್ತೆಯ ಸಂತೋಷ ಬಡಾವಣೆಯ ದೇವಸ್ಥಾನದಲ್ಲಿ ಮಹಿಳೆಯರು ನಾಗಪ್ಪನ ಮೂರ್ತಿಗೆ ಅಲಂಕಾರ ಮಾಡಿದ್ದು ಗಮನ ಸೆಳೆಯಿತು. ಹಲವರು ಭಕ್ತಿ ಗೀತೆ ಹಾಡಿದರೆ, ಯುವತಿಯರು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಎಂಎಸ್‌ಕೆ ಮಿಲ್ ರಸ್ತೆಯಲ್ಲಿರುವ ಐಟಿಐ ಕಾಲೇಜು ಹಿಂಭಾಗ, ಶಾಂತಿನಗರ ಬಡಾವಣೆ, ಗಂಗಾನಗರ, ಶಕ್ತಿನಗರ, ಬ್ರಹ್ಮಪುರ, ವಿಠಲ ನಗರ, ಲಾಳಗೇರಿ, ಐವಾನ್‌ ಈ ಶಾಯಿ ಪ್ರದೇಶ... ಮುಂತಾದೆಡೆ ಇರುವ ನಾಗರ ಹಾವಿನ ಹುತ್ತಗಳಿಗೂ ಜನ ಪೂಜೆ ಸಲ್ಲಿಸಿದರು. ಬೆಳಿಗ್ಗೆಯೇ ಹುತ್ತ ಹುಡುಕುತ್ತ ಕುಟುಂಬ ಸಮೇತರಾಗಿ ಬಂದ ಮಹಿಳೆಯರು ಅರಿಸಿನ, ಕುಂಕುಮ ಹಚ್ಚಿ, ಹೂಮಾಲೆ, ಅಕ್ಷತೆ ಹಾಕಿ, ಊದುಬತ್ತಿ ಬೆಳಗಿ ಪೂಜೆ ಸಲ್ಲಿಸಿದರು. ಹುತ್ತಿನ ಸುತ್ತ ದಾರ ಸುತ್ತಿದ ಕೆಲವರು ಹರಕೆ ತೀರಿಸದರು. ಇಲ್ಲಿನ ಚೌಡೇಶ್ವರಿ ಕಾಲೊನಿಯಲ್ಲಿರುವ ಮಾತಾ ಮಾಣಿಕೇಶ್ವರಿ ದೇವಸ್ಥಾನದ ಆವರಣದಲ್ಲಿ ಯುವತಿಯರು ಬೆಳಿಗ್ಗೆಯೇ ಜೋಕಾಲಿಯ ಸಂಭ್ರಮ ಶುರು ಮಾಡಿದರು. ಓರಿಗೆಯ ಗೆಳತಿಯರು, ಗೃಹಿಣಿಯರು, ಹಿರಿಯ ಸೇರಿಕೊಂಡು ಖುಷಿಪಟ್ಟರು.‌ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿರುವ ನಾಗರ ಮೂರ್ತಿಗೆ ಪೂಜೆ ಸಲ್ಲಿಸಲು ಭಕ್ತರು ಸರದಿ ಸಾಲಿನಲ್ಲಿ ನಿಂತರು. ಉಳಿದಂತೆ,ಹಳೆ ಜೇವರ್ಗಿ ರಸ್ತೆಯ ಮುದ್ದಿ ಹನುಮಾನ್‌ ಮಂದಿರ, ಜ್ಯೋತಿರ್ಲಿಂಗ ದೇವಸ್ಥಾನ, ಕೋರಂಟಿ ಹನುಮಾನ್‌ ಮಂದಿರ, ರಾಮ ಮಂದರಿ,ಮರಗಮ್ಮ, ಶಿವಲಿಂಗ ದೇವಾಲಯಗಳಲ್ಲೂ ಜನದಟ್ಟಣೆ ಕಂಡುಬಂತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.